Advertisement
ಶ್ರೀ ಉಳ್ಳಾಲ್ತಿ, ದಂಡನಾಯಕ, ಮಲರಾಯ ದೈವಗಳ ನೇಮಕ್ಕೆ ಎ. 26ರಂದು ಸಂಜೆ ಎಣ್ಣೆಬೂಳ್ಯ ನೀಡಲಾಯಿತು. ಇಲ್ಲಿಂದ ಬಳಿಕ ನೇಮ ಮುಕ್ತಾಯದವರೆಗೆ ದೈವ ನರ್ತಕ ಸ್ಥಳ ಬಿಟ್ಟು ಹೋಗುವಂತಿಲ್ಲ. ಬಲ್ನಾಡು ದೈವಸ್ಥಾನದ ಈ ಸಂಪ್ರದಾಯವನ್ನು ಮೂಜಿ ದಿನತ್ತ ಆಗಿನ (ಮೂರು ದಿನದ ಆಗಿನ) ಎಂದು ಹೇಳಲಾಗುತ್ತದೆ. ಆಗಿನ ಎಂದರೆ ಧಾರ್ಮಿಕ ಉತ್ಸವಗಳ ಪ್ರಾರಂಭದ ವಿಧಿ ಎಂದು ಅರ್ಥ. ಸಾಮಾನ್ಯವಾಗಿ ಉಳ್ಳಾಲ್ತಿ ನೇಮಗಳಲ್ಲಿ ಮೂರು, ಐದು ಹಾಗೂ ಏಳು ದಿನಗಳ ಆಗಿನ ಎಂಬ ಸಂಪ್ರದಾಯವಿದೆ. ಇಷ್ಟು ದಿನದ ಮೊದಲೇ ಬರುವ ದೈವ ನರ್ತಕ ಎಣ್ಣೆ ಬೂಳ್ಯ ಪಡೆದು, ಅಡಿಕೆ ಹಾಳೆಯನ್ನು ಒಣಗಿಸುವ ಕೆಲಸದಲ್ಲಿ ನಿರತನಾಗುತ್ತಾನೆ, ಮನೆಗೂ ಹೋಗುವಂತಿಲ್ಲ.
ಕಟ್ಟೆಮನೆ ಹಾಗೂ ಇದರ ಮುಂದಿರುವ ಗುಡಿ ದೈವಗಳ ಮೂಲಸ್ಥಾನ. ಕಟ್ಟೆಮನೆ ಈಗ ಗೌಡ ಸಮುದಾಯದ ಸುಪರ್ದಿಯಲ್ಲಿದೆ. ಇದಕ್ಕೂ ಒಂದು ಹಿನ್ನೆಲೆಯಿದೆ. ಬಲ್ಲಾಳರ ವಂಶ ಅಳಿಯುವ ಹೊತ್ತು. ತೀರ್ಥಯಾತ್ರೆಗೆ ಹೊರಟು ನಿಂತ ಕೊನೆಯ ಅರಸ, ಕೀ ಗೊಂಚಲನ್ನು ಬುಟ್ಟಿಯೊಂದಕ್ಕೆ ಎಸೆದು ಹೋಗುತ್ತಾನೆ. ದನಗಳಿಗೆ ಹುಲ್ಲು ತಂದು ಹಾಕುವ ವ್ಯಕ್ತಿಗೆ ಈ ಕೀ ಸಿಗುತ್ತದೆ. ಅವರೇ ಮುಂದೇ ಕಟ್ಟೆಮನೆ ಹಾಗೂ ದೈವಗಳ ಜವಾಬ್ದಾರಿಗೆ ಹೆಗಲು ಕೊಟ್ಟರೆಂದು ನಂಬಿಕೆ ಇದೆ. ದಂಡನಾಯಕ ಹಾಗೂ ಉಳಿದ ದೈವಗಳ ಚಾಕರಿ ಕೆಲಸವನ್ನು ಕಟ್ಟೆಮನೆಯವರೇ ನಿರ್ವಹಿಸುತ್ತಿದ್ದಾರೆ. ಕಟ್ಟೆಮನೆಯ ಒಳಗಡೆ ಧರ್ಮ ಚಾವಡಿ ಇದೆ. ಇದರಲ್ಲಿ ಮಲರಾಯ ದೈವ ಪ್ರಧಾನ. ಇದರ ಜತೆಗೆ ಮನುಷ್ಯ ಆಕಾರದ ಮೊಗ ಇರುವ ಕಂಟ್ರಾಣಿ ಮಲರಾಯ ದೈವವಿದೆ. ಕಟ್ಟೆಮನೆಯ ಎದುರಿಗೆ ಇರುವ ಪ್ರತ್ಯೇಕ ಚಾವಡಿಯಲ್ಲಿ ದಂಡನಾಯಕ, ಉಳ್ಳಾಲ್ತಿ, ಕಾಳರಾಹು ದೈವಗಳು ನೆಲೆಸಿವೆ.
Related Articles
ಬಲ್ನಾಡು ಆಸುಪಾಸು ಕೆಲ ವಿಶೇಷವಾದ ನಂಬಿಕೆಯನ್ನು ಶ್ರದ್ಧಾ – ಭಕ್ತಿಯಿಂದ ಆಚರಿಸುತ್ತಾರೆ. ದೈವಸ್ಥಾನದ ಆಸುಪಾಸು ಎಲ್ಲಿಯೂ ವ್ಯವಹಾರ ನಡೆಸುವಂತಿಲ್ಲ. ಕಲ್ಲಂಗಡಿ, ಆಹಾರ, ಪಾನೀಯಗಳನ್ನು ವಿತರಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಹಣ ತೆಗೆದುಕೊಳ್ಳುವುದಿಲ್ಲ. ಇಲ್ಲಿ ಅಂಗಡಿ ಹಾಕಬಹುದು. ಆದರೆ ವಸ್ತುವಿಗೆ ಪ್ರತಿಯಾಗಿ ಹಣ ತೆಗೆದುಕೊಳ್ಳಬಾರದು. ನೇಮದಂದು ಪುತ್ತೂರಿನಿಂದ ವಾಹನದ ವ್ಯವಸ್ಥೆ ಇರುತ್ತದೆ. ಅವರದೂ ಉಚಿತ ಸೇವೆ.
Advertisement