Advertisement

ಕೃಷ್ಣ ಲೀಲೆ ಬಲ್ಲವರಾರು?

03:50 AM Jan 30, 2017 | Harsha Rao |

ಎಸ್‌.ಎಂ. ಕೃಷ್ಣ ಎಂದಲ್ಲ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿರುವ ಹಿರಿತಲೆಗಳು ಅನೇಕ ಇವೆ. ಹಾಗೆಂದು  ಹಿರಿಯರನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಎಸ್‌.ಎಂ. ಕೃಷ್ಣ ಅವರೇ ಅತ್ಯುತ್ತಮ ಉದಾಹರಣೆ ಯಾಗಬಲ್ಲರು.

Advertisement

ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದ ಹಿರಿಯ ನಾಯಕ ಎಸ್‌. ಎಂ. ಕೃಷ್ಣ ದಿಢೀರ್‌ ಆಗಿ ಕಾಂಗ್ರೆಸ್‌ ಪಕ್ಷದಿಂದ ಹೊರಬಂದಿರುವುದು ಅನೇಕರಿಗೆ ಆಘಾತಕಾರಿಯಾದ ನಿರ್ಧಾರದಂತೆ ಕಾಣಿಸಿರಬಹುದು. ಆದರೆ ಕೃಷ್ಣ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ನಿರೀಕ್ಷಿತವೇ ಆಗಿತ್ತು. ಸುಮಾರು ಐದು ದಶಕಗಳ  ಕಾಲ ಕಾಂಗ್ರೆಸ್‌ನಲ್ಲಿ ಬಹುತೇಕ ಎಲ್ಲ ಹುದ್ದೆಗಳನ್ನು ಅನುಭವಿಸಿದ್ದ ಕೃಷ್ಣ ಕಳೆದ ಐದು ವರ್ಷಗಳಲ್ಲಿ ಮೂಲೆಗುಂಪಾಗಿದ್ದರು. ಕಾಂಗ್ರೆಸ್‌ ಹೈಕಮಾಂಡ್‌ ಅಂದು ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ನೆಪವೊಡ್ಡಿ  ಅವರನ್ನು ವಿದೇಶಾಂಗ ಸಚಿವ ಹುದ್ದೆಯಿಂದ ಕೆಳಗಿಸಿ ರಾಜ್ಯಕ್ಕೆ ಸಾಗಹಾಕಿತು.  ಬಳಿಕ ರಾಜ್ಯದ ಹೊಣೆಯನ್ನೂ ನೀಡಲಿಲ್ಲ ಹಾಗೂ ರಾಷ್ಟ್ರ ಮಟ್ಟದಲ್ಲೂ ಸಮರ್ಪಕವಾದ ಮನ್ನಣೆ ನೀಡಲಿಲ್ಲ.  ಬೇರೆ ಯಾರೇ ಆಗಿದ್ದರೂ  ಆಗಲೇ ರಾಜೀನಾಮೆ ಬಿಸಾಕುತ್ತಿದ್ದರು. ಆದರೆ ಪರಿಪಕ್ವ ಮತ್ತು ಅನುಭವಿ ರಾಜಕಾರಣಿಯಾಗಿರುವ ಕೃಷ್ಣ ಅಂತಹ ದುಡುಕಿನ ನಿರ್ಧಾರ ಕೈಗೊಳ್ಳಲಿಲ್ಲ.  ತನ್ನ ಅನುಭವಕ್ಕೆ , ಹಿರಿತನಕ್ಕೆ ಮತ್ತು ವರ್ಚಸ್ಸಿಗೆ ತಕ್ಕ ಗೌರವ ಸಿಗಬಹುದು ಎಂದು ಕಾದಿದ್ದರು. ಕೊನೆಗೂ ಅದು ಸಾಧ್ಯವಿಲ್ಲ ಎಂದು ಅರಿವಾದಾಗ ರಾಜೀನಾಮೆ ನೀಡಿದ್ದಾರೆ. ಇದರಿಂದ ಕೃಷ್ಣರಿಗಿಂತ ಹೆಚ್ಚು ನಷ್ಟವಾಗಿರುವುದು ಕಾಂಗ್ರೆಸ್‌ಗೆ .  

ಕೃಷ್ಣ ಎಂದಲ್ಲ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿರುವ ಹಿರಿತಲೆಗಳು ಅನೇಕ ಇವೆ. ಜನಾರ್ದನ ಪೂಜಾರಿ, ಪ್ರಕಾಶ್‌ ಹುಕ್ಕೇರಿ, ಧರ್ಮ ಸಿಂಗ್‌, ವಿಶ್ವನಾಥ್‌ ಈ ಮುಂತಾದವರನ್ನು ಸಕ್ರಿಯ ರಾಜಕೀಯದಿಂದ ನೇಪಥ್ಯಕ್ಕೆ ಸರಿಸಲಾಗಿದೆ.  ರಾಜಕೀಯದಲ್ಲಿ ಯುವ ನಾಯಕರು ಮುಂದೆ ಬರಬೇಕು, ಯುವಕರಿಗೆ ಅವಕಾಶ ನೀಡಬೇಕು ಎನ್ನುವುದು ನಿಜ.

ಹಾಗೆಂದು  ಹಿರಿಯರನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಕೃಷ್ಣ ಅವರೇ ಅತ್ಯುತ್ತಮ ಉದಾಹರಣೆಯಾಗಬಲ್ಲರು.ಆಡ್ವಾಣಿ,  ಮುರಳಿ ಮನೋಹರ ಜೋಶಿ ಮತ್ತಿತರ ಜನಪ್ರಿಯ ನಾಯಕರನ್ನು  ಹಿರಿಯರಾಗಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ನೇಪಥ್ಯಕ್ಕೆ ಸರಿಸಿದಾಗ ಲೇವಡಿ ಮಾಡಿದವರು ತಮ್ಮ ಪಕ್ಷದಲ್ಲೇ ಅಂತವರು ಅನೇಕ ಮಂದಿ ಇದ್ದಾರೆ ಎಂದು ತಿಳಿಯದಿದ್ದದ್ದು ವಿಪರ್ಯಾಸವೇ ಸರಿ. 

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕನಿಷ್ಠ ಮುಂದಿನ ಚುನಾವಣೆ ತನಕವಾದರೂ ಕಾಂಗ್ರೆಸ್‌ಗೆ ಕೃಷ್ಣ ಅವರ ಅಗತ್ಯವಿತ್ತು. ಪ್ರಬಲ ಒಕ್ಕಲಿಗ ಸಮುದಾಯ ಕೃಷ್ಣ ನಿರ್ಗಮನದ ಬಳಿಕ ಮುನಿಸಿಕೊಂಡು ದೂರವಾದರೆ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸ ಬೇಕಾದೀತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲು ಅನೇಕ ಕಾಂಗ್ರೆಸಿಗರಿಗೆ ಅದರಲ್ಲೂ ಮೂಲ ಕಾಂಗ್ರೆಸಿಗರಿಗೆ ಇಷ್ಟವಿಲ್ಲ. ಅರ್ಥಾತ್‌ ಸರ್ವ ಸಮ್ಮತ ನಾಯಕತ್ವ ಎನ್ನುವುದು ಕಾಂಗ್ರೆಸ್‌ನಲ್ಲೀಗ ಇಲ್ಲ. ಪಕ್ಷದಲ್ಲಿ ಯಾವುದಾದರೂ ಗಂಭೀರವಾದ ಬಿಕ್ಕಟ್ಟು ತಲೆದೋರಿದರೆ ಅದನ್ನು ಶಮನಗೊಳಿಸುವ ಟ್ರಬಲ್‌ ಶೂಟರ್‌  ಪಾತ್ರ ವಹಿಸುವ ಯೋಗ್ಯತೆಯವರು ಯಾರಿದ್ದಾರೆ?  ಇಂತಹ ಸಂದರ್ಭದಲ್ಲಿ ಕೃಷ್ಣ ಅವರ ಹಿರಿತನ, ಅನುಭವ ಮತ್ತು ವರ್ಚಸ್ಸು ಖಂಡಿತ ನೆರವಿಗೆ ಬರುತ್ತಿತ್ತು. 

Advertisement

ಇಳಿಗಾಲದಲ್ಲಿ ಪಕ್ಷದಿಂದ ಕೃಷ್ಣ ಬಹಳ ಅವಮಾನ ಅನುಭವಿಸಿದ್ದಾರೆ ಎನ್ನುವುದು ಅವರ ಮಾತಿನಿಂದಲೇ ತಿಳಿಯುತ್ತದೆ. ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ ಧಕ್ಕೆಯಾದ ಕಾರಣ ಬಹಳಷ್ಟು ಆಲೋಚಿಸಿದ ಬಳಿಕ ಐದು ದಶಕಗಳ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಕಾಂಗ್ರೆಸಿಗೆ  ಜನಸಮೂಹದ ನಾಯಕರ ಅಗತ್ಯವಿಲ್ಲ, ಪಕ್ಷವನ್ನು ನಡೆಸಿಕೊಂಡು ಹೋಗುವ ಮೆನೇಜರ್‌ಗಳಿದ್ದರೆ ಸಾಕು ಎನ್ನುವ ಕೃಷ್ಣ ಮಾತನ್ನು ಕಾಂಗ್ರೆಸ್‌ ನಾಯಕರು ಗಂಭೀರವಾಗಿ ಪರಿಗಣಿಸಬೇಕು. ಇಂದಿರಾ ಗಾಂಧಿ,  ರಾಜೀವ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಕಾಲಗಳಲ್ಲಿ ಕಾಂಗ್ರೆಸ್‌ನ  ಅವಿಭಾಜ್ಯ ಅಂಗವಾಗಿದ್ದ ಕೃಷ್ಣ ಪಕ್ಷದ ಚುಕ್ಕಾಣಿ ರಾಹುಲ್‌ ಗಾಂಧಿ ಕೈಗೆ ಸಿಕ್ಕಿದ ಬಳಿಕ ಬೇಡವಾಗಿದ್ದಾರೆ.

ವಯಸ್ಸೊಂದನ್ನೇ ಮಾನದಂಡ ಮಾಡುವುದಿದ್ದರೆ ಕಾಂಗ್ರೆಸ್‌ ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಹಿರಿಯ ನಾಯಕರನ್ನು ಮನೆಗೆ ಕಳುಹಿಸಬೇಕು. ಅದಕ್ಕೆ ಪಕ್ಷ ತಯಾರಿದೆಯೇ ಅಥವ ಹಾಗೇ ಹೋದವರು ಕೃಷ್ಣ ಅವರಂತೆ ಎಲ್ಲ ಅವಮಾನಗಳನ್ನು ನುಂಗಿ ಸುಮ್ಮನಿರುತ್ತಾರೆಯೇ? 

Advertisement

Udayavani is now on Telegram. Click here to join our channel and stay updated with the latest news.

Next