Advertisement
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದಿರುವ “ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ ಶುಕ್ರವಾರ ಆರಂಭವಾದ ಮೇಕರ್ ಫೇರ್‌ನಲ್ಲಿ ಎಂಟು ವರ್ಷದ ಬಾಲಕಿ ಅಭಿವೃದ್ಧಿಪಡಿಸಿರುವ ಪುಟ್ಟ ಸಾಧನದಿಂದ ಹಿಡಿದು ರಿಮೋಟ್ ನಿಯಂತ್ರಿತ ಕೀಟನಾಶಕ ಸಿಂಪಡಣೆ ಸಾಧನ, ಸಸಿಗಳಿಗೆ ನೀರುಣಿಸುವ ಸಾಧನಗಳು ಸೇರಿದಂತೆ ನಾನಾ ಬಗೆಯ ಆವಿಷ್ಕಾರಗಳು ಗಮನ ಸೆಳೆದಿದೆ.
Related Articles
Advertisement
ಉದ್ಘಾಟನೆಯೂ ಆಕರ್ಷಕ!: ಮೇಕರ್ ಫೇರ್ ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ಟ್‌ಅಪ್ ಸಂಸ್ಥೆಯೊಂದು ರೂಪಿಸಿದ ಹೈಟೆಕ್ ತಂತ್ರಜ್ಞಾನದಿಂದ ದೀಪ ಬೆಳಗಿಸುವ ವ್ಯವಸ್ಥೆ ಮೆಚ್ಚುಗೆಗೆ ಪಾತ್ರವಾಯಿತು. ಕಲಬುರಗಿಯ ರವಿಕುಮಾರ್, ಶ್ರೀಶೈಲ ಪತ್ತಾರ್ ಅವರು “ಬಿಎಚ್‌ಟಿ ಟೆಕ್ನಾಲಜಿಸ್’ ಹೆಸರಿನ ಸ್ಟಾರ್ಟ್‌ಅಪ್ ಸ್ಥಾಪಿಸಿದ್ದು, ಪ್ರಯತ್ನದ ವಿವರ ಹೀಗಿದೆ. ಎಕ್ಸ್‌ಪೀರಿಯನ್ಸ್ ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸ್ಟಾರ್ಟ್‌ಅಪ್ ಸ್ಥಾಪಿಸಲಾಗಿದೆ.
“ನ್ಯೂರೋ ಸ್ಕೈ’ ಸಹಯೋಗದಲ್ಲಿ “ಮೈಂಡ್ ವೇವ್’ ಸಾಧನ ಅಭಿವೃದ್ಧಿಪಡಿಸಲಾಗಿದ್ದು, ಈ ಸಾಧನವನ್ನು ಸಚಿವರು ಇತರೆ ಗಣ್ಯರಿಗೆ ಅಳವಡಿಸಲಾಗಿತ್ತು. ಈ ಸಾಧನದಲ್ಲಿ ಹಣೆ, ಕಿವಿ ಸ್ಪರ್ಶಿಸುವ ಜಾಗದಲ್ಲಿ ಸೆನ್ಸಾರ್ ಅಳವಡಿಸಲಾಗಿರುತ್ತದೆ. ಇನ್ನೊಂದೆಡೆ ದೀಪಕಂಬಕ್ಕೆ ಎಲ್‌ಇಡಿ ಅಳವಡಿಸಿ ಅದನ್ನು ಬ್ಲೂಟೂಥ್‌ನಡಿ ಸಂಪರ್ಕಿಸಲಾಗಿತ್ತು. ಬಳಿಕ ಸಚಿವರು ಎಲ್‌ಇಡಿ ಕಡೆಗೆ ದಿಟ್ಟಿಸಿ ನೋಡುತ್ತಿದ್ದಂತೆ ದೀಪ ಬೆಳಗಿದವು ಎಂದು ರವಿಕುಮಾರ್ ತಿಳಿಸಿದರು.
ಗಮನ ಸೆಳೆದ ಪ್ರಯೋಗ: ಶಾಲೆಯಲ್ಲಿ ನೀಡುವ ಮನೆಪಾಠ ಮರೆತು ಹೋಗದಂತೆ ನೆನಪಿಸಿಕೊಳ್ಳಲು ಎಂಟು ವರ್ಷದ ನಿಧಿ ರಾಮಸುಬ್ರಹ್ಮಣ್ಯಂ ಜಾಮಿಟ್ರಿ ಬಾಕ್ಸ್‌ನಲ್ಲಿ ರೂಪಿಸಿರುವ ಅಲರ್ಟ್ ಸಾಧನ ಮೇಳದ ಆಕರ್ಷಣೆಯಾಗಿತ್ತು. ಜಾಮಿಟ್ರಿ ಬಾಕ್ಸ್‌ನಲ್ಲಿ ಆರು ಸಣ್ಣ ಎಲ್‌ಇಡಿಗಳನ್ನು ಅಳವಡಿಸಿ ಪ್ರತಿಯೊಂದಕ್ಕೂ ನಿರ್ದಿಷ್ಟ ವಿಷಯದ ಚೀಟಿ ಅಂಟಿಸಿದ್ದಾಳೆ.
ಶಾಲೆಯಲ್ಲಿ ಹೋಂವರ್ಕ್ ನೀಡಿದಾಗ ಆ ವಿಷಯದ ಗುಂಡಿ ಒತ್ತಿದರೆ ಎಲ್‌ಇಡಿ ಬೆಳಗುತ್ತದೆ. ಇದರಿಂದ ಮನೆಯಲ್ಲಿದ್ದಾಗ ಸಹಜವಾಗಿ ಜಾಮಿಟ್ರಿ ಬಾಕ್ಸ್ ತೆರೆದಾಗ ಹೋಂವರ್ಕ್ ವಿಷಯ ಗೊತ್ತಾಗಲಿದೆ. ಸ್ಕೂಲ್‌ನಲ್ಲಿ ನೀಡುವ ಹೋಂವರ್ಕ್ ಮರೆತುಹೋಗಿ ಟೀಚರ್ ಬಳಿ ಬೈಸಿಕೊಳ್ಳುವುದನ್ನು ತಪ್ಪಿಸಲು ಒಂದು ಅಲರ್ಟ್ ಸಾಧನ ರೂಪಿಸಿದ್ದೇನೆ. ಅಪ್ಪನ ಸಹಾಯದೊಂದಿಗೆ ಎಲ್‌ಇಡಿ ಅಳವಡಿಸಿ ಕಿರು ಬ್ಯಾಟರಿಗೆ ಸಂಪರ್ಕಿಸಿದ್ದೇನೆ.
ಟೀಚರ್ ಶಾಲೆಯಲ್ಲಿ ಹೋಂವರ್ಕ್ ನೀಡುತ್ತಿದ್ದಂತೆ ಆ ವಿಷಯದ ಗುಂಡಿ ಒತ್ತುತ್ತೇನೆ. ಇದರಿಂದ ಯಾವುದೇ ಹೊತ್ತಿನಲ್ಲಿ ಜಾಮಿಟ್ರಿ ಬಾಕ್ಸ್ ತೆರೆದರೂ ಎಲ್‌ಇಡಿ ಗಮನಿಸಿ ಹೋಂವರ್ಕ್ ಮುಗಿಸಲು ಅನುಕೂಲವಾಗಲಿದೆ ಎಂದು ಕುಮಾರನ್ಸ್ ಶಾಲೆಯ ಮೂರನೇ ತರಗತಿಯ ನಿಧಿ ರಾಮಸುಬ್ರಹ್ಮಣ್ಯಂ ಹೇಳುತ್ತಾಳೆ.
ನಿಧಿಯ ಅಕ್ಕ ಚಿನ್ಮಯಿ ರಾಮಸುಬ್ರಹ್ಮಣ್ಯಂ ಕೂಡ ಇನ್‌ಹೇಲರ್ ಅಲರ್ಟ್ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದು, ಗಮನ ಸೆಳೆದಿದೆ. ಅಸ್ತಮಾದಿಂದ ಬಳಲುವವರು ಬಳಸುವ ಇನ್‌ಹೇಲರ್‌ಗೆ ಸುಧಾರಿತ ಗ್ಯಾಸ್ ಸೆನ್ಸಾರ್ ಅಳವಡಿಸಲಾಗಿದೆ. ಇದರಿಂದ ನಿತ್ಯ ಎಷ್ಟು ಬಾರಿ ಬಳಸಲಾಗಿದೆ, ಇನ್ನೂ ಎಷ್ಟು ದಿನ ಬಳಸಬಹುದು ಇತರೆ ಮಾಹಿತಿ ಸಂದೇಶ ಮೊಬೈಲ್ ಆ್ಯಪ್‌ಗೆ ರವಾನೆಯಾಗುತ್ತದೆ. ಜತೆಗೆ ವಾತಾವರಣದಲ್ಲಿ ದೂಳು, ಹೊಗೆ ಪ್ರಮಾಣದ ಬಗ್ಗೆಯೂ ಮಾಹಿತಿ ನೀಡಲಿದೆ. ಸ್ಪರ್ಧೆಯೊಂದಕ್ಕೆ ಅಭಿವೃದ್ಧಿಪಡಿಸಿದ ಸಾಧನ ಗಮನ ಸೆಳೆಯುತ್ತಿದೆ.