Advertisement

ಬಡವರ ಮೇಲಿನ ಕ್ಲಿನಿಕಲ್‌ ಟ್ರಯಲ್‌ ನಿಷೇಧವಾಗಲಿ

12:14 PM Apr 22, 2017 | |

ಬೆಂಗಳೂರು: ದೇಶದಲ್ಲಿ ಔಷಧ ಮಾಫಿಯಾ ಬೃಹದಾಕರಾವಾಗಿ ಬೆಳೆಯುತ್ತಿದ್ದು, ಬಡವರ ಮೇಲೆ  ಕ್ಲಿನಿಕಲ್‌ ಟ್ರಯಲ್‌ ಮಾಡುವುದು ಸಂಪೂರ್ಣ ನಿಷೇಧವಾಗಬೇಕು ಎಂದು ನಗರಾಭಿವೃದ್ಧಿ ಹಾಗೂ ಹಜ್‌ ಸಚಿವ ರೋಷನ್‌ ಬೇಗ್‌ ಹೇಳಿದ್ದಾರೆ.

Advertisement

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ರಾಜ್ಯ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಕಾರ್ಯಗಾರದಲ್ಲಿ ಮಾತನಾಡಿದ ಹಳ್ಳಿ, ನಗರ ಎನ್ನದೆ ಎಲ್ಲೆಡೆ ಔಷಧ ಮಾಫಿಯಾ ತನ್ನ ಕರಾಳ ಕೈಗಳನ್ನು ಚಾಚುತ್ತಿದೆ. ಕ್ಲಿನಿಕಲ್‌ ಟ್ರಯಲ್‌ಗ‌ಳನ್ನು ಬಡವರ ಮೇಲೆ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.  

ಗುಪ್ತ ಸ್ಥಳದಲ್ಲಿ, ಯಾರಿಗೂ ತಿಳಿದಂತೆ ಕ್ಲಿನಿಕಲ್‌ ಟ್ರಯಲ್‌ ಬಡವರ ಮೇಲೆ ಮಾಡುವ ಬದಲು ಸಚಿವರು, ಶಾಸಕರು, ಐಎಎಸ್‌ ಅಧಿಕಾರಿಗಳ ಮೇಲೆ ಮಾಡಲಿ. ಬಡವರ ಮೇಲೆ ಕ್ಲಿನಿಕಲ್‌ ಟ್ರಯಲ್‌ ಮಾಡುವುದನ್ನು ನಿಷೇಧಿಸಬೇಕು ಎಂದು ಹೇಳಿದರು. ಬದ್ಧತೆ ಇದ್ದಾಗ ಮಾತ್ರ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಾಧ್ಯ.

ಗ್ರಾಮೀಣ ಪ್ರದೇಶದ ಬಡವರು ಮಾತ್ರವಲ್ಲ, ನಗರ ಪ್ರದೇಶದ ಬಡವರು ಕೂಡ ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಇಲ್ಲದೆ ಕಷ್ಟಪಡುತ್ತಿದ್ದಾರೆ. ನಗರ ಆರೋಗ್ಯ ಅಭಿಯಾನದ ಮೂಲಕ ಬಡ ರೋಗಿಗಳಿಗೆ ಆದ್ಯತೆ ಮೇರೆಗೆ ಉತ್ತಮ ಆರೋಗ್ಯ ಕಲ್ಪಿಸುವಂತಾಗಬೇಕು.

ನಗರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವೆಲ್‌ನೆಸ್‌ ಕೇಂದ್ರವಾಗಿ ಪರಿವರ್ತಿಸುವುದು ಉತ್ತಮ ಬೆಳೆವಣಿಗೆ, ಇದರ ಪ್ರಯೋಜನ ಜನರಿಗೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರು ಸೇರಿ ಮಹಾನಗರಗಳಲ್ಲಿ ಸೂಪರ್‌ಸ್ಪೆಷಾಲಿಟಿ ಹೆಸರಿನಲ್ಲಿ ಫೈವ್‌ ಸ್ಟಾರ್‌ ಆಸ್ಪತ್ರೆಗಳು ಹುಟ್ಟಿಕೊಳ್ಳುತ್ತಿವೆ.

Advertisement

ಇಂದು ಒಂದು ರೀತಿಯ ಫ್ಯಾಶನ್‌ ಆಗಿಬಿಟ್ಟಿದೆ. ಬೆಂಗಳೂರಿನಲ್ಲಿ ಬೌರಿಂಗ್‌, ವಿಕ್ಟೋರಿಯಾ, ಮಿಂಟೋ, ಸೇಂಟ್‌ಜಾನ್‌ ಮತ್ತು ಸರ್ಕಾರಿ ಆಸ್ಪತ್ರೆಗಳು ಜನರಿಗೆ ಸೇವೆ ನೀಡುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಫೈವ್‌ಸ್ಟಾರ್‌ ಆಸ್ಪತ್ರೆಗಳು ಹುಟ್ಟಿಕೊಂಡಿದ್ದು ಜನರು ಪ್ರತಿಷ್ಠೆಗಾಗಿ ಅಂತಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮಲೇರಿಯ ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ಕೇಂದ್ರ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಕೈಗೊಳ್ಳಲಾಗಿದೆ. ನಗರ ಪ್ರದೇಶದ ಬಡವರ ಆರೋಗ್ಯದ ಬಗ್ಗೆ ಆದ್ಯತೆ ನೀಡಬೇಕು. ನಗರದ ಜನಸಂಖ್ಯೆ ಈಗ ಶೇ.38ರಷ್ಟಿದ್ದು, 2030ರ ವೇಳೆಗೆ ಶೇ.50ರಷ್ಟು ಏರಿಕೆಯಾಗಲಿದೆ.

ಹಳ್ಳಿಗಳು ಪಟ್ಟಣವಾಗಿ ಮಾರ್ಪಾಡಾಗುವ ಜತೆಗೆ, ಜನರಿಗೆ ನಗರದ ಆಕರ್ಷಣೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ನಗರ ಆರೋಗ್ಯ ಅಭಿಯಾನದಡಿ 131 ಕೋಟಿ ರೂ. ಮೀಸಲಿಟ್ಟಿದ್ದು, ಶೇ.73.35ರಷ್ಟು ಬಳಕೆಯಾಗಿದೆ. ಉಳಿದ ಹಣ ಹಾಗೇ ಇದೆ. ಆರೋಗ್ಯ ವಿಚಾರವಾಗಿ ಸರ್ಕಾರದಿಂದ ಮಂಜೂರಾಗುವ ಹಣವನ್ನು ಗರಿಷ್ಠ ಪ್ರಮಣದಲ್ಲಿ ಬಳಸಿಕೊಳ್ಳುವಂತಾಗಬೇಕು.

ಜನರಿಕ್‌ ಔಷಧಾಲಯಗಳಿಂದ ಬಡವರಿಗೆ ಸಾಕಷ್ಟು ಉಪಯೋಗ ಆಗುತ್ತಿದೆ ಎಂದರು. ಮಲೇರಿಯಾ ಮುಕ್ತ 2016-2025 ಕುರಿತಾದ ಕಾರ್ಯಯೋಜನೆಯ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಸಚಿವರು ಅನಾವರಣಗೊಳಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಯದ ಜಂಟಿ ಕಾರ್ಯದರ್ಶಿ ಡಾ.ಕೆ.ರಾಜೇಶ್ವರ ರಾವ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ರಾಷ್ಟ್ರೀಯ ಆರೋಗ್ಯ ಅಭಿಯನ ನಿರ್ದೇಶಕ ಡಾ. ರತನ್‌ ಕೇಳ್ಕರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಯೋಜನಾ ನಿರ್ದೇಶಕಿ ಡಾ. ಪಿ.ಸರೋಜ  ಉಪಸ್ಥಿತರಿದ್ದರು.   

2017ರ ವರ್ಷವನ್ನು ನಗರ ಆರೋಗ್ಯ ವರ್ಷವಾಗಿ ಆಚರಿಸಲಾಗುವುದು. ನಗರದ ಬಡವರ ಆರೋಗ್ಯದ ಹಿತದೃಷ್ಟಿಯಿಂದ ವರ್ಷಪೂರ್ತಿ ಆರೋಗ್ಯ ಕುರಿತ ಜಾಗೃತಿ, ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ.
-ಡಾ.ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ    

Advertisement

Udayavani is now on Telegram. Click here to join our channel and stay updated with the latest news.

Next