ಬನಹಟ್ಟಿ; ನಗರದ ಲಕ್ಷ್ಮೀ ನಗರದ ಬಡಾವಣೆಯ ಹೊರವಲಯದಲ್ಲಿರುವ ನೇಕಾರ ಭವನ ಅವ್ಯವಸ್ಥೆ ಗೂಡಾಗಿದ್ದು, ಕಾಟಾಚಾರಕ್ಕೆ ಉದ್ಘಾಟನೆಗೊಂಡು ಇದೀಗ ಹೇಳುವವರು ಕೇಳುವವರಿಲ್ಲದೆ ಬೇಕಾಬಿಟ್ಟಿಯಾಗಿ ಉಪಯೋಗಿಸುವಂತಾಗಿದೆ.
2016ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ನೇಕಾರ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿತ್ತು. 2017ರ ಡಿಸೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕನ್ನಡ ಭವನ ಉದ್ಘಾಟನೆ ಸಹಿತ ಸ್ಥಳೀಯ ಎಸ್‌ಆರ್‌ಎ ಮೈದಾನದಲ್ಲಿ ಸಾಮೂಹಿಕ ವಾಗಿ ಒಟ್ಟು 68ಕ್ಕೂ ಹೆಚ್ಚು ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಉದ್ಘಾಟನೆಗೊಂಡು ಒಂದೂವರೆ ವರ್ಷ ಕಳೆದರೂ ಇದು ಯಾವ ಇಲಾಖೆಗೆ ಸಂಬಂಧಿಸಿದ್ದು ? ಇಲ್ಲಿನ ಕಾರ್ಯ ಚಟುವಟಿಕೆಗಳ ಕ್ರಿಯೆ ಏನು? ಸೇರಿದಂತೆ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಆರಂಭದ ದಿನಗಳಲ್ಲಿ ಕಲ್ಲಿನಲ್ಲಿ ಕೆತ್ತಿಸಿಟ್ಟ ಇಲ್ಲಿದ್ದ ನಾಮಫಲಕವೂ ಸಹ ಮಾಯವಾಗಿದೆ. ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ನೇಕಾರರು ತಮ್ಮ ಸಮಸ್ಯೆ, ಸಭೆ, ಸಹಾಯಕ್ಕಾಗಿ ನೇಕಾರರ ಸಂಗಮಕ್ಕೆ ನಿರ್ಮಿತಗೊಂಡಿರುವ ಈ ನೇಕಾರ ಭವನ ಇಂದಿಗೂ ಸಾರ್ವಜನಿಕ ಅನುಕೂಲಕ್ಕಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಗೊಂದಲದ ಗೂಡು: ನೇಕಾರ ಭವನದ ಉಸ್ತುವಾರಿ ಸ್ಥಳೀಯ ನಗರಸಭೆ ನಿರ್ವಹಿಸಬೇಕಿದೆ. ಆದರೆ ಇದು ಯಾವ ಇಲಾಖೆಗೆ ಸಂಬಂಧಿಸಿದ್ದು, ಯಾವಾಗ ಹಸ್ತಾಂತರಗೊಳ್ಳುವುದು ತಿಳಿಯುತ್ತಿಲ್ಲ. ಕಟ್ಟಡದ ಒಳಗೆ ಅಥವಾ ಮುಂಭಾಗದಲ್ಲಾದರೂ ಯಾವ ಯೋಜನೆಯಡಿ ಯಾವ ಇಲಾಖೆ ನಿರ್ಮಿಸಿದ್ದು ಎಂಬ ಮಾಹಿತಿಯಂತೂ ಇಲ್ಲವೇ ಇಲ್ಲ. ಅವ್ಯವಸ್ಥೆಯಿಂದ ಕೂಡಿರುವ ಭವನ ಕೂಡಲೇ ಸಾಹಿತಿಗಳ ಹಾಗೂ ಸಾರ್ವಜನಿಕರ ಬಳಕೆಗೆ ಅನುಕೂಲವಾಗಬೇಕಿದೆ.
ಖಾಸಗಿ ವ್ಯಕ್ತಿಗಳ ಪಾಲು: ಕಟ್ಟಡ ಸಂಪೂರ್ಣ ಅನಾಥವಾಗಿರುವ ಕಾರಣ ಸುತ್ತಲಿನ ಕೆಲ ನಿರ್ಗತಿಕ ಜನ ಇಲ್ಲಿಯೇ ವಾಸ ಮಾಡುತ್ತಿದ್ದು, ನೇಕಾರ ಭವನವು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ನೇಕಾರರು ಸಭೆ, ಚರ್ಚೆ ನಡೆಸಬೇಕಾದರೆ ದೇವಸ್ಥಾನ ಇಲ್ಲವೆ ದುಬಾರಿ ಸಭಾಭವನ ಬಾಡಿಗೆಗೆ ಪಡೆದು ಸಭೆ ನಡೆಸಬೇಕಾದ ಅನಿವಾರ್ಯತೆಯಿದೆ.
• ಕಿರಣ ಶ್ರೀಶೈಲ ಆಳಗಿ