ಬನಹಟ್ಟಿ: ಹಬ್ಬಗಳನ್ನು ಕರೆದುಕೊಂಡೇ ಬರುವ ಕಾರಹುಣ್ಣಿಮೆ ಕನ್ನಡದ ಮೊದಲ ಹಬ್ಬವಾಗಿದೆ. ಮಣ್ಣಿನಿಂದ ತಯಾರು ಮಾಡಿದ ಎತ್ತುಗಳನ್ನು ಮನೆಗೆ ತಂದು ಪೂಜಿಸುವುದರ ಜೊತೆಗೆ ಮಣ್ಣಿಗೂ ಕೂಡಾ ಪೂಜೆ ಸಲ್ಲಿಸುವ ಉದ್ದೇಶದಿಂದ ಎತ್ತುಗಳನ್ನು ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿರುವುದು ವಿಶೇಷ.
ರೈತನಿಗೆ ಮುಖ್ಯವಾಗಿ ಬೇಕಿರುವುದು ಮಣ್ಣು. ಕಾರಣ ರೈತ ಒಂದು ವರ್ಷದಲ್ಲಿ ಒಟ್ಟು 5 ಬಾರಿ ಮಣ್ಣಿನ ಪೂಜೆ ಮಾಡುತ್ತಾನೆ. ಮೊದಲು ಕಾರು ಹುಣ್ಣಿಮೆ, ಗುಳ್ಳವ್ವ, ನಾಗಪಂಚಮಿಯಂದು ನಾಗದೇವತೆ, ಗಣೇಶ ಹಬ್ಬ ಕೊನೆಯದಾಗಿ ಗೌರಿ ಇಲ್ಲವೆ ಸೀಗೆ ಹುಣ್ಣಿಮೆ ಸಂದರ್ಭದಲ್ಲಿ ಮಣ್ಣಿನಿಂದ ಶೀಗವ್ವಳನ್ನು ಪ್ರತಿಷ್ಠಾಪಿಸುವ ರೂಢಿಯಿದೆ.
ಕಾರಹುಣ್ಣಿಮೆ ಬರುವುದು ಮಳೆಗಾಲ ಆರಂಭದಲ್ಲಿ. ರೈತ ಬೆಳೆ ಬೆಳೆಯುವುದರ ಸಲುವಾಗಿ ಮತ್ತೇ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಮೊದಲು ಮಣ್ಣಿಗೆ ಪೂಜೆ ಸಲ್ಲಿಸುತ್ತಾನೆ. ಎತ್ತುಗಳು ಹೊಲ ಉಳುಮೆ ಮಾಡುವುದರಿಂದ ಹಿಡಿದು ಬೆಳೆದ ಬೆಳೆಗಳನ್ನು ರಾಶಿ ಮಾಡಿ ಅದನ್ನು ಮಾರುಕಟ್ಟೆಗೆ ತಂದು ಮಾರಲು ಬೇಕಿರುವುದು ಎತ್ತುಗಳು. ಅದಕ್ಕಾಗಿ ಎತ್ತಿಗೆ ಪೂಜೆ ಪೂಜೆ ಸಲ್ಲಿಸುವುದರ ಸಲುವಾಗಿ ಈ ಕಾರು ಹುಣ್ಣಿಮೆ. ರೈತರು ತಮ್ಮ ತಮ್ಮ ಮನೆಗಳಲ್ಲಿರುವ ಎತ್ತುಗಳಿಗೆ ಪೂಜೆ ಸಲ್ಲಿಸಿದರೆ, ಎತ್ತು ಇಲ್ಲದವರು ಕುಂಬಾರರು ತಯಾರಿಸಿದ ಮಣ್ಣಿನ ಎತ್ತಿನ ಮೂರ್ತಿಗಳನ್ನು ತಂದು ಪೂಜಿಸುತ್ತಾರೆ. ಕಾರಹುಣ್ಣಿಮೆಯಂದು ಎತ್ತುಗಳನ್ನು ಸ್ವಚ್ಛವಾಗಿ ತೊಳೆದು ಅವುಗಳಿಗೆ ವಿವಿಧ ಬಣ್ಣ ಹಚ್ಚುತ್ತಾರೆ. ಕೋಡುಗಳಿಗೆ ವಿಶೇಷ ಶೃಂಗರಿಸುತ್ತಾರೆ.
ಪಟ್ಟಣದಲ್ಲಿ ಬೆಳಿಗ್ಗೆ ನಗರದ ಹನುಮಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಮೂವತ್ತಕ್ಕೂ ಅ ಧಿಕ ಕುಂಬಾರರು ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿತ್ತು. 60ರ ವರ್ಷ ವಯಸ್ಸಿನ ಈರಪ್ಪ ಕುಂಬಾರ ಕಳೆದ 40 ವರ್ಷಗಳಿಂದ ಎತ್ತುಗಳ ವಿಗ್ರಹ ಮಾರಾಟ ಮಾಡುತ್ತಿದ್ದಾರೆ. ಅಂದಾಜು 30 ರಿಂದ 100 ರೂ.ಗಳವರೆಗೆ ಮೂರ್ತಿಗಳು ಮಾರಾಟಗೊಂಡಿದ್ದು ವಿಶೇಷ.