Advertisement

ಎರಡು ತಿಂಗಳ ಬಳಿಕ ರಸ್ತೆಗಿಳಿದ ಬಸ್‌

09:08 PM Jun 21, 2021 | Team Udayavani |

ಹೊಸಪೇಟೆ: ಸರ್ಕಾರ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಬೆನ್ನಲ್ಲಿಯೇ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದಿಂದ ಸೋಮವಾರ ಬಸ್‌ ಸಂಚಾರ ಆರಂಭವಾಗಲಿದೆ. ಮೊದಲ ಹಂತವಾಗಿ ನೂರು ಬಸ್‌ ಕಾರ್ಯಾಚರಣೆಗಾಗಿ ಭಾನುವಾರ ಸಿದ್ದತೆ ಮಾಡಿಕೊಂಡಿರುವ ಸಾರಿಗೆ ಸಂಸ್ಥೆ ಬೇಡಿಕೆ ಅನುಗುಣವಾಗಿ ಬಸ್‌ ಸಂಚಾರ ಹೆಚ್ಚಿಸಲು ಕ್ರಮ ಕೈಗೊಂಡಿದೆ. ತೆಲಂಗಾಣ, ಮಹಾರಾಷ್ಟ್ರ ಅಂತಾರಾಜ್ಯ ಹಾಗೂ ಅಂತರ ಜಿಲ್ಲೆಗಳಿಗೆ ಬಸ್‌ ಸಂಚಾರ ಆರಂಭವಾಗಲಿದೆ.

Advertisement

ಭಾನುವಾರದಿಂದಲೇ ಹೈದರಾಬಾದ್‌, ಬೆಂಗಳೂರು ಸೇರಿದಂತೆ ದೂರದ ಸ್ಥಳಗಳಿಗೆ ಆನ್‌ಲೈನ್‌ ಟಿಕೆಟ್‌ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಸ್ಯಾನಿಟೈಜೇಷನ್‌: ವಿಭಾಗದ ಎಲ್ಲ ಡಿಪೋ ಹಾಗೂ ಬಸ್‌ ನಿಲ್ದಾಣಗಳು ಸೇರಿದಂತೆ ಬಸ್‌ ಗಳಿಗೆ ಸ್ಯಾನಿಟೈಜೇಷನ್‌ ಮೂಲಕ ಶುಚಿತ್ವ ಕಾಪಾಡಿಕೊಂಡು ಬಸ್‌ ರಸ್ತೆಗೆ ಇಳಿಯಲಿವೆ. ವಿಭಾಗದ ವ್ಯಾಪ್ತಿಗೆ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಸಂಡೂರು ಹಾಗೂ ಹೊಸಪೇಟೆ ಬರುತ್ತವೆ. ಇದರಲ್ಲಿ ಚಾಲಕ ಮತ್ತು ನಿರ್ವಾಹಕ, ಆಡಳಿತ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಸೇರಿ ಒಟ್ಟು 1,885 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ಪೀಪರ್‌ (ನಾನ್‌ ಎಸಿ, ಎಸಿ), ಸುಹಾಸ, ರಾಜಹಂಸ, ಸಾಮಾನ್ಯ ಬಸ್‌ ಸೇರಿದಂತೆ ಒಟ್ಟು 498 ಬಸ್‌ ಗಳು ಕಾರ್ಯನಿರ್ವಹಿಸುತ್ತಿವೆ.

ನಷ್ಟದ ಸುಳಿ: ಕೋವಿಡ್‌ ಮೊದಲ ಅಲೆಗೆ 51.83 ಕೋಟಿ ರೂ., ಎರಡನೇ ಅಲೆಗೆ 24.15 ಕೋಟಿ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಕೋವಿಡ್‌ ಒಟ್ಟು 76 ಕೋಟಿ ರೂ. ಬೊಕ್ಕಸಕ್ಕೆ ನಷ್ಟವಾಗಿದೆ. ಇದು ಹೊಸಪೇಟೆ ವಿಭಾಗಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಷ್ಕರದಿಂದಲೂ ನಷ್ಟ: ವಿವಿಧ ಬೇಡಿಕೆಗಾಗಿ ಸಾರಿಗೆ ನೌಕರರು ಏ. 7ರಿಂದ 21 ರವರೆಗೆ ಪ್ರತಿಭಟನೆ ನಡೆಸಿದ್ದರು.

ಇದರಿಂದಾಗಿ 6.19 ಕೋಟಿ ರೂ. ನಷ್ಟ ಅನುಭವಿಸುವಂತಾಯಿತು. ಸಾರಿಗೆ ಸಂಸ್ಥೆಗೆ ಮೇಲಿಂದ ಮೇಲೆ ಪೆಟ್ಟುಗಳು ಬೀಳುತ್ತಿದ್ದು ನಷ್ಟದ ಹಾದಿಯನ್ನು ಹಿಡಿಯುವಂತಾಗಿದೆ. ವೇತನ ಕಡಿತ: ಹೊಸಪೇಟೆ ವಿಭಾಗದಲ್ಲಿ ಒಟ್ಟು 1,885 ಸಿಬ್ಬಂದಿ ಇದ್ದಾರೆ. ಈ ಪೈಕಿ 548 ಸಿಬ್ಬಂದಿ ಸಾರಿಗೆ ಮುಷ್ಕರ ಸೇರಿದಂತೆ ನಾನಾ ಕಾರಣಗಳಿಂದ ಗೈರು ಹಾಜರಿ ಹಾಕಿದ್ದರು. ಗೈರು ಹಾಜರಿಯನ್ನು ಹಾಕಿದರವರನ್ನು ಬಿಟ್ಟು ಉಳಿದ ಸಿಬ್ಬಂದಿಗೆ ಏಪ್ರಿಲ್‌ ತಿಂಗಳ ಶೇ. 70ರಷ್ಟು ವೇತನವನ್ನು ನೀಡಲಾಗಿದೆ. ಮೇ ತಿಂಗಳಿನ ಪೂರ್ಣ ಪ್ರಮಾಣದ ವೇತನವನ್ನು ಪಾವತಿಸಲಾಗಿದೆ.

Advertisement

ಕೋವಿಡ್‌ ಲಸಿಕೆಗೆ ಒತ್ತು: ಹೊಸಪೇಟೆ ವಿಭಾಗದ ಸಿಬ್ಬಂದಿಗೆ ಲಸಿಕೆ ಹಾಕಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. 1885 ಸಿಬ್ಬಂದಿ ಪೈಕಿ ಈಗಾಗಲೇ 1680 ಜನರಿಗೆ ಮೊದಲನೇ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. 122 ಜನರಿಗೆ ಎರಡನೇ ಕೋವಿಡ್‌ ಲಸಿಕೆಯನ್ನು ಹಾಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next