Advertisement
ಬಳಿಕ ವಾಹನ ಮೆರವಣಿಗೆಯ ಮೂಲಕ ರಥವನ್ನು ಅಡ್ಡಬೈಲುವರೆಗೆ ತರಲಾಯಿತು. ಅಡ್ಡಬೈಲಿನಲ್ಲಿ ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಅನಂತರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತ್ರಿಶೂಲಿನೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತರಲಾಯಿತು.
ನೂರಾರು ವರ್ಷಗಳ ಬಳಿಕ ಇದೀಗ ಮತ್ತೆ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಹೀಗಾಗಿ ಭಕ್ತರು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು ರಥದ ಅಲಂಕಾರಕ್ಕೆ ಬೇಕಾದ ಪರಿಕರಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ನೂತನ ರಥ ಮೆರವಣಿಗೆಯ ಸಂದರ್ಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಪ್ರಮುಖರಾದ ಸದಾನಂದ ರೈ ಅರ್ಗುಡಿ, ಲಿಂಗಪ್ಪ ಗೌಡ ಕಟ್ಟ , ಶ್ರೀವತ್ಸ ಎಂ.ವಿ., ಮುರಳಿ ಕಾಮತ್ ಬಳ್ಪ, ಕರುಣ್ ರಾವ್, ವಿಶ್ವನಾಥ ರೈ ಸೇರಿದಂತೆ ಊರಿನ ಭಕ್ತರು ಭಾಗವಹಿಸಿದರು. ಬ್ರಹ್ಮರಥ ಸಮರ್ಪಣೆ
ಎ. 4ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ ನಡೆದು ಸಂಜೆ ದಾನಿಗಳು ಮತ್ತು ಭಕ್ತ ಜನರಿಂದ ತ್ರಿಶೂಲಿನೀ ಅಮ್ಮನವರಿಗೆ ಬ್ರಹ್ಮರಥ ಸಮರ್ಪಣೆ ನಡೆಯಲಿದೆ. ಶ್ರೀ ಕ್ಷೇತ್ರ ಹನುಮಗಿರಿ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಅವರಿಂದ ಶ್ರೀ ಆಂಜನೇಯ ಸ್ವಾಮಿಗೆ ರಜತ ಕವಚ ಸಮರ್ಪಣೆ ನಡೆಯಲಿದೆ. ಬಳಿಕ ಎ. 5ರ ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ ನಡೆದು ಸಂಜೆ ಉತ್ಸವ ಬಲಿ ನಡೆದು ಎ. 6ರಂದು ಸಂಜೆ 9.30ಕ್ಕೆ ಬ್ರಹ್ಮರಥೋತ್ಸವ, ಸಿಡಿಮದ್ದು ಪ್ರದರ್ಶನ, ಉತ್ಸವ ಬಲಿ ನಡೆಯಲಿದೆ.