Advertisement

ಬಾಳೆ ಬೆಳೆಗಾರನ ಬಾಳಿಗೆ ಬೆಂಕಿ ಇಟ್ಟ ಗಾಳಿ ಮಳೆ

03:25 PM Apr 27, 2023 | Team Udayavani |

ಎಚ್‌.ಡಿ.ಕೋಟೆ: ಗಾಳಿ ಮಳೆಯಿಂದ ನನ್ನ ಬೇಸಾಯ ಹಾಳಾಗಿ, ಬಾಳೇ ಬರಿದಾಗಿ ಹೋಯ್ತಲ್ಲ ಶಿವನೇ.., ಸಾಲಗಾರರ ಸಾಲ ಹೇಗಪ್ಪಾ ಕೊಡ್ಲಿ ಭಗವಂತ… ಹೆಂಡತಿ ಮಕ್ಕಳನ್ನು ಹೇಗೆ ಸಾಕಲಿ ದೇವ್ರೇ.. ಇದು ಕೆಂಪನಹಾಡಿಯ ರೈತ ಎಂ.ಡಿ.ದೇವರಸೇಗೌಡನಿಂದ ಬಾಯಿಂದ ಕೇಳಿ ಬಂದ ಆಕ್ರಂದನ.

Advertisement

ತಾಲೂಕಿನ ಎನ್‌.ಬೇಗೂರು ಗ್ರಾಪಂ ವ್ಯಾಪ್ತಿಯ ಕೆಂಪನಹಾಡಿಯ ಎಂ.ಡಿ.ದೇವರಸೇಗೌಡ, ಅದೇ ಹಾಡಿಯ ಕಾಳಯ್ಯಗೆ ಸೇರಿದ 3 ಎಕರೆ ಜಮೀನನ್ನು ವರ್ಷದ ಅವಧಿಗೆ ಭೋಗ್ಯಕ್ಕೆ ಪಡೆದು ಸಾಲ ಮಾಡಿ 8 ರಿಂದ 10 ಲಕ್ಷ ರೂ. ಬಂಡವಾಳ ಹಾಕಿ ಬಾಳೆ ಬೆಳೆ ಬೆಳೆದಿದ್ದರು. ದೇವರಸೇಗೌಡರ ಶ್ರಮಕ್ಕೆ ಪ್ರತಿಫಲವಾಗಿ ಬೆಳೆ ಕೂಡ ಉಲುಸಾಗಿಯೇ ಬಂದಿತ್ತು. ಬಾಳೆಗೊನೆ ಬಿಟ್ಟಿತ್ತು. ಇನ್ನೇನು ತಿಂಗಳ ಅಂತರದಲ್ಲಿ ಬೆಳೆ ಕೊಯ್ಲು ಮಾಡಬೇಕು ಅನ್ನುವಷ್ಟರಲ್ಲಿ ಸೋಮವಾರ ಬಿರುಗಾಳಿ ಸಹಿತ ಮಳೆ ಇಡೀ ಕುಟುಂಬದ ಆಸೆಯನ್ನು ನುಚ್ಚುನೂರು ಮಾಡಿತು.

ನೆಲಕ್ಕುರುಳಿದ ಬಾಳೆ: ಲಕ್ಷಾಂತರ ರೂ. ಸಾಲ ಮಾಡಿ ಬೆವರು ಹರಸಿ ಬೆಳೆ ಬೆಳೆಯಲಾಗಿತ್ತು. ನಿರೀಕ್ಷೆಯಂತೆ ಫ‌ಸಲು ಉತ್ತಮವಾಗಿ ಬಂದಿದ್ದರಿಂದ ಮಾಡಿದ್ದ ಸಾಲ ತೀರಿಸಿ, ಜಮೀನಿನ ಮಾಲಿಕರಿಗೆ ಗುತ್ತಿಗೆ ಹಣ ನೀಡಿ, ಉಳಿದದ್ದರಲ್ಲಿ ನೆಮ್ಮದಿಯಿಂದ ಸಂಸಾರ ಸಾಗಿಸೋಣ ಎಂದುಕೊಂಡಿದ್ದ ದೇವರಸೇಗೌಡ ಲೆಕ್ಕಾಚಾರವನ್ನು ಬಿರುಗಾಳಿ ಸಹಿತ ಮಳೆ ತಲೆಕೆಳಗಾಗುವಂತೆ ಮಾಡಿತು. ಗೊನೆ ಬಿಟ್ಟಿದ್ದ ಬಾಳೆ ಗಿಡಗಳು ಮುರಿದು ನೆಲಕ್ಕುರುಳಿವೆ. ಇದರಿಂದ ರೈತನ ವರ್ಷದ ಶ್ರಮ, ಬಂಡವಾಳ ಎಲ್ಲವೂ ಮಳೆ ಗಾಳಿಯಲ್ಲಿ ಹಾರಿಹೋಗಿದೆ.

ಮನಕಲಕಿದ ರೈತನ ಕಣ್ಣೀರು: ಬಾಳೆ ನೆಲಕ್ಕುರುಳಿದ್ದರಿಂದ ಕಂಗಾಲಾದ ರೈತ, ಜಮೀನಿನಲ್ಲಿ ಮಾನಸಿಕ ಅಸ್ವಸ್ಥನಂತೆ, ಅತ್ತಿಂದಿತ್ತ ಸಂಚರಿಸುತ್ತ ಮುರಿದು ಬಿದ್ದ ಬಾಳೆ ಗಿಡಗಳನ್ನು ಮಕ್ಕಳಂತೆ ತಬ್ಬಿಕೊಂಡು ಸಂಕಟಪಡುತ್ತಿದ್ದ ದೃಶ್ಯ ನೆರಹೊರೆಯವರ ಮನ ಕಲಕುವಂತೆ ಇತ್ತು.

ಕಂಗಾಲು: ಬೆಳೆ ನಾಶದಿಂದ ದಿಕ್ಕು ತೋಚದೆ, ಜಮೀನಿ ನಲ್ಲಿ ತಲೆ ಮೇಲೆ ಕೈಹೊತ್ತು ದೇವರಿಗೆ ಹಿಡಿಶಾಪ ಹಾಕುತ್ತಾ, ನಾ ಹೇಗೆ ಸಾಲ ತೀರಿಸಲಿ, ಜಮೀನಿನ ಮಾಲಿಕರಿಗೆ ಗುತ್ತಿಗೆ ಹಣ ಹೇಗೆ ನೀಡಲಿ, ನನ್ನ ಹೆಂಡತಿ ಮಕ್ಕಳನ್ನು ಹೇಗೆ ಪೋಷಿಸಲಿ, ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಬಂತಲ್ಲ ಭಗವಂತ ಎಂದು ಕಣ್ಣೀರು ಹಾಕಿದರು.

Advertisement

ಅಲ್ಪ ಪರಿಹಾರ ನೀಡುವ ಸರ್ಕಾರ: ರೈತರ ಬೆಳೆ ಹಾನಿಯಾದಾಗ ಸರ್ಕಾರ ವೈಜ್ಞಾನಿಕ ಬೆಳೆ ನೀಡುತ್ತಿಲ್ಲ. ಪ್ರತಿ ಎಕರೆ ಕೇವಲ 1ರಿಂದ 2 ಸಾವಿರ ರೂ. ಪರಿಹಾರ ಸಿಗುತ್ತದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಆಗಿದೆ. ಲಕ್ಷಾಂತರ ರೂ. ಬಂಡವಾಳ ಹೂಡಿಕೆ ಮಾಡಿ, ಇಡೀ ವರ್ಷ ಶ್ರಮವಹಿಸಿ ಬೆಳೆದ ಬೆಳೆ ಕೆಲವೇ ಕ್ಷಣದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಾಶವಾಗುತ್ತದೆ. ಸರ್ಕಾರ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಬೆಳೆನಷ್ಟಕ್ಕೆ ತಕ್ಕ ಪರಿಹಾರ ನೀಡಬೇಕೆನ್ನುವುದು ರೈತ ಮುಖಂಡರ ಒತ್ತಾಯ.

ನೆರೆಹೊರೆಯ ರೈತರು ಸದ್ಯ ಬಾಳೆ ಬೆಳೆಗಾರ ದೇವರಸೇಗೌಡರನ್ನು ಸಮಾಧಾನ ಪಡಿಸಿದ್ದು, ಪ್ರಕೃತಿ ವಿಕೋಪದಿಂದ ಕೆಲವೇ ಕ್ಷಣದಲ್ಲಿ ಅತಂತ್ರನಾಗುವ ಹಂತ ತಲುಪಿದ್ದಾನೆ. ಈ ಬಾರಿ ತಾಲೂಕಿನಲ್ಲಿ 4-5 ಬಾರಿ ಮಳೆ ಆಗಿದೆಯಾದರೂ, ಪ್ರತಿ ಬಾರಿ ಸಿಡಿಲಿಗೆ 2 ಜೀವ ಬಲಿ ಜೊತೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದು ರೈತರನ್ನು ಕಂಗೆಡುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next