Advertisement
ಒಂದು ತಿಂಗಳ ಹಿಂದಷ್ಟೇ 15.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ ಈಗ ಅದು 15 ಲಕ್ಷ ಲೀಟರ್‌ಗೆ ಬಂದು ತಲುಪಿದೆ. ಮುಂದಿನ ದಿನಗಳಲ್ಲಿ ಬಿರುಬಿಸಿಲ ಪರಿಸ್ಥಿತಿ ಹೀಗೆ ಮುಂದುವರಿದರೆ ಹಾಲು ಉತ್ಪಾದನೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಆತಂಕ ಎದುರಾಗಿದೆ.
Related Articles
Advertisement
20 ಸಾವಿರ ರೈತರು ಹೈನೋದ್ಯಮದಿಂದ ವಿಮುಖ: ಹೊರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಹಣ ಪ್ರತಿ ಲೀಟರ್‌ಗೆ 10 ರಿಂದ 15 ರೂ. ಕಡಿಮೆ ಇದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹಾಲಿನ ದರ 3 ರೂ.ಏರಿಸಿದೆ. ಆದರೆ ಅದು ಸಾಲದು. ಹೈನುಗಾರಿಕೆಯಲ್ಲಿ ಖರ್ಚು ಅಧಿಕ ಆದರೆ ಲಾಭ ಕಡಿಮೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ರೈತರು ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರೆ ಎಂದು ರಾಮೋಹಳ್ಳಿಯಲ್ಲಿ ರೈತ ಬೋರೇಗೌಡ ಹೇಳುತ್ತಾರೆ. ಬಮೂಲ್ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಸಂಖ್ಯೆ ಯಲ್ಲಿ ರೈತರು ಹಸುಗಳನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಒಕ್ಕೂಟ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ರೈತರು ಕೋವಿಡ್ ಬಂದು ಹೋದ ಬಳಿಕ ಹೈನೋದ್ಯಮದಿಂದ ವಿಮುಖರಾ ಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.
2 ಲಕ್ಷ ಲೀಟರ್ ಮೊಸರಿಗೆ ಬಳಕೆ: ಬೆಂಗಳೂರು ಸಹಕಾರ ಹಾಲು ಒಕ್ಕೂಟ ಈಗ ನಿತ್ಯ 15 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತದೆ. ಇದರಲ್ಲಿ 11 ಲಕ್ಷ ಲೀಟರ್ ಹಾಲು ನಿತ್ಯದ ಗ್ರಾಹಕರ ಬಳಕೆಗೆ ಮಾರಾಟ ಮಾಡಲಾಗುತ್ತಿದೆ. ಉಳಿದ 2 ಲಕ್ಷ ಲೀಟರ್ ಹಾಲನ್ನು ಮೊಸರು ಉತ್ಪಾದನೆಗೆ ಬಳಸಲಾಗುತ್ತಿದೆ ಎಂದು ಬಮೂಲ್‌ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಸುಮಾರು 50 ಸಾವಿರ ಲೀಟರ್ ಹಾಲನ್ನು ಆಂಧ್ರಪ್ರದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಉಳಿದ ಹಾಲನ್ನು ಸಿಹಿ ತಿನಿಸು, ಪೌಡರ್ ಮತ್ತಿತರರ ಆಹಾರ ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತಿದೆ. ಹಸುಗಳಿಗೆ ಹಸಿ ಮೇವು ದೊರೆತರೆ ಅಧಿಕ ಪ್ರಮಾಣದಲ್ಲಿ ಹಾಲು ನೀಡುತ್ತವೆ. ಆದರೆ ಇದೀಗ ಹೇರಳವಾಗಿ ಹಸಿ ಮೇವು ರಾಸುಗಳಿಗೆ ದೊರಕದೇ ಇರುವುದು ಹಾಲಿನ ಪೂರೈಕೆಯಲ್ಲಿ ಕಡಿಮೆ ಆಗಿದೆ ಎನ್ನುತ್ತಾರೆ.
ರಾಸುಗಳಿಗೆ ಹಸಿಮೇವು ದೊರೆಯದೇ ಇರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದ ಹಾಲು ಉತ್ಪಾದನೆ ಆಗುತ್ತಿಲ್ಲ. ಪ್ರತಿ ವರ್ಷ ಈ ಅವಧಿಯಲ್ಲಿ 17 ಲಕ್ಷ ಲೀಟರ್ ಹಾಲು ಪೂರೈಕೆ ಆಗುತಿತ್ತು. ಆದರೆ ಬಿರುಬಿಸಿಲಿನ ಹಿನ್ನೆಲೆಯಲ್ಲಿ ರಾಸು ಹಸುಗಳಿಗೆ ಮೇವು ಸಿಗುತ್ತಿಲ್ಲ. ಕೋಲಾರ ಮತ್ತಿತರ ಕಡೆ ಕೂಡ ಇದೇ ಪರಿಸ್ಥಿತಿಯಿದೆ. – ಎಚ್.ಪಿ.ರಾಜಕುಮಾರ್, ಬಮೂಲ್ ಅಧ್ಯಕ್ಷ
– ದೇವೇಶ ಸೂರಗುಪ್ಪ