ಆರ್.ಬಸವರೆಡ್ಡಿ ಕರೂರು
ಸಿರುಗುಪ್ಪ: ತಾಲೂಕಿನಲ್ಲಿ ತಾಳೆ ಬೆಳೆಯನ್ನು ಬೆಳೆದ ರೈತರಿಗೆ ನಿಶ್ಚಿತ ಆದಾಯ ದೊರೆತಿದೆ. ಈ ಬೆಳೆಯನ್ನು ಬೆಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಸಕ್ತಿ ತೋರಿಸುತ್ತಿದ್ದು ತೋಟಗಾರಿಕೆ ಇಲಾಖೆಯು ಉತ್ತೇಜನ ನೀಡುತ್ತಿದೆ. ತಾಲೂಕಿನ ಹಳೇಕೋಟೆ, ದೇಶನೂರು, ಬಲಕುಂದಿ, ಕರೂರು, ಉಪ್ಪಾರಹೊಸಳ್ಳಿ, ಹಚ್ಚೊಳ್ಳಿ ಗ್ರಾಮಗಳಲ್ಲಿ 90 ಹೆಕ್ಟೇರ್‌ಗಳಲ್ಲಿ ತಾಳೆ ಬೆಳೆ ಬೆಳೆಯಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ತಾಳೆ ಬೆಳೆಯಿಂದ ರೈತರಿಗೆ ನಿಶ್ಚಿತ ಆದಾಯ ದೊರೆಯುತ್ತಿದೆ. ತಾಳೆ ಬೆಳೆ ಹಣ್ಣುಗಳಿಂದ ಪಾಮ್ ಆಯಿಲ್ ತಯಾರಿಸುತ್ತಿದ್ದು, ಕೆಲ ತಿಂಗಳ ಹಿಂದೆ ಒಂದು ಕೆಜಿ ಪಾಮ್ ಆಯಿಲ್‌ಗೆ ರೂ. 80ರಿಂದ 90 ಬೆಲೆ ಇತ್ತು, ಆದರೆ ಈಗ ರೂ.120 ರಿಂದ 140ರವರೆಗೆ ಮಾರಾಟವಾಗುತ್ತಿದ್ದು ಈ ಕಾರಣದಿಂದ ಸರ್ಕಾರವು ತಾಳೆ ಹಣ್ಣಿನ ಖರೀದಿ ದರವನ್ನು ಹೆಚ್ಚಳ ಮಾಡಿದ್ದು, ಕಳೆದ ವರ್ಷ ಒಂದು ಟನ್ ತಾಳೆ ಹಣ್ಣಿಗೆ ರೂ. 9000/12000 ಇತ್ತು. ಆದರೆ ಈ ವರ್ಷ ರೂ. 12,500 ರಿಂದ 16,856ಗಳಿಗೆ ಹೆಚ್ಚಳವಾಗಿದೆ.
ಬೇರೆ ಯಾವುದೇ ಬೆಳೆಗಳಿಗೆ ಹೋಲಿಸಿದರೆ ತಾಳೆಬೆಳೆಗೆ ನಿಶ್ಚಿತ ಆದಾಯ ಖಚಿತವಾಗಿದೆ. ಕಳೆದ ವರ್ಷ ತಾಲೂಕಿನ ತಾಳೆ ಬೆಳೆಗಾರರಿಗೆ ಸರಾಸರಿ ಆದಾಯ ಒಂದು ಎಕರೆಗೆ ರೂ. 53 ಸಾವಿರ ಬಂದಿತ್ತು. ತಾಲೂಕಿನ ದೇಶನೂರು ಗ್ರಾಮದ ತಾಳೆ ಬೆಳೆಗಾರ ಕೃಷ್ಣಮೂರ್ತಿಯವರು ತಾಳೆ ಬೆಳೆದು ಒಂದು ಎಕರೆಗೆ ರೂ. 1,49.155ಗಳಷ್ಟು ಆದಾಯ ಪಡೆದಿದ್ದರು.
ಈ ರೈತನು ತನ್ನ ಒಟ್ಟು 6 ಎಕರೆಯಲ್ಲಿ ಬೆಳೆದ ತಾಳೆ ಬೆಳೆಯಿಂದ ರೂ.8,80,013ಗಳನ್ನು ಆದಾಯ ಪಡೆದಿದ್ದು, ತನ್ನ ಬೆಳೆಯ ಅನುಭವವನ್ನು ತಾಳೆ ಬೆಳೆಯುವ ಇತರೆ ರೈತರಿಗೆ ತಿಳಿಸಿಕೊಡುತ್ತಿದ್ದಾರೆ.
ಖರ್ಚು ಕಡಿಮೆ, ಹೆಚ್ಚಿನ ಆದಾಯ ಬರುವ ತಾಳೆ ಬೆಳೆಯನ್ನು ಬೆಳೆದರೆ ನಿಶ್ಚಿತ ಆದಾಯ ದೊರೆಯುತ್ತದೆ. ನನ್ನ 6 ಎಕರೆ ಜಮೀನಿನಲ್ಲಿ ತಾಳೆ ಬೆಳೆ ಬೆಳೆದಿದ್ದು, ರೂ.8,80,013ಗಳ ಲಾಭವನ್ನು ಪಡೆದಿದ್ದೇನೆ. ರೈತರು ತಾಳೆ ಬೆಳೆಯ ಬಗ್ಗೆ ಮಾಹಿತಿ ಪಡೆದು ಬೆಳೆದರೆ ಉತ್ತಮ ಆದಾಯ ಪಡೆಯಲು ಸಾಧ್ಯವಾಗುತ್ತದೆ.
ಕೃಷ್ಣಮೂರ್ತಿ, ತಾಳೆ ಬೆಳೆ ಬೆಳೆದ ರೈತ