ದೇವನಹಳ್ಳಿ: ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ 5 ಸಾವಿರಕ್ಕಿಂತ ಹೆಚ್ಚಿನ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ನೌಕರರ ಹಾಗೂ ಹಾಲು ಉತ್ಪಾದಕರ ಹಿತ ಕಾಯುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿದೇರ್ಶಕ ಬಿ.ಶ್ರೀ ನಿವಾಸ್ ತಿಳಿಸಿದರು.
ನಗರದ ಪುಟ್ಟಪ್ಪನ ಗುಡಿ ಬೀದಿಯ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಅನುಕೂಲವಾಗಲಿದೆ: ನೌಕರರ ನಿವೃತ್ತಿ ನಂತರ ಪ್ರೋತ್ಸಾಹ ಧನ 50 ಸಾವಿರ ದಿಂದ 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ನೌಕರರಿಗೆ ಮಾಸಿಕ ವೇತನವಿಲ್ಲ. ಸಹಕಾರ ಸಂಘದಲ್ಲಿ ಸಂಗ್ರಹವಾಗುವ ಹಾಲಿನ ಪ್ರಮಾಣ ಆಧರಿಸಿ ಗೌರವ ಧನ ಪಡೆಯುತ್ತಿದ್ದಾರೆ. ನೌಕರರಿಗೆ ಸೇವಾ ಭದ್ರತೆ ನೀಡಬೇಕು ಎಂಬ ಚಿಂತನೆ ಒಕ್ಕೂಟದಲ್ಲಿದ್ದರೂ ಸಮರ್ಪಕ ಚರ್ಚೆಯಾಗಿಲ್ಲ. ನೌಕರರ ಅನೇಕ ಬೇಡಿಕೆ ಇದೆ.ಇಂದೇ ಬಗೆಹರಿಸಲು ಸಾಧ್ಯವಿಲ್ಲ. ಇತ್ತೀಚಿಗಷ್ಟೇ ಕನಕ ಪುರದಲ್ಲಿ ಮೆಗಾ ಡೇರಿ ಕಾರ್ಯಾರಂಭ ಮಾಡಿದೆ ಮುಂದೆ ಅನುಕೂಲವಾಗಲಿದೆ ಎಂಬ ವಿಶ್ವಾಸ ವಿದೆ ಎಂದರು.
70 ಲಕ್ಷ ರೂ.ವೆಚ್ಚ: ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಚನ್ನಕೇಶವ, ಸಂಘ ನೋಂದಣಿ ಆದ ನಂತರ ನೂತನ ಪದಾಧಿಕಾರಿಗಳು ನೇಮಕಗೊಂಡು ಸಂಘದಲ್ಲಿ ಯಾವುದೇ ಸಂಪನ್ಮೂಲವಿಲ್ಲದೆ ನಿವೇಶನ ಖರೀದಿ ಮತ್ತು ಭವನ ನಿರ್ಮಾಣಕ್ಕೆ ಸುಮಾರು 70 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇದು ನಿರಂತರ ಒಂದು ವರ್ಷದ ಶ್ರಮ ವಾಗಿದೆ. ಈ ಹಿಂದಿನ ಶಾಸಕ ಪಿಳ್ಳ ಮುನಿಶಾಮಪ್ಪ ಮತ್ತು ಹಾಲಿ ಶಾಸಕ ನಾರಾಯಣಸ್ವಾಮಿ, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ಶ್ರೀನಿವಾಸ್ ಸಹಕಾರ ಅತಿ ಮುಖ್ಯಾವಾಗಿದೆ ಎಂದು ತಿಳಿಸಿದರು.
ಕುಂದುಕೊರತೆ ಚರ್ಚಿಸಲು ಅನುಕೂಲ: ತಾಲೂಕಿನಲ್ಲಿರುವ 181 ಹಾಲು ಉತ್ಪಾದಕರ ಸಹಕಾರ ಸಂಘಗಳು ಬೆಂಬಲಿಸಿ ಹಣ ನೀಡಿವೆ. ಕೆಲ ದಾನಿಗಳು ವೈಯಕ್ತಿಕವಾಗಿ ಧನ ಸಹಾಯ ಮಾಡಿದ ಪರಿಣಾಮ ಒಂದು ಶಾಶ್ವತ ಭವನ ನಿರ್ಮಾಣ ಮಾಡಿ ನೌಕರರ ಕುಂದು ಕೊರತೆ ಚರ್ಚಿಸಲು ಅನುಕೂಲವಾಗಿದೆ ಎಂದು ಹೇಳಿದರು.
ದೇವನಹಳ್ಳಿ ಹಾಲು ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಗಂಗಯ್ಯ, ಸಹಾಯಕ ವ್ಯವ ಸ್ಥಾಪಕ ಮುನಿರಾಜೇಗೌಡ, ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಮುನಿರಾಜು, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾ ಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಲೋಕೇಶ್, ಖಜಾಂಚಿ ರಮೇಶ್, ಸಂಘಟನಾ ಕಾರ್ಯದರ್ಶಿ ಬಿ.ರಾಜಣ್ಣ, ಐಸಿ ವಿಜಯ್ ಕುಮಾರ್, ನಿರ್ದೇಶಕರಾದ ಕೆ.ಸಿ.ಉಮಾ, ಅಶ್ವತ್ಥ ನಾರಾಯಣಸ್ವಾಮಿ, ಜಯರಾಮಯ್ಯ ಇದ್ದರು.