Advertisement

ಬಲ್ಲಿರೇನಯ್ಯ ಮಾಸಿಕದ 6ನೇ ವಾರ್ಷಿಕೋತ್ಸವ

01:45 PM Feb 20, 2019 | |

ಬರೋಡಾ: ಯಕ್ಷಗಾನ ಕಲೆಗೆ ಮೀಸಲಾಗಿಲುವ ತಾರಾನಾಥ ವರ್ಕಾಡಿ ಸಂಪಾದಕತ್ವದ ಬಲ್ಲಿರೇನಯ್ಯ ಮಾಸಿಕದ 6ನೇ ವಾರ್ಷಿಕೋತ್ಸವವು ಫೆ. 3ರಂದು ಬರೋಡಾದ ಬೈದಶ್ರೀ ಸಭಾಗೃಹದಲ್ಲಿ ನಡೆಯಿತು.

Advertisement

ಗುಜರಾತ್‌ ಬಿಲ್ಲವ ಸಂಘದ ಹಾಗೂ ತುಳು ಸಂಘ ಬರೋಡಾ ಇವರ ಜಂಟಿ ಆಯೋಜನೆಯಲ್ಲಿ ಜರಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಸಂಘ ಬರೋಡಾದ ಅಧ್ಯಕ್ಷ ದಯಾನಂದ ಬೋಂಟ್ರಾ ಅವರು ವಹಿಸಿದ್ದರು. ಗುಜರಾತ್‌ನ ವಿಭಿನ್ನ ಪ್ರಮುಖ ನಗರಗಳಾದ ಸೂರತ್‌, ಅಂಕ್ಲೇಶ್ವರ್‌, ಅಹ್ಮದಾಬಾದ್‌ ಮೊದಲಾದ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತುಳು-ಕನ್ನಡಿಗರು ಭಾಗವಹಿಸಿದ್ದರು.

ತುಳು ಸಂಘ ಬರೋಡಾದ ಮಾಜಿ ಸ್ಥಾಪಕ ಅಧ್ಯಕ್ಷ, ಉದ್ಯಮಿ ಎಸ್‌. ಜಯರಾಮ ಶೆಟ್ಟಿ ದಂಪತಿ ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಲ್ಲಿರೇನಯ್ಯ ಮಾಸಿಕದ ವಿಶೇಷ ಸಂಚಿಕೆಯನ್ನು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ವಿ. ಶೆಟ್ಟಿ ಬೆಳ್ತಂಗಡಿ ಅವರ ಧರ್ಮಪತ್ನಿ ಪ್ರಮೀಳಾ ಎಸ್‌. ಶೆಟ್ಟಿ, ತುಳು ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅವರು ಬಿಡುಗಡೆಗೊಳಿಸಿದರು.

ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಅವರು ಬಲ್ಲಿರೇನಯ್ಯ ಪತ್ರಿಕೆ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಯಕ್ಷಗಾನ ಕಲೆಗೆ ವಿಶೇಷವಾದ ಕೊಡುಗೆಯನ್ನು ಈ ಮಾಸಿಕ ನೀಡುತ್ತಿದೆ. ಕಲೆಯನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಗುಜರಾತ್‌ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ ಇವರು ಮಾತನಾಡಿ, ಯಕ್ಷಗಾನ ಕೇವಲ ಕರಾವಳಿ ಕನ್ನಡಿಗರಿಗೆ ಮೀಸಲಾದ ಕಲೆಯಾಗಿದೆ. ರಾಜ್ಯ ಸರಕಾರ ಅದನ್ನು ಕಡೆಗಣಿಸಿದ್ದು, ಕಲೆಗೆ ಇನ್ನೂ ಹೆಚ್ಚಿನ ಬೆಂಬಲವನ್ನು ನೀಡಬೇಕು ಎಂದು ನುಡಿದು ಪತ್ರಿಕೆಯ ಅಭಿವೃದ್ಧಿಗೆ 25 ಸಾವಿರ ರೂ. ಗಳ ದೇಣಿಗೆ ನೀಡಿ ಸಹಕರಿಸಿದರು.

Advertisement

ಉದ್ಘಾಟಕ ಎಸ್‌. ಜಯರಾಮ್‌ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನದೊಂದಿಗಿನ ತನ್ನ ಕೌಟುಂಬಿಕ ಸಂಬಂಧವನ್ನು ವಿವರಿಸಿದರು. ಪತ್ರಿಕೆಯ  ಸಂಪಾದಕ ತಾರನಾಥ ವರ್ಕಾಡಿ  ಅವರು ಮಾತನಾಡಿ, ಬರೋಡಾದ ತುಳು-

ಕನ್ನಡಿಗರ ಭಾಷಾಭಿಮಾನಕ್ಕೆ ಋಣಿಯಾಗಿದ್ದೇನೆ. ನಾಲ್ಕು ವರ್ಷಗಳ ಹಿಂದೆ ಬಲ್ಲಿರೇನಯ್ಯ ಪತ್ರಿಕೆಯ ದ್ವಿತೀಯ ವರ್ಷದ ಕಾರ್ಯಕ್ರಮವನ್ನು ಬರೋಡಾದಲ್ಲಿ ಆಚರಿಸಲಾಗಿತ್ತು. ಮುಂದಿನ ವಾರ್ಷಿಕೋತ್ಸವವನ್ನು ಬರೋಡಾದ ಯಕ್ಷಗಾನ ಹವ್ಯಾಸಿ ಕಲಾವಿದರ ಯಕ್ಷಗಾನ ಪ್ರದರ್ಶನದೊಂದಿಗೆ ಇಲ್ಲೇ ನಡೆಸಲಾಗುವುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದಯಾನಂದ ಬೋಂಟ್ರಾ ಅವರು ಮಾತನಾಡಿ, ಗುಜರಾತಿನ ಯಕ್ಷಗಾನ ಪ್ರೇಮಿಗಳು ಅವರ ಬಲ್ಲಿರೇನಯ್ಯ ಪತ್ರಿಕೆಗೆ ಮಾರು ಹೋಗಿದ್ದಾರೆ. ಪತ್ರಿಕೆಯು ನೂರ್ಕಾಲ ಬಾಳಲಿ. ಕಲೆ, ಸಂಸ್ಕೃತಿಗೆ ಹೆಚ್ಚಿನ ಬೆಂಬಲ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ನುಡಿದು ಹಾರೈಸಿದರು.

ಗುಜರಾತ್‌ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವಿ. ವಿ. ಸುವರ್ಣ ಮತ್ತು ಮಹಿಳಾ ವಿಭಾಗದ ಮುಖ್ಯಸ್ಥೆ ಸವಿತಾ ಸೋಮನಾಥ್‌ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಜಂಟಿ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next