ಪಿ. ಸತ್ಯನಾರಾಯಣ
ಹೊಸಪೇಟೆ: ಬಹುಕಾಲದಿಂದ ತಮ್ಮನ್ನು ಬಾ ಧಿಸುತ್ತಿದ್ದ ಉದರ ಬಾಧೆ ನಿವಾರಣೆಗಾಗಿ ಯೋಗ, ಪ್ರಾಣಾಯಾಮ ಮೈಗೂಡಿಸಿಕೊಂಡ ಇಲ್ಲಿನ ಯುವಕರೊಬ್ಬರು ಇದೀಗ ಸಾವಿರಾರು ಜನರಿಗೆ ಯೋಗಗುರು. ಹೌದು! ಬಾಲ್ಯದಿಂದಲೂ ತಮ್ಮನ್ನು ಬಾಧಿಸುತ್ತಿದ್ದ ಹೊಟ್ಟೆನೋವಿನಿಂದ ಮುಕ್ತಿ ಹೊಂದಲು ನಗರದ ಚಲುವಾದಿಕೇರಿಯ ಕಿರಣ್ ಕುಮಾರ್ ಆಯ್ಕೆ ಮಾಡಿಕೊಂಡಿದ್ದು ಯೋಗ ಮತ್ತು ಪ್ರಾಣಾಯಮ ಅಭ್ಯಾಸ. ಇದಕ್ಕಾಗಿ ಯೋಗ ಬಾಬಾ ರಾಮದೇವ ಅವರ ಮೊರೆ ಹೋದ ಅವರು, ಯೋಗಚಾರ್ಯ ಭವರ್ ಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಯೋಗ, ಧ್ಯಾನ, ಪ್ರಾಣಯಾಮ ಕರಗತ ಮಾಡಿಕೊಂಡರು.
ಹೀಗೆ ಕಳೆದ 12 ವರ್ಷಗಳಿಂದ ಸಾವಿರಾರು ಜನರಿಗೆ ಉಚಿತ ಯೋಗಾಭ್ಯಾಸ ನೀಡುವ ಮೂಲಕ ಮನೆ ಮಾತಾಗಿದ್ದಾರೆ. ಕಡಿಮೆ ಅವಧಿ ಯಲ್ಲಿ ಬಾಬಾ ರಾಮದೇವ ಅವರ ಪ್ರೀತಿ ವಿಶ್ವಾಸ ಗಳಿಸಿದರು. ಕಿರಣ್ ಕುಮಾರ್, ಸಾಧನೆ ಗುರುತಿಸಿ ಬಾಬಾ ರಾಮದೇವ ಅವರು, ಕಿರಣ್ ಅವರಿಗೆ ಯೋಗ ದೀಕ್ಷೆ ನೀಡಿ ಉತ್ತರ ಕರ್ನಾಟಕ ಪತಂಜಲಿ ಯುವ ಭಾರತ ಸಂಘಟನೆಯ ರಾಜ್ಯ ಪ್ರಭಾರಿ ನೇಮಕ ಮಾಡಿದ್ದಾರೆ.
10 ಸಾವಿರ ವಿದ್ಯಾರ್ಥಿಗೆ ಯೋಗಭ್ಯಾಸ: ಆರಂಭದಲ್ಲಿ ನಗರದ ಅನೇಕ ವಾರ್ಡ್, ಶಾಲಾ, ಕಾಲೇಜು ಶಿಬಿರಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯೋಗ, ಆಯುರ್ವೇದ, ಭಾರತೀಯ ಸಂಸ್ಕೃತಿ ಕುರಿತು ಅಭ್ಯಾಸ ಮಾಡಿಸಿ ಸೈಎನ್ನಿಸಿಕೊಂಡಿದ್ದಾರೆ. ಹುಬ್ಬಳ್ಳಿ, ಗದಗ, ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಮೈಸೂರು, ಯಾದಗಿರಿ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ-ತಾಲೂಕುಗಳಲ್ಲಿ ಯೋಗ ಶಿಕ್ಷಕರ ತರಬೇತಿ ನೀಡಿದ್ದಾರೆ.
ಯೋಗದ ಮಹತ್ವ: ಯೋಗದ ಜೊತೆಯಲ್ಲಿ ಗ್ಯಾಸ್ಟ್ರಿಕ್, ಮಲಬದ್ಧತೆ, ಹೊಟ್ಟೆ ನೋವು, ಮಂಡಿ ನೋವು, ಸಕ್ಕರೆ ಕಾಯಿಲೆ, ಚರ್ಮದ ಕಾಯಿಲೆ ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದ ರೋಗಿಗಳಿಗೆ ಉಚಿತ ಯೋಗ, ಆಯುರ್ವೇದ ಮೂಲಕ ಗುಣಪಡಿಸುವ ಮೂಲಕ ಯೋಗದ ಮಹತ್ವವನ್ನು ಸಾರಿದ್ದಾರೆ.
ಕೋವಿಡ್ ಹಿನ್ನಲೆಯಲ್ಲಿ ಕಳೆದ ವರ್ಷದಿಂದ ಆನ್‌ಲೈನ್ ಮೂಲಕ ಉಚಿತ ಯೋಗ ತರಬೇತಿ ನೀಡುತ್ತಿರುವ 33 ಹರೆಯದ ಕಿರಣ್ ಕುಮಾರ್, ಬ್ರಹ್ಮಚಾರಿಯಾಗಿ ಉಳಿದುಕೊಂಡು ತಮ್ಮ ಜೀವನವನ್ನು ಯೋಗಕ್ಕಾಗಿ ಮೀಸಲಿಡಬೇಕು ಎಂದು ಸಂಕಲ್ಪ ಮಾಡಿದ್ದಾರೆ.