Advertisement

ಬಸ್‌ ನಿಲುಗಡೆಗೆ ಆಗ್ರಹ

11:02 AM Jan 31, 2019 | |

ಬನಹಟ್ಟಿ: ರಾಜ್ಯ ಮತ್ತು ಮಹಾರಾಷ್ಟ್ರ ರಸ್ತೆ ಸಾರಿಗೆಯ ಪ್ರತಿ ವೇಗದೂತ ಮತ್ತು ಸಾಮಾನ್ಯ ಬಸ್‌ ಹೊಸೂರಿನಲ್ಲಿ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟನೆ ನಡೆಸಿದರು.

Advertisement

ಸ್ಥಳೀಯ ವಿದ್ಯಾರ್ಥಿಗಳು, ಸಾರ್ವಜನಿಕರು, ಹೊಸೂರ ಗ್ರಾಮದ ವಿವಿಧ ಸಂಘಟನೆಗಳು ಬೆಳಗ್ಗೆ 5:30ಕ್ಕೆ ಪ್ರತಿಭಟನೆ ಆರಂಭಿಸಿದ್ದರಿಂದ ಪುಣೆ, ಸಾಂಗ್ಲಿ, ಮಿರಜ, ಬೆಳಗಾವಿ, ಹುಬ್ಬಳ್ಳಿ, ಗೋಕಾಕ, ಬಳ್ಳಾರಿ, ವಿಜಯಪುರ, ಕಲಬುರಗಿ ನಗರಗಳಿಗೆ ಹೋಗಬೇಕಾದ ಬಸ್‌ಗಳು ತಡವಾಗಿ ಸಂಚಾರ ಮಾಡಿದವು. ಆದರೆ ಪ್ರತಿಭಟನಾಕಾರರು ಯಾವುದೆ ಖಾಸಗಿ ವಾಹನ ತಡೆ ಹಿಡಿಯಲಿಲ್ಲ.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಹೊಸೂರಲ್ಲಿ ಯಾವುದೆ ಬಸ್‌ ನಿಲುಗಡೆಯಾಗುವುದಿಲ್ಲ. ರಬಕವಿ ಮತ್ತು ಬನಹಟ್ಟಿಯಲ್ಲಿ ಎರಡು ಕಡೆಗಳಲ್ಲಿ ಬಸ್‌ ನಿಲ್ಲುತ್ತವೆ. ಇದರಿಂದಾಗಿ ಬೇರೆ ಊರಿಗೆ ಹೋಗಲು ಬನಹಟ್ಟಿ ಇಲ್ಲವೆ ರಬಕವಿಯವರೆಗೆ ದ್ವಿಚಕ್ರ ವಾಹನ ಇಲ್ಲವೆ ಟಂಟಂಗಳಲ್ಲಿ ಸಂಚರಿಸಬೇಕಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಎರಡು ಕಿ.ಮೀ ದೂರದವರೆಗೆ ನಡೆದುಕೊಂಡು ಹೋಗಬೇಕಾಗಿದೆ. ಬಸ್‌ ನಿಲುಗಡೆಯಾಗದಿದ್ದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಪ್ರತಿ ಬಸ್‌ ನಿಲುಗಡೆಯಾಗುವವರೆಗೆ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಾರಿಗೆ ಇಲಾಖೆ ಅಧಿಕಾರಿ ಎ. ಆರ್‌. ತೇಲಿ ಮಾತನಾಡಿ, ಜಮಖಂಡಿ ಡಿಪೋ ಬಸ್‌ ನಿಲುಗಡೆ ಮಾಡಲು ಕ್ರಮ ಕೈಗೊಳ್ಳುವೆ. ಹೊಸೂರ ಬಸ್‌ ನಿಲ್ದಾಣದಲ್ಲಿಯೇ ಒಬ್ಬ ಕಂಟ್ರೋಲರ್‌ನ್ನು ನೇಮಕ ಮಾಡುವ ಭರವಸೆ ನೀಡಿದರು. ಪ್ರತಿಭಟನಾಕಾರರು ಎಲ್ಲ ಡಿಪೋಗಳ ವೇಗದೂತ ಮತ್ತು ಸಾಮಾನ್ಯ ಬಸ್‌ ನಿಲುಗಡೆಯಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತೇಲಿ ವಿವಿಧ ಡಿಪೋಗಳ ಅಧಿಕಾರಿಗಳ ಜೊತೆಗೆ ಮಾತನಾಡಿ ನಿಲುಗಡೆ ಮಾಡಲು ಸೂಚಿಸಿದರು. ನಂತರ ಎಲ್ಲ ರೀತಿಯ ಬಸ್‌ಗಳನ್ನು ಹೊಸೂರ ಗ್ರಾಮದಲ್ಲಿ ನಿಲುಗಡೆ ಮಾಡುವ ವ್ಯವಸ್ಥೆಯನ್ನು ಮಾಡಿದಾಗ ಪ್ರತಿಭಟನಾಕಾರರು ವಾಪಸ್‌ ಪಡೆದರು.

ಅರುಣ ಬುದ್ನಿ, ಶಿವರಾಜ ಕೊಣ್ಣೂರ, ಬಸವರಾಜ ಚಿಂಚಲಿ, ಅಲ್ಲಾವುದ್ದಿನ್‌ ಕುಳಲಿ, ಮಂಜುನಾಥ ಹಾವಿನಾಳ, ಹೊಸೂರಿನ ವಿವಿಧ ಸಂಘಟನೆಗಳು ಮತ್ತು ರಬಕವಿ ಬನಹಟ್ಟಿ ಎಬಿವಿಪಿ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next