Advertisement

ಜನಪದ ಸೊಗಡು ಉಳಿಸಿ-ಬೆಳೆಸೋಣ: ಸಿದ್ದರಾಜ ಪೂಜಾರಿ

03:44 PM Oct 08, 2018 | |

ಬನಹಟ್ಟಿ: ಕನ್ನಡದಲ್ಲಿ ಜಾನಪದದ ಭಂಡಾರವೇ ಇದೆ. ಜಾನಪದ ನಮ್ಮ ನೆಲ, ಜೀವನದ ಸಂಪತ್ತು. ಅದನ್ನು ಉಳಿಸಿ ಬೆಳೆಸೋಣ ಎಂದು ಹಿರಿಯ ಸಾಹಿತಿ, ವಿಮರ್ಶಕ ಸಿದ್ಧರಾಜ ಪೂಜಾರಿ ಹೇಳಿದರು.

Advertisement

ನಗರದ ಮೋಪಗಾರ ಗಲ್ಲಿಯ ಕವಿಗಳ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಬಕವಿ- ಬನಹಟ್ಟಿ ತಾಲೂಕು ಘಟಕದಿಂದ ರಾಜ್ಯ ಪ್ರಶಸ್ತಿ ಕವಿಗಳಾಗಿದ್ದ ದಿ.ಅಪ್ಪಣ್ಣಪ್ಪ ರಾಮಪ್ಪ ಜಂಬಗಿ ಇವರ 92ನೇ ವರ್ದಂತಿ ಅಂಗವಾಗಿ ದತ್ತಿನಿಧಿ ಉಪನ್ಯಾಸ ಹಾಗೂ ಜಾನಪದ ರಸೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದರಿಂದ ಸಂಭಾವಿತವಾಗುವುದೇ ಜಾನಪದ. ಜಾನಪದ ಎಂದಿಗೂ ನಾಶವಾಗಲಾರದ ಪರಿಭಾಷೆ. ಜಾನಪದೀಯ ಅಂಶಗಳು ಕಾಲಮಾನಕ್ಕೆ ತಕ್ಕಂತೆ ಚಲನಶೀಲವಾದಂತಹುಗಳು. ಅವು ಅತ್ಯಂತ ಸೃಜನಶೀಲವಾಗಿ ಉಳಿದುಕೊಂಡಿವೆ. ಕಾಲಕಾಲಕ್ಕೆ ಅವು ಬದಲಾವಣೆಗಳಾಗಿವೆ. ಅದನ್ನು ನಾವು ಸ್ವೀಕಾರ ಮಾಡಬೇಕು.

ಅಶ್ಲೀಲವಾದದು ಜಾನಪದವಲ್ಲ. ನಮ್ಮ ವ್ಯಕ್ತಿತ್ವ ರೂಪಿಸುವುದೇ ಜಾನಪದವಾಗಿದೆ. ಅಶ್ಲೀಲ ಸಾಹಿತ್ಯದಿಂದ ಜಾನಪದ ಸೊರಗುತ್ತಿರುವುದು ವಿಷಾದನೀಯ ಎಂದರು. ಪೂರ್ವಜರು ತಮ್ಮ ಸುಖ ದುಃಖಗಳನ್ನು ಹಾಡಿನ ಮೂಲಕ ತೋಡಿಕೊಳ್ಳುತ್ತಿದ್ದರು. ಶ್ರೀಸಾಮಾನ್ಯನ ಅತ್ಯಂತ ಕಳಕಳಿಯಿಂದ ಬಾಯಿಯಿಂದ ಹೊರಬಂದಂತಹುದೇ ಜನಪದ ಸಾಹಿತ್ಯ. ಜಗತ್ತಿನಲ್ಲಿ ನಮ್ಮ ಸಂಸ್ಕೃತಿ 21 ಶತಮಾನದವರೆಗೆ ಉಳಿದುಕೊಂಡು ಬರಲು ಶ್ರೀಸಾಮಾನ್ಯರಿಂದ ಮಾತ್ರ ಸಾಧ್ಯ. ಅದು ಯಾವ ದಾರ್ಶನಿಕರು, ರಾಜ ಮಹಾರಾಜರು, ಗಣ್ಯರಿಂದಲ್ಲ. ಎಲ್ಲ ಸಾಹಿತ್ಯಕ್ಕೂ ನಿರ್ಮಾಣವಾಗುವಂತಹುದು ಯಾವುದಾದರು ಇದ್ದರೆ ಅದು ಜಾನಪದ ಎಂದರು.

ಸಂಸ್ಕೃತಿಯ ಮೂಲಬೇರು ಜಾನಪದ. ಸಾಹಿತಿಗಳು ಏನು ಬರೆಯಬೇಕೆಂಬುದನ್ನು ಆಲೋಚನೆ ಮಾಡುವ ಮೊದಲು ಏನನ್ನು ಬರೆಯದಿರುವುದು ಸರಿ ಎಂಬ ಆಲೋಚನೆ ಬಹಳ ಮುಖ್ಯವಾದುದು. ದಿ. ಅಪ್ಪಣ್ಣಪ್ಪ ಜಂಬಗಿಯವರು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದರು. ಡಾ. ವೈ.ವೈ. ಕೊಕ್ಕನವರ ಜಾನಪದ ಸಾಹಿತ್ಯದ ಪ್ರಕಾರಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಜನಪದ ಹುಟ್ಟಿದ್ದು ಶ್ರಮ ಸಂಸ್ಕೃತಿಯ ಫಲವಾಗಿದೆ ಎಂದರು. ಮಕ್ಕಳ ಸಾಹಿತಿಗಳಾದ ಜಯವಂತ ಕಾಡದೇವರ ಮಾತನಾಡಿ, ಅಪ್ಪಣ್ಣಪ್ಪನವರು ಕಲಾವಿದರನ್ನು ಒಂದುಗೂಡಿಸುವ ಕೆಲಸ ಮಾಡಿದರು. ಅವರು ಮಹಾನ್‌ ಜನಪದ ಕವಿ, ಸಾಹಿತಿಗಳಾಗಿದ್ದರು. ಜನಪದದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಡಿ.ಎ. ಬಾಗಲಕೋಟ, ಜಮಖಂಡಿ ಕಸಾಪ ಅಧ್ಯಕ್ಷ ಸಿ. ಎಸ್‌. ಝಳಕಿ ಮಾತನಾಡಿದರು. ಕಸಾಪ ನಿಕಟ ಪೂರ್ವ ಅಧ್ಯಕ್ಷ ಬಿ.ಸಿ. ಯಡಹಳ್ಳಿ, ಡಾ| ಡಿ.ಎ. ಬಾಗಲಕೋಟ, ಎಸ್‌.ಎಲ್‌. ಬೆಳ್ಳಂಕಿ, ಶರತ್‌ ಜಂಬಗಿ, ಶಿವಾನಂದ ಬಾಗಲಕೋಟಮಠ, ಎಸ್‌.ಬಿ. ಸಂಗೊಂದಿ, ಎಸ್‌.ಎಂ. ಬೆಳಗಲಿ, ಎಸ್‌.ಎಲ್‌. ನಂದಗಾಂವ, ಬಸಪ್ಪ ಕೊಣ್ಣೂರ, ಮುತ್ತು ಕೋಲಾರ, ಶ್ರೀಕಾಂತ ಚಿಂಚಖಂಡಿ, ರಾಮಣ್ಣ ಕೊಣ್ಣೂರ, ಮ.ಕೃ. ಮೇಗಾಡಿ, ಮೃತ್ಯುಂಜಯ ರಾಮದುರ್ಗ, ಶ್ರೀಕಾಂತ ಕೆಂದೂಳಿ, ಶ್ರೀಶೈಲ ಹಳ್ಯಾಳ, ಡಾ| ಶಿಲ್ಪಾ ಅಗಡಿ, ಈರಣ್ಣ ಗುಣಕಿ, ಸಲೀಂ ಹನಗಂಡಿ, ಶಾಮಸುಂದರ ಲಡ್ಡಾ ಇದ್ದರು. 

Advertisement

ದತ್ತಿ ದಾನಿಗಳಾದ ಶರತ್‌ ಅಪ್ಪಣ್ಣಪ್ಪಾ ಜಂಬಗಿ ಮಾತನಾಡಿದರು. ಸಿದ್ದಮಾಳಪ್ಪ  ಜಿಡ್ಡಿಮನಿ ಪ್ರಾರ್ಥಿಸಿದರು. ಕಸಾಪ ಅಧ್ಯಕ್ಷ ವೀರೇಶ ಆಸಂಗಿ ಸ್ವಾಗತಿಸಿದರು. ಮಹಾದೇವ ಗುಟ್ಲಿ ನಿರೂಪಿಸಿದರು. ಬಿ.ಎಸ್‌. ನೇಗಿನಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next