ರಬಕವಿ-ಬನಹಟ್ಟಿ: ಬನಹಟ್ಟಿಯ ನಾಲ್ಕು ಜನರು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಸ್ಟೇಶನರಿ ಅಂಗಡಿಯನ್ನು ಇಟ್ಟುಕೊಂಡಿರುವ ಸೋಮಶೇಖರ ಹಿರೇಮಠರ ಮಗಳು ದೀಪಾ ಹಿರೇಮಠ ಆಯ್ಕೆಯಾಗುವುದರ ಮೂಲಕ ರಾಜ್ಯಕ್ಕೆ 14 ನೇ ಸ್ಥಾನ ಪಡೆದುಕೊಂಡಿದ್ದಾರೆ. ಸ್ಥಳೀಯ ಎಸ್ಟಿಸಿ ಕಾಲೇಜಿನಲ್ಲಿ 2016ರಲ್ಲಿ ಬಿಎ ಪದವಿ ಪಡೆದುಕೊಂಡಿದ್ದ ದೀಪಾ ಅರ್ಥಶಾಸ್ತ್ರ ವಿಷಯದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಬಂಗಾರದ ಪಡೆದುಕೊಂಡಿದ್ದರು. ಮುಂದೆ ಕೆಎಎಸ್ ಮಾಡುವ ಗುರಿಯನ್ನು ದೀಪಾ ಹಿರೇಮಠ ಹೊಂದಿದ್ದಾರೆ. ಆರು ತಿಂಗಳುಗಳ ಕಾಲ ಧಾರವಾಡದಲ್ಲಿದ್ದುಕೊಂಡು ಯಾವುದೆ ಕೋಚಿಂಗ್ ಕ್ಲಾಸ್ಗೆ ಹೋಗದೆ ಕೋಣೆಯಲ್ಲಿ ಕುಳಿತುಕೊಂಡು ಓದಿದ್ದರು.
ಸಾಧಿಯಾ ಗುರ್ಲ್ ಹೊಸೂರ ಬಿ.ಕಾಮ್ ಪದವಿಧರೆ. 2019ರಲ್ಲಿ ಬಿ.ಕಾಮ್ ಪದವಿಯನ್ನು ಮುಗಿಸಿದ ಸಾಧಿಯಾ ಬನಹಟ್ಟಿಯ ಮನೆಯಲ್ಲಿ ಕುಳಿತುಕೊಂಡು ಓದಿದ್ದರು. ತಂದೆ ಅಬೂಬಕರ್ ಕಾರ್ಯಕ್ರಮಗಳಲ್ಲಿ ಪೆಂಡಾಲ ಹಾಕುವ ಕಾರ್ಯವನ್ನು ಮಾಡುತ್ತಾರೆ. ರಾಜ್ಯಕ್ಕೆ 62 ಸ್ಥಾನ ಪಡೆದುಕೊಂಡಿರುವ ಸಾಧಿಯಾ 22 ವಯಸ್ಸಿನಲ್ಲಿಯೇ ಪಿಎಸ್‌ಐ ಹುದ್ದೆಯನ್ನು ಅಲಂಕರಿಸಿರುವುದು ತಂದೆ ತಾಯಿಗಳಿಗೆ ಅಭಿಮಾನವನ್ನುಂಟು ಮಾಡಿದೆ.
ಹೊಟೇಲ್ ಉದ್ದಿಮೆದಾರರ ಮಗನಾದ ಅಕ್ಷಯ ದೇವಾಡಿಗ ಸದ್ಯ ಗದಗದಲ್ಲಿ ಕಾರ್ಮಿಕ ವಿಮಾ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿಯಾಗಿ ಅವರು ಪ್ರಥಮ ದರ್ಜೆ ಗುಮಾಸ್ತ ಪರೀಕ್ಷೆಯನ್ನು ಕೂಡಾ ಪಾಸಾಗಿದ್ದಾರೆ. ಈಗ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ರಾಜ್ಯಕ್ಕೆ 83 ನೇ ಸ್ಥಾನ ಪಡೆದುಕೊಂಡಿರುವ ಅಕ್ಷಯ ದೇವಾಡಿಗ ಬಿ.ಕಾಮ್ ಪದವಿಧರರು.
ಬೆಂಗಳೂರಿನಲ್ಲಿ ಬಿಬಿಎ ಎಲ್‌ಎಲ್‌ಬಿ ಮುಗಿಸಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಪುನೀತ ಶಿರಹಟ್ಟಿ ಅಂಗನವಾಡಿ ಶಿಕ್ಷಕಿಯ ಮಗ. ಬಡತನದಲ್ಲಿ ಅರಳಿದ ಪ್ರತಿಭೆ. ಬೆಂಗಳೂರಿನ ವಿಜಯನಗರದಲ್ಲಿರುವ ರೇಡಿಯಂಟ್ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದ ಪುನೀತ ರಾಜ್ಯಕ್ಕೆ 188 ನೇ ಸ್ಥಾನ ಪಡೆದುಕೊಂಡಿದ್ದಾರೆ.