ಬನಹಟ್ಟಿ: ಜಿಲ್ಲೆಯಲ್ಲಿ ನೇಕಾರರ ನಗರವೆಂದೇ ಗುರುತಿಸಿಕೊಂಡಿರುವ ರಬಕವಿ-ಬನಹಟ್ಟಿ ನಗರಸಭೆಯ ಅಧ್ಯಕ್ಷ ಸ್ಥಾನ ನೇಕಾರ ಸಮುದಾಯಕ್ಕೆ ಒಲಿದು ಬಂದಿದ್ದು, ಸಂತಸ ಇಮ್ಮಡಿಗೊಳಿಸಿದೆ.
ವೃತ್ತಿಯಿಂದಲೂ ನೇಕಾರರಾಗಿರುವ ಶ್ರೀಶೈಲ ಬೀಳಗಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಮುದಾಯದಲ್ಲಿ ಸಂತಸ ತಂದಿದೆ. ಎಸ್‌ಎಸ್‌ಎಲ್ ಸಿವರೆಗೆ ಓದಿ, ನಂತರ ಎರಡು ವರ್ಷಗಳ ಕಾಲ ಇಲೆಕ್ಟ್ರಾನಿಕ್ ನಲ್ಲಿ ತರಬೇತಿ ಪಡೆದು ಬಡತನದಿಂದ ಮುಂದೆ ಓದಲಾಗದೇ ಮೂಲ ಉದ್ಯೋಗ ನೇಕಾರಿಕೆಯನ್ನೇ ಅವಲಂಬಿಸಿದ ಶ್ರೀಶೈಲ ಅವರು ಮನೆಯಲ್ಲಿರುವ ಒಂದೇ ಮಗ್ಗವನ್ನು ತಂದೆ ಚಂದ್ರಶೇಖರ ಹಾಗೂ ಸಹೋದರ ಮಲ್ಲಪ್ಪ ಜತೆಗೂಡಿ ನಡೆಸತೊಡಗಿದರು.
ಶ್ರೀಶೈಲ ಶಾಲೆಯೊಂದಿಗೆ ನೇಕಾರಿಕೆಯನ್ನು ಮಾಡುತ್ತ ಬಂದರು. ಕಷ್ಟ ಪಟ್ಟು ದುಡಿದ ಶ್ರೀಶೈಲ ಅವರಿಂದು 60 ಪಾವರ್‌ಲೂಮ್ ಮಗ್ಗಗಳ ಮಾಲೀಕರಾಗಿದ್ದಾರೆ. ಅವುಗಳಲ್ಲಿ 40 ಮಗ್ಗಗಳನ್ನು ಸ್ವತಃ ತಾವೇ ನಡೆಸುತ್ತಿದ್ದರೆ, ಉಳಿದ 20 ಮಗ್ಗಗಳನ್ನು
ನೇಕಾರರಿಗೆ ಕಚ್ಚಾ ವಸ್ತುಗಳನ್ನು ನೀಡುವುದರ ಮೂಲಕ ನಡೆಸುತ್ತಿದ್ದಾರೆ. 50ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಇದನ್ನೂ ಓದಿ:ಪಚ್ಚನಾಡಿಯಲ್ಲಿ 1,500 ಕಿಲೋ ಪ್ಲಾಸ್ಟಿಕ್‌ನಿಂದ ಸಿದ್ಧವಾದ ಮನೆ! ರಾಜ್ಯದಲ್ಲಿಯೇ ಮೊದಲ ಪ್ರಯೋಗ
ಅಂದು ಸಾಮಾನ್ಯ ಕಾರ್ಯಕರ್ತ; ಇಂದು ಅಧ್ಯಕ್ಷ: 2004ರಿಂದ ಬಿಜೆಪಿ ಕಾರ್ಯಕರ್ತರಾಗಿದ್ದ ಶ್ರೀಶೈಲ ಅವರು 2018 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 13 ನೇ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅವರು ಕೇವಲ ತಮ್ಮ ವಾರ್ಡ್‌ಗಳ ಸಮಸ್ಯೆಗಳಷ್ಟೇ ಅಲ್ಲ ಸುತ್ತಮುತ್ತಲಿನ ವಾರ್ಡ್‌ಗಳ ಜನರ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರಲ್ಲೂ ಕುಡಿಯುವ ನೀರಿನ 24×7, ಒಳಚರಂಡಿ ಯೋಜನೆ, ಹದಗೆಟ್ಟ ರಸ್ತೆ, ಚರಂಡಿ, ಕಸ ವಿಲೇವಾರಿ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳು ಇವರ ಎದುರಿಗಿವೆ. ಇವುಗಳನ್ನು ಯಾವ ರೀತಿ ಪರಿಹರಿಸುತ್ತಾರೆ ಎಂಬ ಕುತೂಹಲ ಜನರಲ್ಲಿದೆ.
– ಕಿರಣ ಶ್ರೀಶೈಲ ಆಳಗಿ