Advertisement
ಆಳಸಮುದ್ರಕ್ಕೆ ಸ್ಮಾಲ್ ರಿಬ್ಬನ್ ಫಿಶ್ (ಪಾಂಬೋಲ್ ಮೀನು) ಹಿಡಿಯಲು ತೆರಳಿದ್ದ ಮಂಗಳೂರು ಮತ್ತು ಉಡುಪಿ ಭಾಗದ ಸುಮಾರು 300 ಬೋಟ್‌ಗಳಿಗೆ ಬುಧವಾರ ಸಮುದ್ರ ಮಧ್ಯದಲ್ಲೇ ತಡೆಯೊಡ್ಡಲಾಗಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಸುಮಾರು ಮೂರು ತಿಂಗಳುಗಳಿಂದ ಮಂಗಳೂರಿನ ಸುಮಾರು 200 ಮತ್ತು ಮಲ್ಪೆ, ಉಡುಪಿ ಭಾಗದ ಸುಮಾರು 100 ಬೋಟ್‌ಗಳು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸುತ್ತಿದ್ದು, ಕಳೆದ ಬುಧವಾರ ತಮಿಳುನಾಡು ಮೀನುಗಾರರು ದಾಳಿ ಆರಂಭಿಸಿದ್ದಾರೆ. ಸಂಜೆ ವೇಳೆಗೆ ಬೋಟ್‌ಗಳನ್ನು ಸುತ್ತುವರೆದು ಕಲ್ಲು, ರೀಪುಗಳನ್ನು ಎಸೆದು ಹಾನಿ ಮಾಡಲಾಗಿದೆ. ಬೋಟ್‌ನಲ್ಲಿದ್ದ ಪರಿಕರಗಳನ್ನು ನೀರಿಗೆ ಎಸೆಯಲಾಗಿದೆ. ಇದರಿಂದಾಗಿ 1,500ಕ್ಕೂ ಅಧಿಕ ಮಂದಿ ಮೀನುಗಾರರು ತಮ್ಮ ಮೀನುಗಾರಿಕೆ ಮೊಟಕುಗೊಳಿಸಿ ಬರಿಗೈಯಲ್ಲಿ ವಾಪಸಾಗುತ್ತಿರುವುದು ಮಾತ್ರವಲ್ಲದೆ ಒಂದೊಂದು ಬೋಟ್‌ಗಳಿಗೆ ಕನಿಷ್ಠ 10 ಲ.ರೂ. ಹಾನಿ ಉಂಟಾಗಿದೆ.
Related Articles
ಕಡಲಲ್ಲಿ ಮೀನಿನ ಕ್ಷಾಮ ಉಂಟಾಗಿ ಆಳ ಸಮುದ್ರ ಮೀನುಗಾರರು ತೊಂದರೆಯಲ್ಲಿದ್ದಾಗ ಅವರಿಗೆ ರಿಬ್ಬನ್ ಫಿಶ್ ನೆರವಾಗಿತ್ತು. ಅದರಿಂದ ಆದಾಯ ಗಳಿಸುತ್ತಿದ್ದರು. ಸಣ್ಣ ರಿಬ್ಬನ್ ಫಿಶ್‌ಗಳನ್ನು ಫಿಶ್‌ಮೀಲ್‌ಗಳಿಗೆ ನೀಡಲಾಗುತ್ತದೆ. ಆದರೆ ಈಗ ತಮಿಳುನಾಡು ಮೀನುಗಾರ ಆಕ್ರಮಣದಿಂದಾಗಿ ಸಾವಿರಾರು ಮಂದಿ ಮೀನುಗಾರರ ಬದುಕಿಗೆ ಪೆಟ್ಟು ಬಿದ್ದಿದೆ ಎಂದು ರಾಜ್ಯದ ಮೀನುಗಾರರು ಅಲವತ್ತುಕೊಂಡಿದ್ದಾರೆ.
Advertisement
ಮೀನುಗಾರರ ನಡುವೆ ಸಂಘರ್ಷದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ತಮಿಳುನಾಡು ಮೀನುಗಾರರ ಆಕ್ರಮಣವೇ ಕಾರಣ ಎಂದು ಮೀನುಗಾರರು ದೂರಿದ್ದಾರೆ.
ತೀರದಿಂದ 12 ನಾಟಿಕಲ್ ಮೈಲಿನ ಅನಂತರ (ಆಳಸಮುದ್ರ) ಯಾರು ಕೂಡ ಮೀನುಗಾರಿಕೆ ನಡೆಸಬಹುದು. ಅದು ಯಾವುದೇ ರಾಜ್ಯಕ್ಕೆ ಸೇರಿದ ವ್ಯಾಪ್ತಿ ಅಲ್ಲ. ಹಾಗಾಗಿ ನಮ್ಮ ಮೀನುಗಾರರು ಅತಿಕ್ರಮಣ ನಡೆಸುವ ಪ್ರಶ್ನೆಯೇ ಬರುವುದಿಲ್ಲ. ಆದರೆ ತ.ನಾಡು ಮೀನುಗಾರರು ಅಪ್ರಚೋದಿತವಾಗಿ ಆಕ್ರಮಣ ನಡೆಸಿದ್ದಾರೆ. ನಮ್ಮ ರಾಜ್ಯ ವ್ಯಾಪ್ತಿಯಲ್ಲಿ ಅವರು ಮೀನುಗಾರಿಕೆ ನಡೆಸುತ್ತಾರೆ. ಆದರೆ ನಾವು ಅವರಿಗೆ ತೊಂದರೆ ನೀಡು ತ್ತಿಲ್ಲ. ಜಿಲ್ಲಾಧಿಕಾರಿ, ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕು.-ಮೋಹನ್ ಬೆಂಗ್ರೆ, ಮೀನುಗಾರರ ಸಂಘದ ಪ್ರಮುಖರು ರಾಜ್ಯದ ಮೀನುಗಾರರ ಮೇಲೆ ತಮಿಳುನಾಡು ಮೀನುಗಾರರು ದಾಳಿ ನಡೆಸುತ್ತಿರುವ ಆರೋಪಗಳು ಕೇಳಿಬಂದಿದ್ದು, ಬುಧವಾರ ನಡೆದಿರುವ ಆಕ್ರಮಣದ ವೀಡಿಯೋಗಳು ಲಭ್ಯವಾಗಿವೆ. ಇದು ಅಂತಾರಾಜ್ಯ ವಿಚಾರವಾಗಿರುವುದರಿಂದ ಸರಕಾರ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ನಮ್ಮ ರಾಜ್ಯ ವ್ಯಾಪ್ತಿಯಲ್ಲಿ ತಮಿಳುನಾಡಿನವರು ಅನಧಿಕೃತವಾಗಿ ಮೀನುಗಾರಿಕೆ ನಡೆಸಿದರೆ ಕ್ರಮ ಕೈಗೊಳ್ಳುತ್ತೇವೆ.
-ಹರೀಶ್ ಕುಮಾರ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ, ದ.ಕ. – ಸಂತೋಷ್ ಬೊಳ್ಳೆಟ್ಟು