ಬಳ್ಳಾರಿ: ಎಲ್ಲ ನೌಕರರಿಗೂ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. 50 ವರ್ಷ ದಾಟಿದ ನೌಕರರಿಗೆ ಕಡ್ಡಾಯ ನಿವೃತ್ತಿಗೊಳಿಸುವ ನೀತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಿತು. ಈಚೆಗೆ ಐದು ರಾಜ್ಯಗಳಲ್ಲಿ ಚುನಾವಣೆ ಮುಗಿದ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಪ್ರತಿ ದಿನ ಏರುತ್ತಿದ್ದು, ನೂರು ರೂಪಾಯಿ ಗಡಿ ದಾಟಿದೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ವ್ಯವಸ್ಥೆಯು ಪೆಟ್ರೋಲಿಯಂ ಕಂಪನಿಗಳ ಹಿಡಿತದಲ್ಲಿದ್ದು, ಇದು ಅತ್ಯವಶ್ಯ ವಸ್ತುಗಳ ಬೆಲೆಯೇರಿಕೆಗೂ ಕಾರಣವಾಗಿದ್ದು, ಜನತೆಯನ್ನು ಹಲವು ಸಂಕಷ್ಟಗಳಿಗೆ ಗುರಿ ಮಾಡಿದೆ. ದೇಶದ ಆರ್ಥಿಕತೆಯು ಕುಸಿಯುತ್ತಿದೆ. ಸಾಮಾನ್ಯ ಜನತೆಯ ಕೈಗೆ ಹಣ ನೀಡುವುದರ ಬದಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ತುಟ್ಟಿಭತ್ಯೆ ಮತ್ತು ಇತರೆ ಸೌಲಭ್ಯ ಸ್ಥಗಿತಗೊಳಿಸಿರುವುದು ನೌಕರರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ಆದ್ಯತೆ ಮೇಲೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಜನರಿಗೂ ಉಚಿತವಾಗಿ ಲಸಿಕೆ ಹಾಕಬೇಕು. ರಾಜ್ಯ ಸರ್ಕಾರ ಕಳೆದ 2020 ಜನವರಿ ತಿಂಗಳಿಂದ 2021 ಜೂನ್ ತಿಂಗಳವರೆಗೆ 18 ತಿಂಗಳ ತುಟ್ಟಿಭತ್ಯೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ತುಟ್ಟಿಭತ್ಯೆ ಹೆಚ್ಚಳದ ದರವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಪಿಎಫ್‌ಆರ್‌ಡಿಎ/ಎನ್‌ಪಿಎಸ್ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಎಲ್ಲ ನೌಕರರಿಗೂ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. 50 ವರ್ಷ ದಾಟಿದ ನೌಕರರಿಗೆ ಕಡ್ಡಾಯ ನಿವೃತ್ತಿಗೊಳಿಸುವ ನೀತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ರಾಜ್ಯದಲ್ಲಿ ಖಾಲಿಯಿರುವ 2.80 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು.
ಸರ್ಕಾರದ ಖಾಲಿ ಹುದ್ದೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ, ಅತಿಥಿ, ಅರೆಕಾಲಿಕ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವಿವಿಧ ಕೋರ್ಟ್‌ಗಳ ಆದೇಶದಂತೆ ಕಾಯಂ ನೌಕರರಿಗೆ ಸಮಾನವಾದ ವೇತನ ಭತ್ಯೆಗಳನ್ನು ನೀಡಬೇಕು. ಅವರನ್ನು ಸರ್ಕಾರಿ ಸೇವೆಯಲ್ಲಿ ನಿಯಮಾನುಸಾರ ಕಾಯಂಗೊಳಿಸಬೇಕು. ಆಡಳಿತ ಸುಧಾರಣಾ ಆಯೋಗ-2 ಪ್ರಸ್ತಾವನೆಯಲ್ಲಿ ಇಲಾಖೆ/ ಹುದ್ದೆಗಳ ಕಡಿತಗೊಳಿಸುವ ಪ್ರಕ್ರಿಯೆ ಕೈಬಿಡಬೇಕು. 6ನೇ ವೇತನ ಆಯೋಗ ಜಾರಿಗೆ ತರಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಆಲಂಬಾಷಾ, ಪ್ರಧಾನ ಕಾರ್ಯದರ್ಶಿ ಡಿ.ಸುಲ್ತಾನ್‌ಸಾಹೇಬ್, ತಾಲೂಕು ಘಟಕದ ಗಡದ್ ಬಸವರಾಜ್, ಹನುಮಂತಪ್ಪ, ಹನುಮಂತ, ರಾಮಕೃಷ್ಣ, ಉಮಾಶಂಕರ್, ವೆಂಕಟೇಶ್, ನಾಗರಾಜ್ ರ್ಯಾವಣಕಿ, ಶರಣಪ್ಪ, ವಿಜಯಕುಮಾರ್, ಸುಭಾನ್, ಹೊನ್ನೂರಸ್ವಾಮಿ, ಗುರುಸಿದ್ದಮೂರ್ತಿ ಸೇರಿದಂತೆ ಹಲವರು ಇದ್ದರು.