Advertisement

ಮರೆಯಾದ ಮಲ್ಲಿಗೆ ನಾಡಿನ ಅವಧೂತ

11:13 AM Nov 16, 2021 | Team Udayavani |

ಹೂವಿನಹಡಗಲಿ: ಎಲ್ಲರಿಗೂ “ಅಪ್ಪಾಜಿ’ ಎಂದು ಸಂಭೋದಿಸುತ್ತಿದ್ದ ಮಲ್ಲಿಗೆ ನಾಡಿನ ಜನರ ಮನ ಗೆದ್ದಿದ್ದ “ಬಸವ’ ಶನಿವಾರ ಸಂಜೆ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದರಿಂದ ಮಲ್ಲಿಗೆ ನಾಡಿನ ಜನರು ದುಃಖದಲ್ಲಿದ್ದಾರೆ.

Advertisement

ಪಟ್ಟಣದ ಶಾಸ್ತ್ರಿ ವೃತ್ತದ ಬಳಿ ಆಯತಪ್ಪಿ ಬಸ್‌ ಚಕ್ರದ ಅಡಿ ಬಿದ್ದು ಗಾಯಗೊಂಡಿದ್ದ ಬಸವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ. ಜಾಲತಾಣಗಳಲ್ಲಿ ಬಸವನ ಸಾವಿನ ಸುದ್ದಿ ಹರಡುತಿದ್ದಂತೆ ಸರ್ಕಾರಿ ಆಸ್ಪತ್ರೆ ಬಳಿ ಸಾವಿರಾರು ಜನರು ಜಮಾಯಿಸಿದ್ದರು. ನಂತರ ಟ್ರ್ಯಾಕ್ಟರ್‌ನಲ್ಲಿ ಬಸವನ ಅಂತಿಮ ಯಾತ್ರೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಿತು.

ಪಟ್ಟಣದ ಅಪಾರ ಜನರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಕಂಬನಿ ಮಿಡಿದರು. ಅಕಾಲಿಕ ಸಾವಿಗೀಡಾದ ಬಸವನಿಗೆ ಪಟ್ಟಣದ ಮುಖ್ಯ ರಸ್ತೆ, ವೃತ್ತಗಳಲ್ಲಿ ಪ್ಲೆಕ್ಸ್‌, ಬ್ಯಾನರ್‌ ಅಳವಡಿಸಿ ಶ್ರದ್ದಾಂಜಲಿ ಸಲ್ಲಿಸಿದರು. ಜಾಲತಾಣಗಳಲ್ಲೂ ಅಪಾರ ಜನರು ಬಸವನೊಂದಿಗಿನ ಒಡನಾಟ ಹಂಚಿಕೊಂಡು ಶೋಕ ಸಂದೇಶಗಳನ್ನು ಹಾಕಿದ್ದರು.

ತನ್ನ ಮುಗ್ಧ ಮನಸ್ಸಿನಿಂದಲೇ ಪಟ್ಟಣದ ಜನರ ಪ್ರೀತಿ ಗಳಿಸಿದ್ದ ಬಸವನಿಗೆ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಗೌರವ ನಮನ ಸಲ್ಲಿಸಿದ್ದು, ಬಸವನ ಬದುಕು ಸಾರ್ಥಕಗೊಳಿಸಿದಂತೆ ಕಂಡಿತು.

ಪಟ್ಟಣದ ಕೋಟೆ ನಿವಾಸಿಯಾದ ಬಸವರಾಜ ಹುಟ್ಟುತ್ತಲೇ ದೈವಾಂಶ ಸಂಭೂತನಾಗಿದ್ದ. ಚಿಕ್ಕ ವಯಸ್ಸಿನಿಂದ ಬಟ್ಟೆ ಧರಿಸದೇ ಮನೆ ಮನೆಗೆ ತಿರುಗಿ ಅಚ್ಚರಿಪಡಿಸಿದ್ದ. ಅಂಗಡಿಗಳ ಮುಂದೆ 1 ರೂ. ಕೇಳುತ್ತಿದ್ದ ಈತ ಅಂಗಡಿಯವರು ಆತನಿಗೆ ಹಣ ನೀಡಿದರೆ ಅವರಿಗೆ ಅದೃಷ್ಟ ತಿರುಗಿದಂತೆ ಎಂದೆ ಭಾವಿಸುತ್ತಿದ್ದರು. ಈತನ ಚಹರೆಗಳನ್ನು ಗುರುತಿಸುತ್ತಿದ್ದ ಅಧ್ಯಾತ್ಮ ಸಾಧಕರು ಈತ ಸಾಮಾನ್ಯನಲ್ಲ. ಹಡಗಲಿಯ ಅವಧೂತ ಎಂದು ಹೇಳುತ್ತಿದ್ದರು.

Advertisement

ಹುಟ್ಟುತ್ತಲೇ ಬಟ್ಟೆ ಧರಿಸದೆ ತಿರುಗುತ್ತಿದ್ದ ಬಸವ ಬೆಳೆಯುತ್ತಿದ್ದಂತೆ ಜನರು ಬಟ್ಟೆಯನ್ನು ಧರಿಸಲು ನೀಡಿ, 51 ವರ್ಷದಲ್ಲೂ ಸಹ ಮಗುವಿನ ಮುಗ್ಧತೆಯನ್ನು ಬಿಟ್ಟುಕೊಡದ ಈತ ಯಾವಾಗಲೂ ಅವಧೂತ ಸ್ಥಿತಿಯಲ್ಲಿರುತ್ತಿದ್ದು. ಸದಾ ಮದ್ಯಪಾನ, ಸಿಗರೇಟು ಸೇದುತ್ತಿದ್ದು. ಎಂದೂ ಸರಿಯಾಗಿ ಆಹಾರ ಸೇವಿಸದ ಈತ 51 ವರ್ಷ ಕಳೆದರೂ ಒಂದು ಬಾರಿಯೂ ಅನಾರೋಗ್ಯ ಪೀಡಿತನಾಗಿರಲಿಲ್ಲ. ಕೊರೊನಾ ಸಂದರ್ಭದಲ್ಲೂ ಇಡೀ ಜಗತ್ತೇ ಮಾಸ್ಕ್ ಧರಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಈತ ಮಾತ್ರ ಮಾಸ್ಕ್ ಧರಿಸದೆ ಸದಾ ಬೀದಿಯಲ್ಲೇ ಜೀವನ ಸಾಗಿಸುತ್ತಿದ್ದ. ಈತನ ಬದುಕು ವೈದ್ಯ ಲೋಕಕ್ಕೂ ಸೋಜಿಗ ಎನಿಸಿತ್ತು.

ಶ್ವಾನಪ್ರಿಯ ಬಸವ

ನಾಯಿಗಳೆಂದರೆ ಬಸವನಿಗೆ ಪಂಚಪ್ರಾಣ. ಜನರು ಆತನಿಗೆ ನೀಡುತ್ತಿದ್ದ ಆಹಾರ ಪದಾರ್ಥಗಳನ್ನು ನಾಯಿಗೆ ನೀಡುವ ಮೂಲಕ ನಾಯಿಗಳ ಪ್ರೀತಿ ಗಳಿಸಿದ್ದ. ಸದಾ ನಾಯಿಗಳೊಂದಿಗೆ ಇರುತ್ತಿದ್ದ ಈತ ನಾಯಿಗಳ ಮೈಮೇಲೆ ಬಿದ್ದು ಅವುಗಳ ಬಾಯಲ್ಲಿ ಬಾಯಿ ಇಡುತ್ತಿದ್ದ. ಆದರೂ ಸಹ ನಾಯಿಗಳು ಈತನಿಗೆ ಕಚ್ಚುತ್ತಿರಲಿಲ್ಲ. ಪಟ್ಟಣದ ಬೀದಿಯಲ್ಲೆಲ್ಲಾ ತಿರುಗುತ್ತಿದ್ದ ಈತ ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಯಲ್ಲಮ್ಮನ ದೇವಸ್ಥಾನದ ಬಳಿ ರಾತ್ರಿ ಕಳೆಯುತ್ತಿದ್ದ. ಧರಿಸಿದ್ದ ಬಟ್ಟೆಗಳು ಕೊಳೆಯಾದರೂ ಸಹ ಒಂದು ದಿನವೂ ಬಟ್ಟೆಗಳನ್ನು ಶುಚಿಗೊಳಿಸದೇ ಅದೇ ಬಟ್ಟೆಯಲ್ಲಿ ವಾರ, ಹದಿನೈದು ದಿನ ಕಳೆಯುತ್ತಿದ್ದ. ತನಗೆ ಬೇಡ ಎನಿಸಿದರೆ ಎದುರಿಗೆ ಬರುವವರಿಗೆ ಅಪ್ಪಾಜಿ ಹೊಸ ಬಟ್ಟೆ ಕೊಡಿಸಿ ಎಂದು ಸಮೀಪದಲ್ಲಿರುವ ಬಟ್ಟೆ ಅಂಗಡಿಗೆ ತೆರಳಿ ಹೊಸ ಬಟ್ಟೆ ಧರಿಸುತ್ತಿದ್ದ. ಹೊಸ ಬಟ್ಟೆ ಧರಿಸಿ ಬಂದಾಗಲೆಲ್ಲಾ ಹೂ ವ್ಯಾಪಾರಿಗಳು ಆತನಿಗೆ ಹಾರ, ತುರಾಯಿ ಹಾಕಿ ತಮ್ಮ ಪ್ರೀತಿ ತೋರಿಸುತ್ತಿದ್ದರು.

ಸಾರಿಗೆ ಹಾಗೂ ಪೊಲೀಸ್ಸಿಬ್ಬಂದಿಗೆ ಅಚ್ಚುಮೆಚ್ಚು

ಚಿಕ್ಕಂದಿನಿಂದಲೂ ಸಹ ಬಸ್‌ ನಿಲ್ದಾಣ ಬಳಿ ಹೆಚ್ಚು ಸಮಯ ಕಳೆಯುತ್ತಿದ್ದ ಬಸವನಿಗೆ ಸಾರಿಗೆ ಸಿಬ್ಬಂದಿಯೊಂದಿಗೆ ಪ್ರೀತಿಯ ಬೆಸುಗೆ ಇತ್ತು. ಅವರು ನೀಡುವ ಹಣದಿಂದ ಮದ್ಯಪಾನ ಮಾಡುತ್ತಿದ್ದ. ನಂತರ ಪೊಲೀಸ್‌ ಠಾಣೆ ಮುಂದೆ ನಿಂತು ವಿಚಿತ್ರ ಸಂಜ್ಞೆಯ ಮೂಲಕ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಿದ್ದು. ಕೋವಿಡ್‌ ಲಾಕ್‌ ಡೌನ್‌ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿ ನಿರಂತರವಾಗಿ ಆಹಾರ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next