ಬಳ್ಳಾರಿ: ನಗರದ ಜಿಲ್ಲಾಧಿ ಕಾರಿ ಕಚೇರಿ ಆವರಣದಲ್ಲಿ ಮಹಿಳೆಯರ ಮತ್ತು ಮಕ್ಕಳ ಕುರಿತು ಜಾಗೃತಿ ಮೂಡಿಸುವ ಜಾಗೃತಿ ರಥಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವರ್ಲ್ಡ್ ವಿಷನ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ರಥಕ್ಕೆ ಜಿಪಂ ಸಿಇಒ ಕೆ.ಆರ್. ನಂದಿನಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಒಂದು ಕಾರ್ಯ ಸರ್ವರಿಗೂ ತಲುಪಬೇಕಾದರೆ ಸಮುದಾಯದ ಜನಪ್ರತಿನಿಧಿ ಗಳು, ಚುನಾಯಿತ ಪ್ರತಿನಿಧಿಗಳು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧಿ ಕಾರಿ ವರ್ಗದವರು ಕಾರ್ಯಪ್ರವೃತ್ತರಾಗಬೇಕು. ಜಾಗೃತಿ ರಥವು ತಾಲೂಕಿನ ಆಯ್ದ 35 ಗ್ರಾಮಗಳಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸಲಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ತಾಲೂಕಿನಲ್ಲಿ ಜಾಗೃತಿ ರಥವು ಸಂಚರಿಸಲಿದೆ ಎಂದರು.
ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಲ್ಯ ವಿವಾಹ ತಡೆ, ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಈ ಹಿಂದೆ ಗ್ರಾಪಂ ನಡೆ ಮಹಿಳಾ ಮತ್ತು ಮಕ್ಕಳ ಕಡೆ ಕಾರ್ಯಕ್ರಮವು ಜಿಲ್ಲೆಯಲ್ಲಿ ಬಾಲ್ಯವಿವಾಹಗಳನ್ನು ತಡೆಯಲು ಸಹಕಾರಿಯಾಗಿತ್ತು. ಪ್ರಸ್ತುತ ಕೋವಿಡ್ ಕಾರಣದಿಂದಾಗಿ ನಿಲ್ಲಿಸಲಾಗಿದ್ದ ಈ ಕಾರ್ಯಕ್ರಮವನ್ನು ಇದೀಗ ಪುನಃ ರೂಪಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಇದೇ ಸಮಯದಲ್ಲಿ ವರ್ಲ್ಡ್ವಿಷನ್ ವತಿಯಿಂದ 20 ಲಕ್ಷ ರೂ. ವೆಚ್ಚದ 10 ಕಾನ್ಸಂಟ್ರೇಟರ್ ಮತ್ತು ಪಿಪಿಇ ಕಿಟ್‌ಗಳನ್ನು ಜಿಲ್ಲಾಸ್ಪತ್ರೆಗೆ ನೀಡಿದ್ದು, ಸಾಂಕೇತಿಕವಾಗಿ 1 ಕಾನ್ಸಂಟ್ರೇಟರ್ ಅನ್ನು ಜಿಪಂ ಸಿಇಒ ಕೆ.ಆರ್. ನಂದಿನಿ ಅವರು ವರ್ಲ್ಡ್ ವಿಷನ್ ಸಂಸ್ಥೆಯ ವ್ಯವಸ್ಥಾಪಕಿ ಪ್ರೇಮಲತಾ ಅವರಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್. ನಾಗರಾಜ, ಮಕ್ಕಳ ರಕ್ಷಣಾ ಧಿಕಾರಿ ಚಾಂದ್‌ಪಾಷಾ, ವರ್ಲ್ಡ್ ವಿಷನ್ ಸಂಸ್ಥೆಯ ವ್ಯವಸ್ಥಾಪಕಿ ಪ್ರೇಮಲತಾ ಮತ್ತು ಇತರರು ಇದ್ದರು.