ಕಂಪ್ಲಿ: ಅವಳಿ ಜಿಲ್ಲೆಗಳನ್ನು ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಮುಕ್ತ ಮಾಡಲು ಸರ್ಕಾರದ ಜೊತೆಗೆ ಸಂಘ-ಸಂಸ್ಥೆಗಳ ಪಾತ್ರವೂ ಅತ್ಯಂತ ಮಹತ್ವದ್ದಾಗಿದ್ದು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ತಹಶೀಲ್ದಾರ್ ಗೌಸಿಯಾಬೇಗಂ ತಿಳಿಸಿದರು. ಅವರು ಪಟ್ಟಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಬ್ರೆಡ್ಸ್ ಬೆಂಗಳೂರು ಮತ್ತು ಡಾನ್‌ಬೋಸ್ಕೋ ಸಮಾಜ ಸೇವಾ ಸಂಸ್ಥೆ ಹೊಸಪೇಟೆಯವರು ಆಯೋಜಿಸಿದ್ದ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಮುಕ್ತ ಜಿಲ್ಲೆಗಳನ್ನಾಗಿಸಲು ಸಹಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಬೃಹತ್ ಬ್ಯಾನರಲ್ಲಿ ಸಹಿ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಳೆದ ಎರಡು ಅವಧಿ ಯ ಕೋವಿಡ್ ಸಂದರ್ಭದಲ್ಲಿ ಶಾಲೆಗಳು ಇಲ್ಲದೇ ಇರುವುದರಿಂದ ಸಣ್ಣ ಸಣ್ಣ ಮಕ್ಕಳು ಕೂಲಿ ಕೆಲಸಗಳಿಗೆ ತೆರಳುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸಣ್ಣ ಮಕ್ಕಳಿಗೆ ವಿವಾಹಗಳನ್ನು ಮಾಡುವ ಪ್ರಕರಣಗಳು ಜರುಗಿದ್ದು, ತಾಲೂಕು ಆಡಳಿತ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಡಾನ್‌ಬಾಸ್ಕೋ ಸಮಾಜಸೇವಾ ಸಂಸ್ಥೆಗಳು ಇಂಥ ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಬಹಳಷ್ಟು ಶ್ರಮಪಟ್ಟಿವೆ.
ಆದರೂ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆದರೂ ಸಹಿತ ಅಂಥವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಮಕ್ಕಳ ಆರೋಗ್ಯ ಮತ್ತು ಭವ್ಯ ರಾಷ್ಟ್ರದ ನಿರ್ಮಾಣದ ದೃಷ್ಟಿಯಿಂದ ಬಾಲ ಕಾರ್ಮಿಕ ಪದ್ದತಿಯಾಗಲಿ, ಬಾಲ್ಯ ವಿವಾಹಗಳಾಗಲಿ ನಡೆಯದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕೆಂದರು. ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ಮಾತನಾಡಿದರು.
ನಂತರ ಸಹಿ ಸಂಗ್ರಹ ಬ್ಯಾನರ್‌ಗೆ ಗಣ್ಯರು ಮತ್ತು ಸಾರ್ವಜನಿಕರು ಸಹಿಗಳನ್ನು ಮಾಡುವ ಮೂಲಕ ಸಹಿಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ಹೊಸಪೇಟೆ ನಿರ್ದೇಶಕ ಫಾದರ್ ಜೆ.ಆನಂದ, ಆರೋಗ್ಯ ಇಲಾಖೆಯ ಚನ್ನಬಸಪ್ಪ, ಪುರಸಭೆ ಮುಖ್ಯಾ ಧಿಕಾರಿ ಎನ್. ಶಿವಲಿಂಗಪ್ಪ, ನೇತ್ರಾ, ಶರಣಪ್ಪ, ಗೀತಾಂಜಲಿ, ಗಣೇಶ್, ಅನಿತಾ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.