ಬನಹಟ್ಟಿ: ಲಾಕ್‌ಡೌನ್‌ನಿಂದ ವೀಳ್ಯೆದೆಲೆ ಬೆಳೆಗಾರರು ವ್ಯಾಪಾರ ಇಲ್ಲದೇ ಆತಂಕಕ್ಕೆ ಒಳಗಾಗಿದ್ದಾರೆ. ಜಗದಾಳ ಗ್ರಾಮ ಎಲೆಗಳ ವ್ಯಾಪಾರದ ಕೇಂದ್ರ ಸ್ಥಾನ. ಸುತ್ತ ಮುತ್ತಲಿನ ಗ್ರಾಮದ ಜನರು ಬೆಳಗ್ಗೆ ನಾಲ್ಕು ಗಂಟೆಗೆ ಎಲೆಗಳನ್ನು ತರಲು ಆರಂಭಿಸುತ್ತಾರೆ. ಅಲ್ಲಿ ಬೆಳಗ್ಗೆಯೇ ಸೌದಾ ನಡೆಯುತ್ತಿದೆ. ಈಗ ಕೋವಿಡ್ -19ನಿಂದಾಗಿ ಎಲೆಗಳ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಎಲೆಗಳನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ.
ಜಗದಾಳದಲ್ಲಿ ಅಂದಾಜು 8ರಿಂದ 10 ಲಕ್ಷ ರೂ.ವರೆಗೆ ಎಲೆಗಳ ವ್ಯಾಪಾರ ನಡೆಯುತ್ತದೆ. ಆದರೆ, ಇಂದು ವ್ಯಾಪಾರ ನಿಂತು ಹೋಗಿದೆ. ಜಗದಾಳ ಗ್ರಾಮದಲ್ಲಿ ರಾಜ್ಯದಲ್ಲೆ ಹೆಚ್ಚಿನ ವೀಳ್ಯೆದೆಲೆ ಬೆಳೆಗಾರರಿದ್ದು, ಅಂದಾಜು 500 ರಿಂದ 600 ಎಕರೆ ಭೂಮಿಯಲ್ಲಿ ವೀಳ್ಯೆ ದೆಲೆ ಬೆಳೆಯಲಾಗುತ್ತದೆ. ಪ್ರತಿ ನಿತ್ಯ 1ಎಕರೆಗೆ 2ರಿಂದ 3 ಡಾಗ್ (ಪೆಂಡಿ) ವೀಳ್ಯೆದೆಲೆ ಪಡೆಯಬಹುದಾಗಿದ್ದು, 1ಡಾಗ್ (ಪೆಂಡಿ)ಯಲ್ಲಿ 12 ಸಾವಿರ ವೀಳ್ಯೆದೆಲೆ ಇರುತ್ತವೆ. ಸಂತಿ(ಲೋಕಲ್)ಎಲೆ, ಕಳ್ಳಿ ಎಲೆ, ಪಾಪಡ ಎಲೆ ಎಂದು ಇದರಲ್ಲಿ ಮೂರು ವಿಧಗಳಿವೆ. ಕಳ್ಳಿ ಎಲೆ ಮತ್ತು ಪಾಪಡ ಎಲೆ ಬೇರೆ ರಾಜ್ಯಗಳಿಗೆ ರಫ್ತಾಗುತ್ತವೆ.
ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಗುಜರಾತ, ಪುಣೆ, ಸಾತಾರಾ, ಮುಂಬೆ„, ಔರಂಗಾಬಾದ, ಜಾಲನಾ, ಬೀಡ, ನಾಸಿಕ, ಸಾವಂತವಾಡಿ, ಕಳಂಬಾ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆ ಜಗದಾಳದಿಂದ ಪ್ರತಿನಿತ್ಯ 150 ರಿಂದ 200 ಡಾಗ್ (ಪೆಂಡಿ) ಗಳು ಮಾರುಕಟ್ಟೆಗೆ ಹೋಗುತ್ತವೆ. ಈಗ ಎಲೆಗಳನ್ನು ಸ್ಥಳೀಯರು ಕೇಳುತ್ತಿಲ್ಲ. ಎಲೆಗಳ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಎಲೆಬಳ್ಳಿಗಳನ್ನು ನಂಬಿದ ನೂರಾರು ಕೂಲಿ ಕಾರ್ಮಿಕರು ಕೂಲಿ ಇಲ್ಲದೆ ಮನೆಯಲ್ಲಿದ್ದಾರೆ. ರೈತರು ವ್ಯಾಪಾರವಿಲ್ಲದೆ ಕಂಗಾಲಾಗಿದ್ದು, ಜೀವನ ನಡೆಸುವುದು ದುಸ್ತರವಾಗಿ ಪರಿಣಮಿಸಿದೆ.
ಕೋವಿಡ್-19 ವೈರಸ್ ಭೀತಿಯಿಂದ ಈ ಭಾಗದಲ್ಲಿ ಹೇರಳವಾಗಿ ಬೆಳೆಯುವ ವೀಳ್ಯೆದೆಲೆ ರಾಜ್ಯ ಹಾಗೂ ರಾಷ್ಟ್ರದ ವಿವಿಧ ಮೂಲೆ ಮೂಲೆ ಮೂಲೆಗೆ ತಲುಪುತ್ತವೆ. ವೀಳ್ಯೆದೆಲೆ ಮಾರಾಟವಿಲ್ಲದೆ ನಷ್ಟ ಎದುರಿಸುವಂತಾಗಿದೆ. ಸರಕಾರ ಗಮನ ಹರಿಸಬೇಕು.
ಸದಾಶಿವ ಬಂಗಿ,
ಪ್ರಗತಿಪರ ರೈತ ಜಗದಾಳ
ಕಿರಣ ಶ್ರೀಶೈಲ ಆಳಗಿ