Advertisement

Rice: ಅಕ್ಕಿ ರಫ್ತಿಗೆ ನಿರ್ಬಂಧ, ಅನಗತ್ಯ ವಿವಾದ ಆಗದಿರಲಿ

12:03 AM Aug 28, 2023 | Team Udayavani |

ಉತ್ತರ ಭಾರತದಲ್ಲಿ ಪ್ರವಾಹದೋಪಾದಿಯ ಮಳೆ, ದಕ್ಷಿಣ ಭಾರತದಲ್ಲಿನ ಮಳೆ ಕೊರತೆಯಿಂದಾಗಿ ದೇಶದಲ್ಲೀಗ ಆಹಾರ ಧಾನ್ಯಗಳಿಗೆ ಕೊರತೆ ಕಾಣುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ದಕ್ಷಿಣ ಭಾರತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ.

Advertisement

ಕೆಲವು ದಿನಗಳ ಹಿಂದೆ ಟೊಮೇಟೊ ದರ ಏರಿಕೆಯಿಂದಾಗಿ ದೇಶಾದ್ಯಂತ ಜನ ಈ ತರಕಾರಿಯನ್ನು ಖರೀದಿ ಮಾಡಲಾಗದಂಥ ಸ್ಥಿತಿ ತಲುಪಿದ್ದರು. ಮುಂದೆ ಈರುಳ್ಳಿ, ಗೋಧಿ, ಅಕ್ಕಿ ಸೇರಿದಂತೆ ಇತರ ವಸ್ತುಗಳ ದರ ಇನ್ನಷ್ಟು ಏರಿಕೆಯಾಗದಂತೆ ಕೇಂದ್ರ ಸರಕಾರ ತಡೆಯಬೇಕಾಗಿದೆ.

ಅತ್ತ ದಕ್ಷಿಣ ಭಾರತದಲ್ಲಿ ಈ ವರ್ಷ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಅಲ್ಲಿನ ಒಂದಿಲ್ಲೊಂದು ರಾಜ್ಯ ಪ್ರವಾಹಕ್ಕೆ ತುತ್ತಾಗಿ, ಸಂಕಷ್ಟ ಕಾಣಿಸಿಕೊಂಡಿದೆ. ಅಂದರೆ ಹರಿಯಾಣ, ಪಂಜಾಬ್‌, ಹಿಮಾಚಲ ಪ್ರದೇಶಗಳು ಮಳೆಯಿಂದಾಗಿ ನಲುಗಿವೆ. ಒಂದು ರೀತಿಯಲ್ಲಿ ಪ್ರಸಕ್ತ ವರ್ಷ ಭಾರತದ ಪಾಲಿಗೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಸ್ಯೆ ಒಟ್ಟಾಗಿಯೇ ಕಾಣಿಸುತ್ತಿದೆ. ದೇಶದಲ್ಲಿನ ಈ ಮಳೆ ಕೊರತೆ ಮತ್ತು ಅಪಾರ ಮಳೆಯ ಕಾರಣದಿಂದಾಗಿ ಕೃಷಿ ಉತ್ಪನ್ನ ಕಡಿಮೆಯಾಗಬಹುದು ಎಂಬ ಆತಂಕವೂ ಎದುರಾಗಿದೆ. ಹೀಗಾಗಿ ಕೇಂದ್ರ ಸರಕಾರ ಈರುಳ್ಳಿ, ಅಕ್ಕಿ ಮೇಲೆ ಹೆಚ್ಚುವರಿ ರಫ್ತು ತೆರಿಗೆ ವಿಧಿಸಿ, ನಿರ್ಬಂಧ ಹೇರಲು ಮುಂದಾಗಿದೆ.

ಸದ್ಯದ ಮಟ್ಟಿಗೆ ಹೇಳುವುದಾದರೆ ಇದು ಸಮಯೋಚಿತ ನಿರ್ಧಾರಎಂದೇ ಹೇಳಬೇಕಾಗಬಹುದು. ಆದರೆ ರೈತರ ದೃಷ್ಟಿಯಿಂದ ಹೇಳುವುದಾದರೆ ರಫ್ತಿನ ಮೇಲಿನ ನಿರ್ಬಂಧ ಸಮಸ್ಯೆಗೆ ಕಾರಣವಾಗಬಹುದು. ಅಪಾರ ಪ್ರಮಾಣದಲ್ಲಿ ಬೆಳೆ ಬೆಳೆದಿರುವ ರೈತನಿಗೆ ಸರಿಯಾದ ಪ್ರಮಾಣದಲ್ಲಿ ಬೆಲೆ ಸಿಗದೇ ಹೋಗಬಹುದು. ಹೀಗಾಗಿಯೇ ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿದ ವೇಳೆ, ಮಹಾರಾಷ್ಟ್ರದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಅರ್ಥದಲ್ಲಿ ಈ ರೈತರ ಸಿಟ್ಟಿಗೆ ಕಾರಣವೂ ಇದೆ. ಒಂದು ವೇಳೆ ಈ ರಫ್ತು ನಿರ್ಬಂಧ ಮುಂದುವರಿದರೆ, ತಮ್ಮ ಪಾಡೇನು ಎಂಬ ಪ್ರಶ್ನಾರ್ಥಕ ಚಿಹ್ನೆಯೂ ಅವರಲ್ಲಿದೆ. ರಫ್ತು ನಿರ್ಬಂಧ ತಾತ್ಕಾಲಿಕ ನಿರ್ಧಾರವಾಗಿದ್ದು, ಮುಂದಿನ ದಿನಗಳಲ್ಲಿ  ಈ ನಿರ್ಬಂಧವನ್ನು ತೆಗೆಯುವ ಬಗ್ಗೆ ಕೇಂದ್ರ ಸರಕಾರ ಭರವಸೆ ನೀಡಬೇಕು. ಆಗಷ್ಟೇ ರೈತರು ಮತ್ತು ಕೃಷಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳಿಗೆ ಸಮಾಧಾನ ಸಿಗಬಹುದು.

ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರಕಾರ ಜು.20ರಂದು ಬಾಸ್ಮತಿಯೇತರ ಅಕ್ಕಿಯನ್ನು ರಫ್ತು ಮಾಡದಂತೆ ನಿರ್ಬಂಧಿಸಿತು. ಆ.25ರಂದು ಕುಚ್ಚಲಕ್ಕಿ ಮೇಲೂ ಶೇ.20ರಷ್ಟು ತೆರಿಗೆ ಹಾಕಿತು. ಆ.19ರಂದು ಈರುಳ್ಳಿ ಮೇಲೆ ಶೇ.40ರಷ್ಟು ರಫ್ತು ತೆರಿಗೆ ಹಾಕಿದೆ. ಅಂದರೆ ಹೆಚ್ಚುವರಿ ತೆರಿಗೆ ಹಾಕುವ ಮೂಲಕ ಒಂದು, ದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಅಕ್ಕಿಯನ್ನು ಶೇಖರಿಸಿಡುವುದು; ಎರಡನೆಯದು, ಮಳೆಯ ಸ್ಥಿತಿ ಮತ್ತು ಮಾರುಕಟ್ಟೆಗೆ ಬರುವ ಅಕ್ಕಿಯ ಪ್ರಮಾಣ ನೋಡಿಕೊಂಡು ರಫ್ತು ಮೇಲಿನ ನಿರ್ಬಂಧ ತೆಗೆಯುವ ಚಿಂತನೆಯಲ್ಲಿ ಕೇಂದ್ರ ಸರಕಾರವಿದೆ. ಅಂದರೆ ಅಕ್ಟೋಬರ್‌ ವೇಳೆಗೆ ದೇಶದಲ್ಲಿನ ಅಕ್ಕಿ ದಾಸ್ತಾನು ಬಗ್ಗೆ ಒಂದಷ್ಟು ಮಾಹಿತಿ ಸಿಗಬಹುದು. ಏನೇ ಆಗಲಿ ದರ ಏರಿಕೆ ನಿಯಂತ್ರಣ ಮತ್ತು ಮಳೆಯ ಚಂಚಲತೆಯಿಂದಾಗಿ ದೇಶವಾಸಿಗಳಿಗೆ ಆಹಾರ ಸಾಮಗ್ರಿ ಸಂಗ್ರಹಿಸಿ ಇಡುವ ಜವಾಬ್ದಾರಿಯೂ ಸರಕಾರಗಳ ಮೇಲಿದೆ. ಹೀಗಾಗಿ ಸದ್ಯದ ಮಟ್ಟಿಗೆ ಈ ವಿಚಾರದಲ್ಲಿ ಕಾದು ನೋಡುವುದೊಂದೇ ಎಲ್ಲರ ಮುಂದಿರುವ ಏಕೈಕ ಮಾರ್ಗವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next