Advertisement
ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದಿಂದ ಪ್ರತಿವರ್ಷ ನೀಡುವ ಬೋನಸ್‌ನ್ನು ಈ ಬಾರಿ 6 ರೂಗಳಿಗೆ ಹೆಚ್ಚಿಸಲಾಗಿದ್ದು, ಮೂರು ಜಿಲ್ಲೆಗಳ ಒಟ್ಟು 29 ಸಾವಿರ ರೈತರಿಗೆ 3.21 ಕೋಟಿ ರೂಗಳನ್ನು ವಿತರಿಸಲಾಗಿದೆ. ಅಧ್ಯಕ್ಷರ ವೇತನ, ಭತ್ಯೆ ಸಹ ರೈತರಿಗೆ ನೀಡಲಾಗಿದ್ದು, ಕೋವಿಡ್ ಸಂಕಷ್ಟದ ದಿನಗಳಲ್ಲಿ ಈ ಮೂಲಕ ರೈತರ ನೆರವಿಗೆ ಧಾವಿಸಿರುವುದು ಗಮನಾರ್ಹ.
Related Articles
Advertisement
ಕೋವಿಡ್ ಸಂದರ್ಭದಲ್ಲೇ ಒಕ್ಕೂಟಕ್ಕೆ ಕೋಟ್ಯಾಂತರ ರೂ. ಆದಾಯ ಬಂದಿದ್ದು, 32 ವರ್ಷಗಳ ಒಕ್ಕೂಟದ ಇತಿಹಾಸದಲ್ಲೇ ಅತಿಹೆಚ್ಚು ಆದಾಯವಾಗಿದೆ. ಹಾಗಾಗಿ ಕೋವಿಡ್ ಸಂದರ್ಭದಲ್ಲೂ ಒಕ್ಕೂಟದ ಕೈಹಿಡಿದಿರುವ ರೈತರಿಗೆ ಮಾರ್ಚ್ ತಿಂಗಳ ಹಾಲಿಗೆ ಪ್ರತಿ ಲೀಟರ್‌ಗೆ 6 ರೂ. ಬೋನಸ್ ನೀಡಲಾಗಿದೆ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ಭೀಮಾನಾಯ್ಕ.
ವೇತನ, ಭತ್ಯೆ ಪಡೆಯದ ಭೀಮಾನಾಯ್ಕ: ಹಲವರ ಅಡೆತಡೆಗಳ ನಡುವೆಯೂ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಶಾಸಕ ಭೀಮಾನಾಯ್ಕ, ಒಕ್ಕೂಟದಿಂದ ನೀಡುವ ತಿಂಗಳ ವೇತನ, ಭತ್ಯೆಯನ್ನು ಈವರೆಗೆ ಒಮ್ಮೆಯೂ ಪಡೆದಿಲ್ಲ. ಇದನ್ನು ವಾಪಸ್ ನೀಡಿದ್ದು, ಒಕ್ಕೂಟದ ಲಾಭಾಂಶಕ್ಕೆ ಸೇರಿಸಿ ರೈತರಿಗೆ ಪ್ರತಿವರ್ಷದಂತೆ ಬೋನಸ್ ನೀಡುವ ಮೂಲಕ ರೈತರಿಗೆ ನೆರವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರು ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನಿರ್ದೇಶಕರಾಗಿ ನೇಮಕವಾಗಿ ಎರಡು ವರ್ಷಗಳ ಹಿಂದೆ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಒಕ್ಕೂಟಕ್ಕೆ ಬರುವ ಎಲ್ಲ ನಿರ್ದೇಶಕರಂತೆ ಅಧ್ಯಕ್ಷರಿಗೂ ಪ್ರತಿ ಕಿಮೀಗೆ 10 ರೂ. ಭತ್ಯೆ, 10 ಸಾವಿರ ರೂ. ತಿಂಗಳ ವೇತನ ನೀಡಲಾಗುತ್ತದೆ.
ಹೀಗೆ ಪ್ರತಿ ತಿಂಗಳ ವೇತನ, ಭತ್ಯೆ ಸೇರಿ ಸುಮಾರು 15 ಸಾವಿರ ರೂ. ಗಳಷ್ಟಾಗಲಿದ್ದು, ಒಂದು ವರ್ಷದ ಸುಮಾರು 1.50 ಲಕ್ಷಕ್ಕೂ ಹೆಚ್ಚು ಹಣವನ್ನು ಒಕ್ಕೂಟಕ್ಕೆ ವಾಪಸ್ ನೀಡಿದ್ದಾರೆ. ಒಕ್ಕೂಟದ ನಿರ್ದೇಶಕರ ಸಭೆಯಲ್ಲಿ ವಾಪಸ್ ನೀಡುತ್ತಿರುವ ಚೆಕ್‌ನ್ನು ಪ್ರದರ್ಶಿಸಿ ಎಲ್ಲರ ಗಮನಕ್ಕೆ ತಂದು ಒಕ್ಕೂಟಕ್ಕೆ ನೀಡಲಾಗುತ್ತದೆ. ಈ ಹಣವನ್ನು ಒಕ್ಕೂಟದ ಲಾಭಾಂಶಕ್ಕೆ ಸೇರಿಸಿ ರೈತರಿಗೆ ನೆರವಾಗುವಂತೆ ಮಾಡಲಾಗುತ್ತದೆ.