ಮಾಗಡಿ: ನಾನು ಬಮೂಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ನಿಮ್ಮಿಂದ ಸಹಾಯ ಸಹಕಾರದ ಅಗತ್ಯವಿದೆ ಎಂದು ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ನರಸಿಂಹಮೂರ್ತಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಮನದ ಇಂಗಿತವನ್ನು ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹಮೂರ್ತಿ, ನನ್ನನ್ನು ಸೋಲಿಸಲು ಹುಲಿ ಬಂತು ಹುಲಿ ಎಂದ ವಿರೋಧಿಗಳಿಗೆ ಡೇರಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಆಗ ಹುಲಿಯೂ ಇಲ್ಲ, ಇಲಿಯೂ ಬರಲಿಲ್ಲ ಎಂದು ವ್ಯಂಗ್ಯವಾಡಿದರು.
ಮಾಗಡಿ ಕ್ಷೇತ್ರದಿಂದ ಡೇರಿ ಚುನಾವಣೆಯಲ್ಲಿ ಮತದಾರರು 5ನೇ ಬಾರಿಗೆ ಮತ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ಮೊದಲು ಧನ್ಯವಾದಗಳನ್ನು ಸಲ್ಲಿಸುತ್ತೇನೆ. 5ನೇ ಬಾರಿಗೆ ನಿರ್ದೇಶಕನಾಗಿರುವ ನನಗೆ ಡೇರಿ ಅಧ್ಯಕ್ಷ ಸ್ಥಾನಕ್ಕೇರುವ ಎಲ್ಲಾ ಅರ್ಹತೆ ಇರುವುದರಿಂದ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಈ ಸಂಬಂಧ ಸಚಿವರು ಸಹ ಎಲ್ಲರೊಂದಿಗೆ ಚರ್ಚಿಸಿ ನನಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಅವರಲ್ಲಿಯೂ ಈ ಕುರಿತು ಚರ್ಚಿಸಿದ್ದೇನೆ. ನಾಲ್ಕು ಬಾರಿ ನಿರ್ದೇಶಕನಾಗಿ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡಿ, ತೋರಿಸಿದ್ದೇನೆ. ಆದ್ದರಿಂದಲೇ ಡೇರಿ ಮತದಾರರು ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಬಹುಮತ ನೀಡುವ ಮೂಲಕ 5ನೇ ಬಾರಿಗೂ ಗೆಲ್ಲಿಸಿದ್ದಾರೆ. ಇದರಿಂದಾಗಿ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದು ಹೇಳಿದರು.
ಡೇರಿಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಡೇರಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ತರುವ ಮೂಲಕ ಅಗತ್ಯ ಸೌಲತ್ತುಗನ್ನು ಒದಗಿಸಲು ಬದ್ಧನಾಗಿದ್ದೇನೆ. ರೈತರೊಂದಿಗೆ ಚರ್ಚಿಸಿ, ವಿಶೇಷವಾಗಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಕ್ಷೇತ್ರದ ರೈತರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವುದು ನನ್ನ ಧ್ಯೇಯವಾಗಿದೆ. ರಾಜ್ಯದಲ್ಲಿಯೇ ಜಿಲ್ಲೆ ಡೇರಿ ಉದ್ಯಮ ಮಾದರಿಯಾಗುವಂತಹ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆಯ ಮಾತುಗಳನ್ನಾಡಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಡೇರಿಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ಕ್ಷೇತ್ರದಲ್ಲಿ ಕ್ಷೀರ ಕ್ರಾಂತಿ ಮಾಡಿದ್ದೇವೆ. ಇದಕ್ಕೆ ಎಲ್ಲಾ ರೈತರು ಹೆಚ್ಚಿನ ಹಾಲು ಪೂರೈಕೆ ಮಾಡಿದ್ದರಿಂದ ಸಾಧನೆ ಸಾಧ್ಯವಾಗಿದೆ. ರೈತರ ಏಳಿಗೆಯೇ ಪರಮ ಗುರಿಯಾಗಿದೆ. ಈ ಮೂಲಕ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಮಾದರಿ ಡೇರಿಯನ್ನಾಗಿ ಮಾಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಮುಖಂಡರಾದ ಎಂ.ಆರ್.ಮಂಜುನಾಥ್, ರಮೇಶ್,ಪ್ರಶಾಂತ್, ,ಮೂರ್ತಿ, ಕುಮಾರ್ ಇತರರು ಇದ್ದರು.