ಮುಳಬಾಗಿಲು: ಟಣ್, ಟಣ್, ಟಣ್ ಎಂದು ದಿನವಿಡೀ ನೂರಾರು ಉಳಿ ಮತ್ತು ಸುತ್ತಿಗೆಗಳ ಸದ್ದು ಮೊಳಗುತ್ತಿದ್ದ ಓಬಳೇಶ್ವರಸ್ವಾಮಿ ಬಂಡೆ ಮೇಲೀಗ ಯಾವುದೇ ಸದ್ದು ಗದ್ದಲವಿಲ್ಲದೇ ಮೌನಾವರಿಸಿದೆ.
ವಿಧಾನಸೌದದಲ್ಲಿ ಇತ್ತೀಚಿಗೆ ರಾಜಕಾರಣಿ ಯೊಬ್ಬರು ಮೊಳಗಿಸಿದ ಕಹಳೆಯಿಂದ, ಎಚ್ಚೆತ್ತ ಸರ್ಕಾರ, ಅರಣ್ಯ ಇಲಾಖೆ ವಿರುದ್ಧ ಗರಂ ಆಗಿದ್ದರಿಂದ ತಲ್ಲಣಗೊಂಡ ಸ್ಥಳೀಯ ಅರಣ್ಯಾಧಿಕಾರಿಗಳು, ಕಾಯ್ದಿಟ್ಟ ಅರಣ್ಯದಲ್ಲಿರುವ ಬಂಡೆ ಮೇಲಿನ ಸದ್ದಡಗಿಸಿ ಹದ್ದಿನ ಕಣ್ಣಿಡುವ ಮೂಲಕ ಅಕ್ರಮ ಗಣಿಗಾರಿಕೆಯನ್ನು ಕೊನೆಗಾಣಿಸಿದ್ದಾರೆ.
ತಾಲೂಕಿನ ದುಗ್ಗಸಂದ್ರ ಹೋಬಳಿ ಕೊಂಡ ತಿಮ್ಮನಹಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯದಲ್ಲಿರುವ ಸ.ನಂ.70ರಲ್ಲಿ 375 ಎಕರೆ ಜಮೀನಿದ್ದು, ಅದರಲ್ಲಿ 250 ಎಕರೆ ಖರಾಬು ಗೋಮಾಳ ಮತ್ತು 90 ಎಕರೆ ರಾಜ್ಯ ಅರಣ್ಯ ಇಲಾಖೆ ಜಮೀನಿದೆ. ಈ ಅರಣ್ಯ ಭೂಮಿಯಲ್ಲಿ ಬೃಹತ್ ಕಲ್ಲು ಬಂಡೆಯಿದ್ದು, ಅದರ ಮೇಲೆ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಓಬ ಳೇಶ್ವರಸ್ವಾಮಿ ದೇಗುಲವಿದೆ. ಈ ಬಂಡೆಯ ಮೇಲೆ ಹಲವು ದಶಕಗಳಿಂದ ಕಲಿಕೆರೆ, ಅಂಬ್ಲಿಕಲ್, ಬಾಳ ಸಂದ್ರ, ಮುಳಬಾಗಿಲು, ಕದರೀಪುರ, ಕುರುಡುಮಲೆ, ಕಗ್ಗಲನತ್ತ, ಹರಪನಾಯಕನಹಳ್ಳಿ, ವೆಮ್ಮಸಂದ್ರ, ದೇವ ರಾ ಯಸಮುದ್ರ, ಮುಡಿಯನೂರು, ಗುಜ್ಜನಹಳ್ಳಿ, ಕಲ್ಲರಸನಹಳ್ಳಿ, ಕೋಡಿಹಳ್ಳಿ, ಮಾದಘಟ್ಟ, ಪೂಜಾರ ಹಳ್ಳಿ ಗ್ರಾಮಗಳ ನೂರಾರು ಕಲ್ಲು ಕುಟಿಗರು ಕಲ್ಲು ಹೊಡೆ ದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
25 ಅಡಿ ಆಳದಷ್ಟು ಕರಗಿದ ಬಂಡೆ: ಹಲವಾರು ವರ್ಷಗಳಿಂದಲೂ ಈ ಬಂಡೆಯು ಕಾಯ್ದಿಟ್ಟ ಅರಣ್ಯ ಇಲಾಖೆಗೆ ಸೇರಿದೆ ಎಂದು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಲ್ಲು ಹೊಡೆಯದಂತೆ ತಡೆಯೊ ಡ್ಡುತ್ತಲೇ ಇದ್ದರು. ಆದರೆ, ಕಲ್ಲು ಕುಟಿಗರು ಸದರಿ ಪ್ರದೇಶವು ಕಂದಾಯ ಇಲಾಖೆಗೆ ಸೇರಿದೆ ಎಂದು ಕೂಗಾಡುತ್ತಲೇ ಬಂಡೆ ಹೊಡೆದು ಮಾರಾಟ ಮಾಡುತ್ತಿದ್ದರು. ಕೊನೆಗೂ ಎಚ್ಚೆತ್ತ ಪ್ರಾದೇಶಿಕ ಅರಣ್ಯ ಇಲಾಖೆ ಮೈಸೂರಿನಿಂದ ಸರ್ವೇ ಸಿಬ್ಬಂದಿ ಕರೆಸಿ 2-3 ಬಾರಿ ಜಂಟಿ ಸರ್ವೇ ಮಾಡಿಸಿ ಕಾಯ್ದಿಟ್ಟ ಅರಣ್ಯದ ಗಡಿ ಗುರುತಿಸಿ ಕಲ್ಲುಗಳನ್ನು ಹಾಕಿಸಿದ್ದಾರೆ. ಅದರಂತೆ ಶೇ.75ರಷ್ಟು ಓಬಳೇಶ್ವರಸ್ವಾಮಿ ಬಂಡೆಯು ಅರಣ್ಯ ಇಲಾಖೆಗೆ ಸೇರಿದ್ದರಿಂದ ಅರಣ್ಯಾಧಿಕಾರಿಗಳು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿ ಸುತ್ತಿದ್ದರು. ಆದರೆ, ಕಾಲಕಾಲಕ್ಕೆ ಇಲಾಖೆಯಲ್ಲಿ ವರ್ಗಾವಣೆ ಎಂಬ ಅಸ್ತ್ರದಿಂದ ಅಧಿಕಾರಿಗಳು ಬದಲಾದಾಗ ಕಲ್ಲು ಕುಟಿಗರು ಅದನ್ನೇ ನೆಪ ಮಾಡಿಕೊಂಡು ಸದಾ ಕಲ್ಲು ಹೊಡೆಯುವ ಮೂಲಕ ನಿರಂತರವಾಗಿ ಕಾಯ್ದಿಟ್ಟ ಅರಣ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆದಿದ್ದರಿಂದ ಈ ಬಂಡೆಯು ಸುಮಾರು 25 ಅಡಿಗಳಷ್ಟು ಆಳದವರೆಗೆ ಕರಗಿ ಹೋಗಿದೆ.
ಗಣಿಗಾರಿಕೆ ಸಂಪೂರ್ಣ ಸ್ಥಗಿತ: ಇತ್ತೀಚಿಗೆ ವಿಧಾನಸೌದದಲ್ಲಿ ಓಬಳೇಶ್ವರಸ್ವಾಮಿ ಬಂಡೆ ಮೇಲೆ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಪ್ರತಿಧ್ವನಿಸಿತ್ತು. ಇದರಿಂದ ಸರ್ಕಾರವು ಅರಣ್ಯ ಇಲಾಖೆ ವಿರುದ್ಧ ಗರಂ ಆಗಿ ಓಬಳೇಶ್ವರಸ್ವಾಮಿ ಬಂಡೆಯತ್ತ ಮುಖ ಮಾಡಿದ್ದರಿಂದ ತಲ್ಲಣಗೊಂಡ ಸ್ಥಳೀಯ ಅರಣ್ಯಾಧಿಕಾರಿಗಳು, ಅಲ್ಲಿಗೆ ದೌಡಾಯಿಸಿ ಕಲ್ಲು ಕುಟಿಗರನ್ನು ಓಡಿಸಿ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಮುಂದೆಯೂ ನಡೆಯದಂತೆ ಹದ್ದಿನ ಕಣ್ಣಿಡಲು ಸಾಕಷ್ಟು ಸಿಬ್ಬಂದಿ ನಿಯೋಜಿಸಿದ್ದಾರೆ. ಇದರಿಂದ ತಲ್ಲಣಗೊಂಡ ಕಲ್ಲು ಕುಟಿಗರು ಓಬಳೇಶ್ವರಸ್ವಾಮಿ ಬಂಡೆ ಮೇಲೆ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸುವಂತೆ ಶಾಸಕ ಸಮೃದ್ಧಿ ಮಂಜುನಾಥ್‌ಗೆ ಮನವಿ ಮಾಡಿದ್ದರಿಂದ ಕಲ್ಲು ಹೊಡೆಯಲು ಅವಕಾಶ ಕಲ್ಪಿಸುವಂತೆ ಅರಣ್ಯಾಧಿ ಕಾರಿ ಗಳಿಗೆ ತಾಕೀತು ಮಾಡಿದ್ದರು. ಆದರೆ, ಅಧಿ ಕಾರಿಗಳು ಒಪ್ಪದೇ ಇದ್ದರಿಂದ ಸಿಡಿದೆದ್ದ ಶಾಸಕರು, ಕಾನೂನಿನಂತೆ ಕಾಯ್ದಿಟ್ಟ ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲವೆಂಬ ವಿಚಾರ ತಿಳಿದಿದ್ದರೂ, ಅರಣ್ಯಾಧಿಕಾರಿಗಳಿಗೆ ಸವಾಲು ಹಾಕಿದರಲ್ಲದೇ ಕಲ್ಲು ಕುಟಿಗರ ಪರವಾಗಿ ಕಾನೂನು ಹೋರಾಟಕ್ಕೆ ಹೋಗುವುದಾಗಿ ಘೋಷಿಸಿದರು. ಶಾಸಕರು ಮತ್ತು ಅರಣ್ಯಾಧಿಕಾರಿಗಳ ನಡುವಿನ ಮಾತಿನ ಜಟಾಪಟಿಯಿಂದ ಪ್ರಸ್ತುತ ಬಂಡೆಯ ಮೇಲೆ ಅಕ್ರಮ ಕಲ್ಲು ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಸರ್ಕಾರದ ಕಟ್ಟುನಿಟ್ಟಿನ ಆದೇಶ: ಕಂದಾಯ ಜಮೀನುಗಳಲ್ಲಿರುವ ಕಲ್ಲು ಬಂಡೆ ಗುರುತಿಸಿ, ಸರ್ವೇ ಮಾಡಿಸಿ, ಚಿಕ್ಕ ಚಿಕ್ಕ ಬ್ಲಾಕ್ ಮಾಡಿದ್ದು, ಸದರಿ ಕಲ್ಲು ಕುಟಿಗರಿಗೆ ಕಾನೂನು ರೀತಿ ಅವಕಾಶ ಕಲ್ಪಿಸಲು 2019ರ ಜನವರಿ 1ರಂದು ನಡೆದ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ, ಪೊಲೀಸ್ ಇಲಾಖೆ ಮತ್ತು ಕಲ್ಲು ಕುಟಿಗರು ಹಾಜ ರಿದ್ದ ಸಂಸದ ಕೆ.ಎಚ್.ಮುನಿಯಪ್ಪ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಶಾಸಕ ಎಚ್.ನಾಗೇಶ್ ಒಳಗೊಂಡ ಸಭೆಯಲ್ಲಿ ನಿರ್ಧರಿಸಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಂತಹ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಕಾಯ್ದಿಟ್ಟ ಅರಣ್ಯದಲ್ಲಿ ಯಾವುದೇ ಕಾರಣಕ್ಕೂ ಕಲ್ಲು ಗಣಿಗಾರಿಕೆಗೇ ಅವಕಾಶ ನೀಡಬಾರದೆಂಬ ಸರ್ಕಾರದ ಕಟ್ಟುನಿಟ್ಟಿನ ಆದೇಶ ಪಾಲಿಸಲು ಅರಣ್ಯಾಧಿಕಾರಿಗಳು ಶ್ರಮಿಸುತ್ತಿ ದ್ದರೆ, ಅಕ್ರಮ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲೇಬೇಕೆಂದು ಸಾಕಷ್ಟು ಒತ್ತಡ ಹೇರುತ್ತಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿ ಗಳಿ ಗಳಂತೂ ಅತ್ತ ದರಿ, ಇತ್ತ ಪುಲಿ ಎನ್ನುವಂತಾಗಿದೆ. ಸರ್ಕಾರದ ಆದೇಶ ಪಾಲಿಸ ಬೇಕೋ? ಅಥವಾ ಶಾಸಕರ ಮಾತಿಗೆ ಮನ್ನಣೆ ನೀಡಬೇಕೋ? ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.
ಕೊಂಡತಿಮ್ಮನಹಳ್ಳಿಯ ಕಾಯ್ದಿಟ್ಟ ಅರಣ್ಯದಲ್ಲಿರುವ ಓಬಳೇಶ್ವರಸ್ವಾಮಿ ಬಂಡೆಯ ಮೇಲೆ ಯಾವುದೇ ಕಾರಣಕ್ಕೂ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಸರ್ಕಾರ ಈ ಹಿಂದೆಯೇ ಆದೇಶ ನೀಡಿದೆ. ಅದನ್ನು ಪಾಲಿಸಲು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ನಾನು ಸ್ಥಳಕ್ಕೆ ಭೇಟಿ ನೀಡಿದ್ದು, ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮುಂದೆಯೂ ಅವಕಾಶ ನೀಡುವುದಿಲ್ಲ.
-ವಿ.ಏಡುಕೊಂಡಲು, ಅರಣ್ಯ ಉಪ ಸಂರಕ್ಷಣಾಧಿಕಾರಿ, ಕೋಲಾರ
ಕೊಂಡತಿಮ್ಮನಹಳ್ಳಿಯ ಕಾಯ್ದಿಟ್ಟ ಅರಣ್ಯದಲ್ಲಿರುವ ಓಬಳೇಶ್ವರಸ್ವಾಮಿ ಬಂಡೆಯ ಮೇಲೆ ಯಾವುದೇ ಕಾರಣಕ್ಕೂ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂಚಿಸಿದ್ದು, ಅರಣ್ಯಕ್ಕೆ ಯಾವುದೇ ತೊಂದರೆ ಆಗದಂತೆ ಇಲಾಖೆ ಸಿಬ್ಬಂದಿ ಸದಾ ಹದ್ದಿನ ಕಣ್ಣಿಟ್ಟಿದ್ದಾರೆ.
-ಜ್ಯೋತಿ, ವಲಯಾರಣ್ಯಾಧಿಕಾರಿ, ಪ್ರಾದೇಶಿಕ ಅರಣ್ಯ ಇಲಾಖೆ, ಮುಳಬಾಗಿಲು
– ಎಂ.ನಾಗರಾಜಯ್ಯ