Advertisement

ನಡು ಹೊಳೆಯ ಮಧ್ಯೆ ಶಿವ ನಿಂತವ್ನೆ! 

01:28 PM May 27, 2017 | |

ಬನಹಟ್ಟಿಯ ಕೃಷ್ಣೆ ಬರಿದಾದಾಗ ಎದ್ದು ಕಾಣೋದು ಬಾಳಪ್ಪಜ್ಜನ ಗುಡಿ.  ಈ ನಡು ಹೊಳೆಯಲ್ಲಿ ಯಾರಪ್ಪ ಈ ದೇವಸ್ಥಾನವನ್ನು ಕಟ್ಟಿಸಿದವರು? ಯಾವಾಗ ಕಟ್ಟಿಸಿದರು? ನದಿಯ ನಡುವೆ ಏಕೆ ಕಟ್ಟಿಸಿದರು ? ಎಂಬ ನೂರೆಂಟು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಲೇ ಇತ್ತು.  

Advertisement

ಕೃಷ್ಣಾ ನದಿಯಲ್ಲಿ ನೀರು ಖಾಲಿಯಾದಾಗ ಮಾತ್ರ ಮಷವಾಡಗಿ ಬ್ಯಾರೇಜನ ಹಿಂಭಾಗದಲ್ಲಿ ಕಟ್ಟಿರುವ ಈ ಗುಡಿ(ದೇವಾಲಯ) ಪೂರ್ತಿಯಾಗಿ ಕಾಣತೊಡಗುತ್ತದೆ.  ಬರಗಾಲ ಬಂದಾಗ ಮಾತ್ರ ಇದು ಗೋಚರಿಸುತ್ತದೆ. 

ಇಡೀ ದೇವಾಲಯವನ್ನು ಪೂರ್ವಕ್ಕೆ ಮುಖ ಮಾಡಿ ಕಟ್ಟಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಲಿಂಗವಿದೆ. ವಿಶಾಲವಾದ ಪಡಸಾಲೆ, ಮೂರು ಕಮಾನುಗಳ ಪ್ರವೇಶ ದ್ವಾರವಿದ್ದು, ನದಿಯ ಕಡೆ ಒಂದು, ಅದಕ್ಕೆ ಎದುರುಗಡೆ ಮತ್ತೂಂದು ಬಾಗಿಲು ಇದೆ.  ಆದರೆ ಅದನ್ನು ಕಲ್ಲುಗಳಿಂದ ಮುಚ್ಚಲಾಗಿದೆ. ಬೃಹತ್‌ ಆಕಾರದ ಕರಿ ಕಲ್ಲಿನಿಂದ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಯಾವುದೇ ವಾಸ್ತು ಶಿಲ್ಪವಾಗಲಿ,  ಕೆತ್ತನೆಯ ಕೆಲಸವಾಗಲಿ ಇಲ್ಲ. ಆದರೂ ಅದು ನೋಡುಗರನ್ನು ಆಕರ್ಷಿಸುವಂತಿದೆ.

ಈ ದೇವಸ್ಥಾನವನ್ನು ರಬಕವಿಯ ಮರೆಗುದ್ದಿ ಮನೆತನದ ಹಿರಿಯ ಅಜ್ಜ ಬಾಳಪ್ಪ ಮರೆಗುದ್ದಿ ಕಟ್ಟಿಸಿದ್ದಂತೆ.  ಈಗಲೂ ಆ ದೇವಸ್ಥಾನಕ್ಕೆ ಬಾಳಪ್ಪನ ಗುಡಿ ಅಂತಲೇ ಕರೆಯುತ್ತಾರೆ. ಆದರೆ ಇದು ಈಶ್ವರ ದೇವಸ್ಥಾನ.

 ಮರೆಗುದ್ದಿ ಮನೆತನದವರು ಹೇಳ್ಳೋದು ಹೀಗೆ-“ನಮ್ಮ ಮನ್ಯಾಗ ಗಂಡು ಸಂತಾನ ಇರಲಿಲ್ಲ. ಭಾಳಪ್ಪ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ಹಂಗೇ ಚಿಲ್ಲರೆ ನಾಣ್ಯಗಳನ್ನು ಕೂಡಿಸಿದ್ದ. ಆ ಹಣವನ್ನು ಏನು ಮಾಡುವುದು ಅಂತ ಹಿರಿಯರನ್ನು ಕೇಳಿದಾಗ ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ಗುಡಿ ಇಲ್ಲ.  ಅಲ್ಲಿ ಗುಡಿ ಕಟ್ಟಿಸಿದರ ಹೋಗಿ ಬರುವ ಜನಕ್ಕೆ ಪೂಜೆ ಮಾಡಲಿಕ್ಕೆ ಒಂದು ಜಾಗ ಆಗತದ.  ಅದಕ್ಕ ಅಲ್ಲೇ ಗುಡಿ ಕಟ್ಟಿಸುವ ‘ ಎಂದು ಸಲಹೆ ಇತ್ತರಂತೆ. ಆಗ ಬನಹಟ್ಟಿ ಜಮಖಂಡಿ ಸಂಸ್ಥಾನಕ್ಕೆ ಸೇರಿದ್ದರೆ, ರಬಕವಿ ಸಾಂಗ್ಲಿ ಸಂಸ್ಥಾನಕ್ಕೆ ಸೇರಿತ್ತು. 

Advertisement

ಆಗಿನ ಸಾಂಗ್ಲಿ ಸಂಸ್ಥಾನದಿಂದ ದೇವಾಲಯ ಕಟ್ಟಲು ಪರವಾನಿಗೆ ಪಡೆದು 1912ರ ಸುಮಾರಿಗೆ ಈ ದೇವಾಲಯವನ್ನು ನಿರ್ಮಾಣಮಾಡಲಾಯಿತು. ಇದರ ಬಗ್ಗೆ ಸಾಂಗ್ಲಿಯಲ್ಲಿ ದಾಖಲೆಗಳು ನೋಡಲು ಸಿಗುತ್ತವೆ ಎನ್ನುತ್ತಾರೆ ಮರೆಗುದ್ದಿ ಮನೆತನದವರು. 

ಮೊದಲು ನದಿಯ ವ್ಯಾಪ್ತಿ ಕಡಿಮೆ ಇದ್ದದ್ದರಿಂದ ದೇವಾಲಯ ದಡದಲ್ಲಿ ಇತ್ತು. ಆದರೆ 1971ರಲ್ಲಿ ವೀರೇಂದ್ರ ಪಾಟೀಲರ ಸರ್ಕಾರ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ್‌ ನಿರ್ಮಿಸಲು ಅನುಮತಿ ನೀಡಿದಾಗ, 1973ರಲ್ಲಿ ಪ್ರಥಮ ಬಾರಿಗೆ ನೀರನ್ನು ತಡೆ ಹಿಡಿಯಲಾಯಿತು. ಆಗಲೇ ದೇವಾಲಯ ನೀರೊಳಗೆ ಮುಳುಗಿ ಹೋದದ್ದು.  

ನಿರ್ಮಾಣಗೊಂಡು ಶತಮಾನ ಕಳೆದಿದ್ದರೂ ಕೃಷ್ಣೆಯ ಪ್ರವಾಹದ ಹೊಡೆತಕ್ಕೆ ಈ ದೇವಾಲಯದಲ್ಲಿರುವ ಮೂರ್ತಿಗಳು ಜಗ್ಗದೇ, ಆಲುಗಾಡದೇ ನಿಂತಿರುವುದು ವಿಶೇಷವಾಗಿದೆ.

 ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next