ಜೈಪುರ್: ರಾಜಸ್ಥಾನ್ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಇಲ್ಲಿನ ಕಿಸಾನ್ ಗಂಜ್ ವಿಧಾನಸಭಾ ಕ್ಷೇತ್ರದ ರಸ್ತೆ ಸಮೀಪ ಬ್ಯಾಲೆಟ್ ಬಾಕ್ಸ್ ಪತ್ತೆಯಾಗಿದ್ದು, ಇಬ್ಬರು ಚುನಾವಣಾಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ವರದಿ ತಿಳಿಸಿದೆ.
ಬರಾನ್ ಜಿಲ್ಲೆಯ ಕಿಸಾನ್ ಗಂಜ್ ಪ್ರದೇಶದ ಶಹಾಬಾದ್ ರಸ್ತೆಯ ಮೇಲೆ ಬ್ಯಾಲೆಟ್ ಬಾಕ್ಸ್ ಬಿದ್ದಿರುವುದಾಗಿ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಬೇಜವಾಬ್ದಾರಿತನ ತೋರಿದ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಎಎನ್ ಐ ವರದಿ ವಿವರಿಸಿದೆ.
ರಸ್ತೆಯಲ್ಲಿ ಪತ್ತೆಯಾದ ಬ್ಯಾಲೆಟ್ ಬಾಕ್ಸ್ ಅನ್ನು ಕಿಸಾನ್ ಗಂಜ್ ನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದೆ. ರಾಜಸ್ಥಾನದಲ್ಲಿ ಶುಕ್ರವಾರ ವಿಧಾನಸಭಾ ಚುನಾವಣೆಯ ನಿಟ್ಟಿನಲ್ಲಿ ಮತದಾನ ನಡೆದಿತ್ತು. ದಾಖಲೆ ಎಂಬಂತೆ ಶೇ.73.85ರಷ್ಟು ಮತದಾನವಾಗಿತ್ತು.
ಕೆಲವು ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿರುವುದನ್ನು ಹೊರತುಪಡಿಸಿ, ಇಡೀ ರಾಜ್ಯಾದ್ಯಂತ 51,687 ಬೂತ್ ಗಳಲ್ಲಿ ಶಾಂತಿಯುತ ಮತದಾನ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ವಾರ್ಸ್ಸ್ ಮುಂಡಾವಾರ್ ಕ್ಷೇತ್ರದಲ್ಲಿ ಐಟಿಬಿಪಿ ಯೋಧರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೂತ್ ಒಳನುಗ್ಗಲು ಯತ್ನಿಸಿದ್ದ ಗುಂಪೊಂದನ್ನು ಚದುರಿಸಿದ್ದರು ಎಂದು ಸ್ಪೆಷಲ್ ಡಿಜಿ ರೆಡ್ಡಿ ತಿಳಿಸಿದ್ದಾರೆ.