ಪಾಟ್ನಾ/ನವದೆಹಲಿ:ರಾಜ್ಯಸಭಾ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷ ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರ ಹೆಸರನ್ನು ಅಂತಿಮಗೊಳಿಸಿದೆ. ಬಿಹಾರದಲ್ಲಿ ಬಿಜೆಪಿಯ ಚಿರಪರಿಚಿತ ನಾಯಕರಾಗಿರುವ ಮೋದಿಯನ್ನು ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಲು ನಿರ್ಧರಿಸಿದೆ.
ಎಲ್ ಜೆಪಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಸುಶೀಲ್ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಪಾಸ್ವಾನ್ ನೇತೃತ್ವದ ಎಲ್ ಜೆಪಿ ಎನ್ ಡಿಎ ಮೈತ್ರಿಪಕ್ಷವಾಗಿತ್ತು. ಆದರೆ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ವಿರುದ್ಧ ಜೆಡಿಯು ಮುನಿಸಿಕೊಂಡಿತ್ತು.
ಸುಶೀಲ್ ಮೋದಿ ಅವರು ರಾಜ್ಯಸಭೆಗೆ ಪ್ರವೇಶಿಸುವ ಮೂಲಕ ಕೇಂದ್ರ ಸಚಿವ ಸಂಪುಟ ಪುನಾರಚನೆಗೊಳ್ಳಲಿದೆ ಎಂಬ ದೀರ್ಘಕಾಲದ ಊಹಾಪೋಹ ಮತ್ತಷ್ಟು ಸಂಚಲನ ಮೂಡಿಸಲಿದೆ. ಸುಶೀಲ್ ಮೋದಿ ಅವರು ದಕ್ಷತೆಗೆ ಹೆಸರಾಗಿದ್ದು, ಪಕ್ಷದ ರಾಜಕೀಯ ಹಿತಾಸಕ್ತಿಯ ಸೂಕ್ಷ್ಮತೆಯನ್ನು ಅರಿತಿರುವ ವ್ಯಕ್ತಿ ಎಂದು ಪರಿಗಣಿಸಲಾಗಿದೆ ಎಂದು ವರದಿ ತಿಳಿಸಿದೆ.
ಸುಶೀಲ್ ಮೋದಿ ಜಿಎಸ್ ಟಿಯ ರಾಜ್ಯ ವಿತ್ತ ಸಚಿವರ ಸಮಿತಿಯ ಮುಖ್ಯಸ್ಥರಾಗಿದ್ದಾರೆ ಮತ್ತು ಜಿಎಸ್ ಟಿ ಕೌನ್ಸಿಲ್ ನ ಪ್ರಮುಖ ಟ್ರಬಲ್ ಶೂಟರ್ ಸುಶೀಲ್ ಮೋದಿ. ಬಿಹಾರ ರಾಜಕೀಯ ವಲಯದಲ್ಲಿ ಇವರನ್ನು “ಚೋಟಾ ಮೋದಿ” ಎಂದೇ ಕರೆಯುತ್ತಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಪೂರ್ಣ ಬಹುಮತ ಪಡೆದುಕೊಂಡಿತ್ತು. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್ ಡಿಎ 125 ಸ್ಥಾನ, ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ 110 ಸ್ಥಾನ ಪಡೆದಿತ್ತು.