Advertisement

Plaster of Paris Ganesha idol: ಪಿಒಪಿ ಗಣಪನ ಮೂರ್ತಿಗಳ ತಯಾರಿಕೆ-ಮಾರಾಟ ನಿಷೇಧ

03:58 PM Aug 19, 2023 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಪಿಒಪಿ, ಪೇಪರ್‌ ಮೋಲ್ಡ್‌ ಗಣೇಶನ ಮೂರ್ತಿಗಳನ್ನು ಬಿಡಿ, ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ತನ್ನಿ ಎನ್ನುವ ಕೂಗು ಎದ್ದಿದೆ. ಈ ನಡುವೆ ಜಿಲ್ಲೆಯಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣೇಶ ಮೂರ್ತಿಯನ್ನು ತಯಾರಿಸದಂತೆ  ನಿಷೇಧ ಹೇರಲಾಗಿದೆ.

Advertisement

ಗೌರಿ ಗಣೇಶ ಹಬ್ಬಕ್ಕೆ ಇನ್ನು ಒಂದು ತಿಂಗಳು (ಸೆ.18) ಬಾಕಿಯಿದೆ. ಈಗಿನಿಂದಲೇ ಪಿಒಪಿ ಗೌರಿ ಗಣಪತಿ ಮೂರ್ತಿಗಳನ್ನು ತಯಾರಿಸದಂತೆ, ಬೇರೆ ರಾಜ್ಯಗಳಿಂದ ಜಿಲ್ಲೆಯ ಮಾರುಕಟ್ಟೆ ಪ್ರವೇಶಿಸದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಅಧಿಕಾರಿಗಳಿಂದ ಕ್ರಮ: ಪಿಒಪಿ ನೀರಿನಲ್ಲಿ ಕರಗದ ವಸ್ತು. ಇದರಿಂದ ಬಾವಿ, ಕೆರೆ, ಕುಂಟೆ, ಸರೋವರ, ನದಿ ನೀರು ಕಲುಷಿತಗೊಳ್ಳುತ್ತದೆ. ನೀರನ್ನು ಕಲುಷಿತಗೊಳಿ ಸುವ ರಾಸಾಯನಿಕ ಬಣ್ಣ ಲೇಪಿತ, ಪಿಒಪಿ ಗಣಪತಿ, ಗೌರಿ ಮೂರ್ತಿ ಗಳನ್ನು ತಯಾರಿಸದಂತೆ, ದಾಸ್ತಾನು ಮತ್ತು ಮಾರಾಟ ಮಾಡ ದಂತೆ ಜನ ಜಾಗೃತಿ ಮತ್ತು ಕ್ರಮ ಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ.

ಸೂಚನೆ: ಪಿಒಪಿಯಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ಕೆರೆ, ಕಟ್ಟೆ, ನದಿಯಲ್ಲಿ ಬಿಡುವುದರಿಂದ ಕುಡಿಯುವ ನೀರು ಕಲುಷಿತಗೊಳ್ಳುತ್ತದೆ. ಇದರಿಂದ ವಿವಿಧೆಡೆ ಜೀವ ಹಾನಿಯೂ ಆಗಿದೆ. ಜನ ಜಾನುವಾರುಗಳ ಜೀವ ಉಳಿಸಲು ಮತ್ತು ರಕ್ಷಿಸಲು ಪಿಒಪಿಯಿಂದ ತಯಾರಿಸಿದ ಹಾಗೂ ಲೋಹಯುಕ್ತ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಿದ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ.

ಜನರ ಭಕ್ತಿ, ಭಾವ ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಪರಿಸರ ಸ್ನೇಹಿ, ಮಣ್ಣಿನ ಗೌರಿ, ಗಣಪತಿಯನ್ನು ತಯಾರಿಸುವಂತೆ ತಯಾರಿಕರಿಗೆ ಕಳೆದ ಕೆಲವು ವರ್ಷಗಳಿಂದ ಸೂಚನೆ ನೀಡಲಾಗುತ್ತಿದೆ. ಹಾಗೆಯೇ ಈ ಬಾರಿಯೂ ತಯಾರಿಕರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ. ಉಮಾಶಂಕರ್‌ “ಉದಯವಾಣಿ’ಗೆ ತಿಳಿಸಿದರು.

Advertisement

ಜನರಿಗೂ ಈ ಬಗ್ಗೆ ಜಾಗೃತಿ ಮೂಡಿದೆ. ಇಲಾಖೆಯಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ. ಒಂದು ವೇಳೆ ಪಿಒಪಿ ಗಣಪತಿ ಮಾರಾಟ ಕಂಡುಬಂದಲ್ಲಿ, ಸಾರ್ವಜನಿಕರು ಇಲಾಖೆಗೆ ದೂರು ನೀಡಬೇಕು. ಅಂತಹ  ಪ್ರಕರಣ ಕಂಡು ಬಂದಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

ಚೆಕ್‌ಪೋಸ್ಟ್‌ಗಳಿಗೆ ಆದೇಶ: ಕಳೆದ ವರ್ಷ ಜಿಲ್ಲೆಯಲ್ಲಿ ಪಿಒಪಿ ಗಣಪತಿ ಗೌರಿ ಮಾರಾಟ ಇರಲಿಲ್ಲ. ಹೀಗಾಗಿ ದಂಡ ವಿಧಿಸಿರುವ ಪ್ರಕರಣ ಇಲ್ಲ. ನಮ್ಮ ನೆರೆಯಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಗಳಿದ್ದು, ಅಲ್ಲಿಂದ ಯಾವುದೇ ಗಣೇಶ ಮೂರ್ತಿ ಮಾರಾಟ ನಡೆದಿಲ್ಲ.  ಏಕೆಂದರೆ ಕೇರಳ, ತಮಿಳುನಾಡಿನಲ್ಲಿ ಗಣೇಶ ಮೂರ್ತಿಯ ತಯಾರಿಕೆ ಅಷ್ಟೊಂದು ಇಲ್ಲ. ಮಹಾರಾಷ್ಟ್ರದಲ್ಲಿ ಗಣೇಶ ಮೂರ್ತಿ ತಯಾರಿಕೆ ವ್ಯಾಪಕವಾಗಿದ್ದು, ಆ ಗಡಿ ರಾಜ್ಯದ ತುತ್ತತುದಿಯಲ್ಲಿದ್ದು, ನಮ್ಮ ಜಿಲ್ಲೆಗೆ ಅಲ್ಲಿಂದ ಗಣೇಶಮೂರ್ತಿ ಬರುತ್ತಿಲ್ಲ ಎಂದು  ಹೇಳಿದರು. ಗಣೇಶ ಮಾರಾಟ ಆರಂಭವಾಗುವ ಸಂದರ್ಭದಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದಿಂದ ಗಣೇಶಮೂರ್ತಿಗಳು ಸಾಗಾಣಿಕೆಯಾದರೆ, ಅವುಗಳನ್ನು ಪರಿಶೀಲಿಸಿ, ಪಿಒಪಿ ಗಣಪತಿ ಇದೆಯೇ ಎಂದು ಪರಿಶೀಲಿಸಲು  ಚೆಕ್‌ ಪೋಸ್ಟ್‌ಗಳಿಗೂ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ಪರಿಸರ ಅಧಿಕಾರಿಗಳ ಎಚ್ಚರಿಕೆ: ಪಿಒಪಿ ಗಣಪತಿ ಮಾರಾಟ, ತಯಾರಿಕೆ ಬಗ್ಗೆ ಜಿಲ್ಲೆಯ ನಗರಸಭೆ, ಪುರಸಭೆ, ಪಪಂಗಳ ಪರಿಸರ ಅಧಿಕಾರಿಗಳು  ನಿಗಾ ವಹಿಸಿದ್ದಾರೆ. ತಯಾರಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಪರಿಸರ ಅಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚುತ್ತೆ:

ನಮ್ಮ ಜಿಲ್ಲೆಯಲ್ಲಿ ಮಣ್ಣಿನ ಗಣೇಶನನ್ನೇ ತಯಾರಿಸುತ್ತಾರೆ. ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಪರಿಸರ ಸ್ನೇಹಿ, ಮಣ್ಣಿನ ಗಣೇಶನನ್ನು ತಯಾರಿಸಲಾಗುತ್ತಿದೆ. ಮಾರಾಟ ಮಾಡದಂತೆಯೂ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದೇವೆ. ಇದರ ಪರಿಣಾಮವಾಗಿ ಪಿಒಪಿ ಗಣಪತಿ ಮಾರಾಟ ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ.ಉಮಾಶಂಕರ್‌ “ಉದಯವಾಣಿ’ಗೆ ತಿಳಿಸಿದರು.

ಮನೆಯಲ್ಲೇ ಪುಟ್ಟ ಮೂರ್ತಿ ತಯಾರಿಸಿ:

ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು, ಜೇಡಿ ಮಣ್ಣು ಅಥವಾ ಮಣ್ಣಿನಿಂದ ತಯಾರಿಸಿದ ಬಣ್ಣ ರಹಿತ ಗಣೇಶ ಮೂರ್ತಿಯನ್ನು ಖರೀದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆದಷ್ಟೂ ಮನೆಗಳಲ್ಲಿ ಅರಿಶಿಣ ಮಿಶ್ರಿತ ಗೋಧಿ ಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶನನ್ನು ಪ್ರತಿಷ್ಠಾಪಿಸಬೇಕು. ಮನೆಯಲ್ಲೇ ಬಕೆಟ್‌ನಲ್ಲಿ ವಿಸರ್ಜಿಸಬೇಕು. – ಪಿ.ಕೆ.ಉಮಾಶಂಕರ್‌, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ.

ಜನರು ಪಿಒಪಿ ಮೂರ್ತಿ ಬಿಟ್ಟು ಮಣ್ಣಿನ ಮೂರ್ತಿ ಮಾತ್ರ ಪ್ರತಿಷ್ಠಾಪಿಸುತ್ತೇವೆ ಎಂದು ನಿರ್ಧರಿಸಬೇಕು. ಆಗ ಮಾತ್ರ ಪಿಒಪಿ ಮೂರ್ತಿಗಳು ತನ್ನಷ್ಟಕ್ಕೆ ತಾನೇ ನಿಷೇಧವಾಗುತ್ತದೆ.ಇಂತಹ ನಿರ್ಧಾರವನ್ನು ಜನ ಈ ವರ್ಷವೇ ಮಾಡಿದರೆ, ಮುಂದಿನ ವರ್ಷಕ್ಕಾದರೂ ಪೂರ್ಣ ನಿಷೇಧ ಆಗಬಹುದು.-ಡಾ.ನಾಗರಾಜು, ಆರೋಗ್ಯಾಧಿಕಾರಿ ಮೈಸೂರು ಮಹಾನಗರ ಪಾಲಿಕೆ

 

Advertisement

Udayavani is now on Telegram. Click here to join our channel and stay updated with the latest news.

Next