Advertisement

ಮೆಣಸಿನ ಬೀಜಕ್ಕೆ ಆಂಧ್ರದ ಮೊರೆ

08:59 PM Jun 21, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ : ರೈತರಲ್ಲಿ ಟ್ರೆಂಡ್‌ ಸೃಷ್ಟಿಸಿರುವ ಸಿಜೆಂಟಾ ಕಂಪನಿಯ 5531, 2043 ಮೆಣಸಿನಕಾಯಿ ಬಿತ್ತನೆ ಬೀಜಗಳು ಬಳ್ಳಾರಿಯಲ್ಲಿ ಸಮರ್ಪಕವಾಗಿ ಸಿಗದ ಹಿನ್ನೆಲೆಯಲ್ಲಿ ತಾಲೂಕಿನ ರೈತರು ನೆರೆಯ ಆಂಧ್ರದ ಮೊರೆ ಹೋಗಿದ್ದು, ದುಬಾರಿ ಬೆಲೆಗೆ ಬೀಜಗಳನ್ನು ಖರೀದಿಸಿ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಭತ್ತ ಸೇರಿ ಇನ್ನಿತರೆ ಬೆಳೆಗೆ ನೀರಿನ ಕೊರತೆ, ಬೆಂಬಲ ಬೆಲೆಯ ಸಮಸ್ಯೆಯಿಂದಾಗಿ ಬೇಸತ್ತಿರುವ ಬಳ್ಳಾರಿ ತಾಲೂಕಿನ ಬಹುತೇಕ ಕಾಲುವೆ ಕೊನೆಯ ಭಾಗದ ರೈತರು ಮೆಣಸಿನಕಾಯಿ ಬೆಳೆಯಲು ಮುಂದಾಗುತ್ತಿದ್ದಾರೆ.

ಮೆಣಸಿನಕಾಯಿ ಬೆಳೆಯಲು ಖರ್ಚು ಜಾಸ್ತಿ ಎನಿಸಿದರೂ ಅಷ್ಟೇ ಪ್ರಮಾಣದಲ್ಲಿ ಇಳುವರಿ ದೊರೆಯುವುದರ ಜತೆಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭವನ್ನು ತಂದುಕೊಡುತ್ತದೆ. ಕೆಲವೊಮ್ಮೆ ಲಾಭ ಕಡಿಮೆ ಎನಿಸಿದರೂ, ರೈತರನ್ನು ನಷ್ಟದ ಸುಳಿಗಂತೂ ಸಿಲುಕಿಸುವುದಿಲ್ಲ. ಹೀಗಾಗಿ ರೈತರು ಮೆಣಸಿನಕಾಯಿ ಬೆಳೆಯಲು ಮುಂದೆ ಬರುತ್ತಿದ್ದಾರೆ. ಪರಿಣಾಮ ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಬೆಳೆಯುವ ಪ್ರದೇಶವೂ ಹೆಚ್ಚಾಗುತ್ತಿದ್ದು, ಪ್ರಸಕ್ತ ವರ್ಷ ದುಪ್ಪಟ್ಟಾಗಿದೆ. ತೋಟಗಾರಿಕೆ ಇಲಾಖೆ ಅಧಿ ಕಾರಿಗಳು ಹೇಳುವಂತೆ ಈಗಾಗಲೇ ಖಾಸಗಿ ಡಿಸ್ಟ್ರಿಬ್ಯೂಟರ್‌, ಡೀಲರ್ಗಳಿಂದ ಈಗಾಗಲೇ 70 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗುವಷ್ಟು 5531, 2043 ಬಿತ್ತನೆ ಬೀಜವನ್ನು ವಿತರಿಸಲಾಗಿದೆ.

ಆದರೂ, ಈ ತಳಿಯ ಮೆಣಸಿನಕಾಯಿ ಬೀಜಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ಬಳ್ಳಾರಿ ತಾಲೂಕಿನ ರೂಪನಗುಡಿ, ಕೊಳಗಲ್ಲು ಹೋಬಳಿಯ ವಿವಿಧ ಗ್ರಾಮಗಳ ರೈತರು ಮೆಣಸಿನಕಾಯಿ ಬಿತ್ತನೆ ಮಾಡಲು ಮುಂದಾಗಿದ್ದು, 5531, 2043 ಬೀಜಕ್ಕಾಗಿ ಸಂಬಂಧಪಟ್ಟ ಡೀಲರ್‌ಗಳ ಮಳಿಗೆಗಳಿಗೆ ಅಲೆದಿದ್ದಾರೆ. ಬೀಜಗಳು ಸಿಗದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ. ಮಧ್ಯ ಪ್ರವೇಶಿಸಿದ ತೋಟಗಾರಿಕೆ ಇಲಾಖೆ ಅ ಧಿಕಾರಿಗಳು ಡಿಸ್ಟ್ರಿಬ್ಯೂಟರ್‌ನ್ನು ಕರೆಸಿ ಅಧಿಕಾರಿಗಳ ಸಮ್ಮುಖದಲ್ಲೇ ಬೀಜಗಳನ್ನು ವಿತರಿಸುವಂತೆ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಒಂದೆರಡು ಬಾರಿ ಇಲಾಖೆ ಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಿದ್ದು, ಈ ವೇಳೆ ಕೆಲ ಮಹಿಳೆಯರಿಗೆ ಬೀಜಗಳು ಲಭಿಸಿವೆ. ಆದರೂ ರೈತರ ಬೇಡಿಕೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಕಂಪನಿಯೊಂದಿಗೆ ಮಾತನಾಡಿದ ಅಧಿ ಕಾರಿಗಳು, ಬೀಜಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಶನಿವಾರ ಅಥವಾ ಸೋಮವಾರ ವಿತರಿಸುವುದಾಗಿ ತಿಳಿಸಿ ರೈತರನ್ನು ಸಮಾಧಾನ ಪಡಿಸಿದ್ದರು.

ಆದರೆ, ಇದೀಗ 5531, 2043 ತಳಿಯ ಬೀಜಗಳು ಲಭ್ಯವಾಗಿಲ್ಲ. ಬೇರೆ ತಳಿಯ ಬೀಜಗಳನ್ನು ಬಳಸುವಂತೆ ತೋಟಗಾರಿಕೆ ಅ ಧಿಕಾರಿಗಳು ಕೋರಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರೈತರು ನೆರೆಯ ಆಂಧ್ರದ ಆದವಾನಿಗೆ ತೆರಳಿ ದುಬಾರಿ ಬೆಲೆಗೆ ಬೀಜಗಳನ್ನು ಖರೀದಿಸಿ, ನಿಗದಿತ ಬೆಲೆಗೆ ಬಿಲ್‌ ಪಡೆದಿದ್ದಾರೆ.

Advertisement

ದಾರಿ ತಪ್ಪಿಸಿದ ಅಧಿಕಾರಿಗಳು; ತಳಿ ಬದಲಿಸಿದ ರೈತ : 5531, 2043 ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ತೋಟಗಾರಿಕೆ ಇಲಾಖೆಗೆ ಪರದಾಡುತ್ತಿದ್ದ ರೈತರನ್ನು ಅಧಿಕಾರಿಗಳೇ ದಾರಿ ತಪ್ಪಿಸಿದ್ದಾರೆ. ಕಳೆದ ವಾರ ಸೋಮವಾರ ಬೀಜ ವಿತರಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು, ಇದೀಗ 5531, 2043 ತಳಿಯ ಬೀಜ ಸ್ಟಾಕ್‌ ಇಲ್ಲ. ರೈತರು ಇತರೆ ತಳಿಗಳನ್ನು ಬಳಸಬೇಕು ಎನ್ನುತ್ತಿದ್ದಾರೆ.

ಇದರಿಂದ ಆ ತಳಿಯ ಬೀಜ ಸಿಗುವ ಭರವಸೆ ಹುಸಿಯಾಗಿದ್ದು, ಬೇರೆ ತಳಿ ಬೆಳೆಯುವುದು ಅನಿವಾರ್ಯವಾಗಿದೆ. ಮೇಲಾಗಿ ಬೀಜಗಳನ್ನು ಸಸಿಮಡಿ ಮಾಡಲು ಇನ್ನೈದು ದಿನಗಳು ಮಾತ್ರ ಬಾಕಿ ಉಳಿದಿವೆ. ಅನಿವಾರ್ಯವಾಗಿ ಬಂಗಾರು ಕಂಪನಿಯ 355 ತಳಿಯ ಮೆಣಸಿನಕಾಯಿ ಬಿತ್ತನೆ ಬೀಜವನ್ನು ಖರೀದಿಸಿ ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಾಲೂಕಿನ ಬೊಬ್ಬುಕುಂಟೆ ಗ್ರಾಮದ ರೈತ ಗುಂಡಪ್ಪ ತಿಳಿಸಿದರು. ಕಾಳಸಂತೆಯಲ್ಲಿ ಬೀಜ ಮಾರಾಟ: ರೈತರ ಒತ್ತಡಕ್ಕೆ ಮಣಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಲಷ್ಟೇ ಬಿತ್ತನೆ ಬೀಜ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ, ಎಲ್ಲಿಯೂ ಸ್ಟಾಕ್‌ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಅಥವಾ ಒಂದೆರಡು ಕೆಜಿ ಸಿಕ್ಕಿದೆ ಎಂದು ತೋರಿಸುತ್ತಿದ್ದಾರೆ.

ಆದರೆ ರೈತರೇ ಹೇಳುವಂತೆ ಕಾಳಸಂತೆಯಲ್ಲಿ ಸಿಜೆಂಟ್‌ ಕಂಪನಿಯ 5531, 2043 ತಳಿಯ ಮೆಣಸಿನಕಾಯಿ ಬಿತ್ತನೆ ಬೀಜಗಳ ಮಾರಾಟ ಮುಂದುವರೆದಿದೆಯಂತೆ. ಬೀಜಗಳನ್ನು ಹೊಂದಿರುವ ಮಳಿಗೆಗಳ ಮಾಲೀಕರು, ತಮ್ಮ ಪರಿಚಿತರಿಗೆ, ಹತ್ತಿರದವರಿಗೆ ಮಾತ್ರ ದುಬಾರಿ ಬೆಲೆಗೆ ಬೀಜಗಳನ್ನು ಮಾರಾಟ ಮಾಡಿ ನಿಗದಿತ ಬಿಲ್‌ಗ‌ಳನ್ನು ನೀಡಿ ವಿಷಯ ಬಹಿರಂಗವಾಗದಂತೆ ಜಾಗೃತಿ ವಹಿಸುತ್ತಿದ್ದಾರೆ.

ಸಾಮಾನ್ಯ ರೈತರು ಹೋದರೆ ಸ್ಟಾಕ್‌ ಇಲ್ಲ, ಖಾಲಿಯಾಗಿದೆ ಎಂಬ ಸಿದ್ಧ ಉತ್ತರ ನೀಡಿ ವಾಪಸ್‌ ಕಳುಹಿಸುತ್ತಿದ್ದಾರಂತೆ ಎಂದು ತಾಲೂಕಿನ ಚರಕುಂಟೆ ಗ್ರಾಮದ ರೈತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next