ಇಡೀ ಜಗತ್ತು ಡಿಜಿಟಲೀಕರಣದತ್ತ ದಾಪುಗಾಲಿಡುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಎಲೆಕ್ಟ್ರಾನಿಕ್ ತಂತ್ರಜ್ಞಾನವನ್ನು ಒಪ್ಪಿಕೊಳ್ಳಲಾಗುತ್ತಿದೆ. ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಸುಧಾರಣೆಯಾಗುತ್ತಾ ಹೋಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಭಾರತದ ರಾಜಕೀಯ ಪಕ್ಷಗಳು ಎಲೆಕ್ಟ್ರಾನಿಕ್ ಮತದಾನ ಯಂತ್ರದ ಬಗ್ಗೆ ಪದೆ ಪದೇ ಸಂಶಯವನ್ನು ವ್ಯಕ್ತಪಡಿಸುತ್ತಲೇ ಇವೆ. ಹಳೆಯ ಮತಪತ್ರ ಪದ್ಧತಿಯ ಮರುಜಾರಿಯಾಗಬೇಕು ಎಂದು ಆಗ್ರಹಿಸುತ್ತಿವೆ. ಮತಯಂತ್ರದ ಅಕ್ರಮದ ಕುರಿತು ಯಾವುದೇ ನಿರ್ದಿಷ್ಟ ಹಾಗೂ ಸ್ಪಷ್ಟ ದಾಖಲೆಗಳಿಲ್ಲದೆ ಈ ಮಟ್ಟಿಗೆ ಇವಿಎಂ ವಿರುದ್ಧ ಧ್ವನಿಯೆತ್ತಿರುವುದು ನಿಜಕ್ಕೂ ಆಶ್ಚರ್ಯಕರ.
2019ರ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಚುನಾವಣಾ ಆಯೋಗ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಮತಪತ್ರ ಆಧಾರಿತ ಚುನಾವಣಾ ಪದ್ಧತಿ ಜಾರಿಯಾಗಬೇಕು ಎಂದು ಕಾಂಗ್ರೆಸ್ ಸಹಿತ 17ಕ್ಕೂ ಹೆಚ್ಚು ಪಕ್ಷಗಳು ಆಗ್ರಹಿಸಿದವು. ಚುನಾವಣಾ ಪ್ರಕ್ರಿಯೆಯಲ್ಲಿ ಏನೇನು ಹೊಸ ಸುಧಾರಣೆ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಚಿಂತನೆ ನಡೆಸಲು ಕರೆದಿದ್ದ ಈ ಸಭೆಯಲ್ಲಿ ಚುನಾವಣಾ ವ್ಯವಸ್ಥೆಯನ್ನು 3 ದಶಕಗಳಷ್ಟು ಹಿಂದಕ್ಕೆ ಒಯ್ಯಬೇಕು ಎಂಬ ಒತ್ತಾಯ ಕೇಳಿಬಂತು. ದೋಷಪೂರಿತ ಇವಿಎಂನಲ್ಲಿ ಯಾವ ಗುಂಡಿ ಒತ್ತಿದರೂ ಒಂದು ಪಕ್ಷಕ್ಕೇ ಮತ ದಾಖಲಾಗುತ್ತದೆ. ಈ ಇವಿಎಂಗಳನ್ನು ಎಲ್ಲಿ ದುರಸ್ತಿ ಮಾಡಿಸಲಾಗುತ್ತದೆ ಎಂಬ ಮಾಹಿತಿ ನೀಡಬೇಕು ಎಂದು ಈ ವಿಪಕ್ಷಗಳು ಒತ್ತಾಯಿಸಿದವು. ಬ್ಯಾಲೆಟ್ ಪೇಪರ್ ಪದ್ಧತಿ ಮರುಜಾರಿಗೆ ರಾಜಕೀಯ ಪಕ್ಷಗಳು ಮಾಡುತ್ತಿರುವ ಒತ್ತಾಯ ಖೇದಕರ ಎಂದು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಒ.ಪಿ.ರಾವತ್ ಹೇಳಿದ್ದಾರೆ. ಹಳೆಯ ಪದ್ಧತಿ ಮರುಜಾರಿಗೊಂಡರೆ, ಅಂದು ನಡೆಯುತ್ತಿದ್ದ ಚುನಾವಣಾ ಅಕ್ರಮಗಳೆಲ್ಲವೂ ಮರುಕಳಿ ಸಬಹುದು. ಮತಗಟ್ಟೆಗಳ ಮೇಲೆ ಮುತ್ತಿಗೆ, ಬ್ಯಾಲೆಟ್ ಬಾಕ್ಸ್ ನಾಶ, ಮತಪತ್ರಗಳ ಮೇಲೆ ಇಂಕ್ ಚೆಲ್ಲುವುದು ಇತ್ಯಾದಿ ಅಕ್ರಮಗಳು ಪುನರಾವರ್ತನೆಯಾಗುವುದು ಚುನಾವಣಾ ಆಯೋಗಕ್ಕೆ ಇಷ್ಟವಿಲ್ಲ ಎಂದು ಅವರು ಸ್ಪಷ್ಟೋಕ್ತಿಯಲ್ಲಿ ಹೇಳಿದ್ದಾರೆ.
ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಈ ರಾಜಕೀಯ ಪಕ್ಷಗಳಿಗೆ ತಿಳಿಯದಿರುವ ಸಂಗತಿಯೇನಲ್ಲವಲ್ಲ. ಅಕ್ರಮಗಳ ಅರಿವಿದ್ದೂ ಅವುಗಳಾÂಕೆ ಅದನ್ನೇ ಒತ್ತಾಯಿಸುತ್ತಿವೆ? ವಿದೇಶಗಳಲ್ಲಿ ಭಾರತದ ಪ್ರಸಕ್ತ ಚುನಾವಣಾ ಪ್ರಕ್ರಿಯೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ ರಾಜಕೀಯ ಕಾರಣಕ್ಕೆ ಪಕ್ಷಗಳು ಅಪಸ್ವರ ಎತ್ತುವುದು, ಅದಕ್ಕಿಂತ ಹೆಚ್ಚಾಗಿ, ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಇವಿಎಂನಲ್ಲಿ ಚಲಾಯಿಸಿದ ಮತವನ್ನು ಸ್ವತಃ ಮತದಾರ ದೃಢೀಕರಿಸಿಕೊಳ್ಳಬಹುದಾದ ವಿವಿಪ್ಯಾಟ್ ಕೂಡಾ ಜಾರಿಗೆ ಬಂದಿದ್ದು ಭಾರತದ ಚುನಾವಣಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಿದೆ.
ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ) ಮತ್ತು ವಿವಿಪ್ಯಾಟ್‌ನಲ್ಲಿ ಇರುವ ಲೋಪದೋಷಗಳನ್ನು ನಾವು ತಿದ್ದಿಕೊಂಡು ಮುನ್ನಡೆಯಬೇಕೇ ಹೊರತು ವ್ಯವಸ್ಥೆಯನ್ನೇ ಅಣಕಿಸುವುದು ಸರಿಯಲ್ಲ. ಇವಿಎಂ ಅನ್ನು ತಿರುಚಲು, ಅಕ್ರಮವೆಸಗಲು ಸಾಧ್ಯವೆಂದು ಹೇಳಿದ್ದ ಪಕ್ಷಗಳಿಗೆ ಚುನಾವಣಾ ಆಯೋಗ ಅದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿತ್ತು. ಯಾರಿಗೂ ಅದನ್ನು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ.
2014ರ ಲೋಕಸಭಾ ಚುನಾವಣೆಯ ಬಳಿಕ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ಇವಿಎಂ ಮೇಲೆ ಸಂಶಯ ವ್ಯಕ್ತಪಡಿಸತೊಡಗಿರುವುದು ಬಹಳ ಸ್ಪಷ್ಟ. ಆದರೆ ಬಿಜೆಪಿ ಚುನಾವಣೆಯಲ್ಲಿ ಸೋತು ಅಧಿಕಾರಕ್ಕೇರಲು ಸಾಧ್ಯವಾಗದ ದೆಹಲಿ, ಬಿಹಾರ, ಕರ್ನಾಟಕ ರಾಜ್ಯಗಳ ಉದಾಹರಣೆ ಇದೆ. ಉತ್ತರಪ್ರದೇಶದ ಉಪಚುನಾವಣೆಗಳಲ್ಲಿ ಸತತವಾಗಿ ಬಿಜೆಪಿ ಸೋತಿದೆ. ಹಾಗಿದ್ದಾಗ ಪಕ್ಷಗಳ ಸೋಲು, ಗೆಲುವಿಗೆ ತೀರ್ಪು ಬರೆದ ಜನರೇ ಕಾರಣ ಎಂಬುದು ಸ್ಪಷ್ಟ. ಜನ ತಿರಸ್ಕರಿಸಿರುವುದಕ್ಕೆ ಕಾರಣಗಳೇನು ಎಂದು ಪಕ್ಷಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕೇ ಹೊರತು ಸೋಲಿಗೆ ಇವಿಎಂ ಕಾರಣ ಎಂಬ ಹೇಳಿಕೆಯನ್ನು ನೀಡುತ್ತಾ ಕೂರುವುದು ಹಾಸ್ಯಾಸ್ಪದ ಎನಿಸುತ್ತದೆ.