Advertisement

ಆಸರೆ ಮನೆಗಳಲ್ಲಿ ಸಂತ್ರಸ್ತರಿಗಿಲ್ಲ ಆಶ್ರಯ

09:42 PM Jul 09, 2021 | Team Udayavani |

ಸಿರುಗುಪ್ಪ: ತಾಲೂಕನ್ನು ಬಾಧಿಸುತ್ತಿರುವ ಶಾಶ್ವತ ಸಮಸ್ಯೆಗಳಲ್ಲಿ ತುಂಗಭದ್ರಾ ನದಿಯಿಂದ ಎದುರಾಗುವ ನೆರೆಯು ಒಂದು. ಆದರೆ ಈ ಶಾಶ್ವತ ಸಮಸ್ಯೆಗೆ ಪರಿಹಾರ ಮಾತ್ರ ಇಂದಿಗೂ ಸಿಕ್ಕಿಲ್ಲ. ಅದರಲ್ಲೂ ಮುಖ್ಯವಾಗಿ ತಾಲೂಕಿನ ಹಚ್ಚೊಳ್ಳಿ ಗ್ರಾಮಸ್ಥರಿಗೆ ಪ್ರತಿಬಾರಿಯೂ ಮಳೆ ಹೆಚ್ಚಾದರೆ ಮತ್ತು ತುಂಗಭದ್ರಾ ಜಲಾಶಯದಿಂದ 3 ಲಕ್ಷ ಕ್ಯೂಸೆಕ್‌ ನೀರು ಬಿಟ್ಟರೆ ಜಲ ಕಂಟಕ ತಪ್ಪದು.

Advertisement

ಈ ಸಮಸ್ಯೆ ಇಂದು ನಿನ್ನೆಯದಲ್ಲ. 2009ರಲ್ಲಿ ಬಂದ ನೆರೆಹಾವಳಿಯಿಂದಾಗಿ ಈ ಗ್ರಾಮವನ್ನು ಸ್ಥಳಾಂತರಿಸಬೇಕು ಎಂಬ ಸರ್ಕಾರದ ಆಶಯ ಇಂದಿಗೂ ಈಡೇರಿಲ್ಲ, ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಸುಮಾರು 100 ಎಕರೆ ಪ್ರದೇಶದಲ್ಲಿ ನಿರ್ಮಿಸಿದ 1100ಕ್ಕೂ ಹೆಚ್ಚು ಮನೆಗಳು ಅವೈಜ್ಞಾನಿಕ ಎಂಬ ಕಾರಣಕ್ಕೆ ಗ್ರಾಮಸ್ಥರು ಈಕಡೆ ತಿರುಗಿಯೂ ನೋಡಿಲ್ಲ. ಹೀಗಾಗಿ ಆ ಮನೆಗಳೆಲ್ಲ ಅವಸಾನದ ಅಂಚಿಗೆ ತಲುಪಿವೆ.

ಈಗ ಮತ್ತೆ ಜಿಲ್ಲಾಡಳಿತ ಗ್ರಾಮಸ್ಥರ ಮುಂದೆ ಹೊಸ ಪ್ರಸ್ತಾವನೆ ಮುಂದಿಟ್ಟಿದ್ದು, ಅದಕ್ಕೆ ಗ್ರಾಮಸ್ಥರು ಸ್ಪಂದಿಸುತ್ತಿಲ್ಲ, ಇದರಿಂದಾಗಿ ಸಮಸ್ಯೆವೂ ಇತ್ಯಾರ್ಥವಾಗಿಲ್ಲ. ತಾಲೂಕಿನಲ್ಲಿ 2 ರಿಂದ 3 ದಿನ ಭಾರಿ ಮಳೆಯಾದರೆ ಮತ್ತು ತುಂಗಭದ್ರಾ ಜಲಾಶಯದಿಂದ ಸುಮಾರು 3 ಲಕ್ಷ ಕ್ಯೂಸೆಕ್‌ ನೀರನ್ನು ಬಿಟ್ಟರೆ ಗ್ರಾಮಕ್ಕೆ ಪ್ರವಾಹದ ನೀರು ಬರುತ್ತದೆ. ಈ ಕ್ಷಣಕ್ಕೆ ಪ್ರವಾಹ ಎದುರಾದರೆ ಮಾತ್ರ ಈ ಗ್ರಾಮಸ್ಥರು ಜೀವ ರಕ್ಷಣೆಗೆ ಮತ್ತು ಕಾಳಜಿ ಕೇಂದ್ರಗಳಿಗೆ ಹೋಗಬೇಕಾಗಿದೆ.

2009ರಲ್ಲಿ ತಾಲೂಕಿನಲ್ಲಿ ಉಂಟಾದ ಭೀಕರ ಪ್ರವಾಹದ ವೇಳೆ ತುಂಗಭದ್ರಾ ನದಿ ಪಾತ್ರದಲ್ಲಿರುವ ಹಚ್ಚೊಳ್ಳಿ ಗ್ರಾಮವು ಜಲದಿಗ್ಬಂಧನಕ್ಕೆ ಒಳಗಾಗಿತ್ತು. ಸರ್ಕಾರ ಗ್ರಾಮಸ್ಥರಿಗೆ 100 ಎಕರೆ ಪ್ರದೇಶದಲ್ಲಿ ನವಗ್ರಾಮ ನಿರ್ಮಿಸಿ ಅದರಲ್ಲಿ 1200 ಆಸರೆ ಮನೆಗಳನ್ನು ನಿರ್ಮಾಣ ಮಾಡಿ ವಿತರಿಸಲು ತೀರ್ಮಾನಿಸಿತ್ತು. 30×40ರ ಅಳತೆಯ ಜಾಗದಲ್ಲಿ ಸುಮಾರು 1100 ಮನೆಗಳನ್ನು ಕಟ್ಟಲಾಗಿದೆ.

ಗ್ರಾಮಸ್ಥರಿಗೆ ಹಕ್ಕುಪತ್ರ ಕೊಡಬೇಕು ಎನ್ನುವಷ್ಟರಲ್ಲಿ ಗ್ರಾಮಸ್ಥರು ಆ ಮನೆಗಳಿಗೆ ಹೋಗಲು ಒಪ್ಪಲಿಲ್ಲ. “ಮನೆಗಳು ಚಿಕ್ಕದಾಗಿವೆ. ದನಕರು ಕಟ್ಟಲು ಸ್ಥಳವಿಲ್ಲ. ಅಲ್ಲದೆ ವಾಸ್ತುಪ್ರಕಾರ ಮನೆ ಕಟ್ಟಿಲ್ಲ’ ಎಂದು ದೂರಿದ ಜನ, “ನಮಗೆ ಆ ಮನೆಗಳೇ ಬೇಡ’ ಎಂದು ತಿರಸ್ಕರಿಸಿದ್ದರು.

Advertisement

ಅಲ್ಲಿಂದ ಪ್ರತಿಬಾರಿ ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಾಗ ಮಾತ್ರ ಗ್ರಾಮಕ್ಕೆ ಅಧಿ ಕಾರಿಗಳು ತೆರಳಿ ಅವರ ಮನವೊಲಿಸುವುದು, ಮರಳಿ ಬರುವುದೇ ಆಗಿದೆ. 2011ರಿಂದ 2017ರ ವರೆಗೆ ಆಸರೆ ಮನೆ ಈ ನವಗ್ರಾಮದಲ್ಲಿ ಕಟ್ಟಲಾಗುತ್ತಿದ್ದರೂ 1200 ಮನೆ ಕಟ್ಟುವ ಗುರಿ ತಲುಪಿಲ್ಲ. 1100 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಮನೆ ಕಟ್ಟಿದ ಸ್ಥಳದಲ್ಲಿ ಜಾಲಿ ಬೇಲಿ ಬೆಳೆದಿದ್ದು, ವಿದ್ಯುತ್‌ ಕಂಬಗಳು ನೆಲಕ್ಕೆ ಬಿದ್ದಿದ್ದು, ರಸ್ತೆಗಳು, ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.

ಆದರೂ ಜನವರಿ 20ರಂದು ನಡೆದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ನವಗ್ರಾಮದಲ್ಲಿ ವಾಸಿಸಲು 100 ಕುಟುಂಬಗಳು ಮುಂದೆ ಬಂದ ಹಿನ್ನೆಲೆಯಲ್ಲಿ 100 ಜನರಿಗೆ ಮನೆಗಳ ಹಕ್ಕುಪತ್ರ ನೀಡಲಾಗಿದೆ. ಆದರೆ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಹಂಚಿಕೆಯಾದ ಮನೆಗಳನ್ನು ಹಸ್ತಾಂತರ ಮಾಡಲು ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ ನಡೆಯಬೇಕಾಗಿದೆ.

ಹಕ್ಕುಪತ್ರ ನೀಡಿ ಐದು ತಿಂಗಳಾದರೂ ಕಂದಾಯ ಇಲಾಖೆ ಸರ್ವೇ ಕಾರ್ಯ ನಡೆಸಲು ಮುಂದಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next