ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಬಳಿಕ ಸರಕಾರವು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತವು (ಕೆಎಸ್‌ಎಂಎಸ್‌ಸಿಎಲ್) ಟೆಂಡರ್ ಮೂಲಕ ಐವಿ ರಿಂಗರ್ ಲ್ಯಾಕ್ಟೇಟ್ ಔಷಧ ಖರೀದಿಗೆ ಸಂಬಂಧಪಟ್ಟಂತೆ ಆಗಿರುವ ನಿಯಮ ಉಲ್ಲಂಘನೆ ಪರಿಶೀಲನೆಗೆ ಐಎಎಸ್ ಅಧಿಕಾರಿ ಎಂ. ಕನಗವಲ್ಲಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.
ಎಂಪ್ಯಾನಲ್ಸ್ ಲ್ಯಾಬೋರೇಟರಿಗಳು ಔಷಧಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲು ಆಗಿರುವ ನಿಯಮಗಳ ಉಲ್ಲಘನೆಗಳ ಬಗ್ಗೆಯೂ ಈ ತಂಡವು ಪರಿಶೀಲನೆ ನಡೆಸಲಿವೆ.
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಲ್ಲಿ ನೇತೃತ್ವದ ಈ ಸಮಿತಿಯಲ್ಲಿ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿಯವರಿಂದ ನಾಮನಿರ್ದೇಶಿತ ಒಬ್ಬ ಹಿರಿಯ ಔಷಧಶಾಸ್ತ್ರ ಪ್ರಾಧ್ಯಾಪಕರು ಸದಸ್ಯರಾಗಿರಲಿದ್ದಾರೆ.
ಔಷಧ ಖರೀದಿಯಲ್ಲಿ ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳ ಪಾತ್ರ ಮತ್ತ ಲೋಪಗಳನ್ನು ಎಸಗಿರುವ ಅಧಿಕಾರಿಗಳ ಮೇಲೆ ಜವಾಬ್ದಾರಿಗಳನ್ನು ನಿಗದಿ ಮಾಡುವುದು ಸಮಿತಿ ಸದಸ್ಯರು ಐದು ದಿನಗಳೊಳಗಾಗಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿನ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಬೇಕೆಂದು ಆದೇಶಿಸಲಾಗಿದೆ.