ಬಳ್ಳಾರಿ: ರಾಜ್ಯ ಸರ್ಕಾರ ಕೋವಿಡ್ ಲಾಕ್ ಡೌನ್ ತೆರವುಗೊಳಿಸಿ ಅನ್‌ಲಾಕ್ ಜಾರಿಗೊಳಿಸಿ ದೇವಸ್ಥಾನಗಳಿಗೂ ತೆರೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನಗರದ ಆರಾಧ್ಯ ದೇವತೆ ಕನಕದುರ್ಗಮ್ಮ ದೇವಸ್ಥಾನದಲ್ಲಿ ಭಕ್ತರು ದರ್ಶನ ಪಡೆದು ಕೃತಾರ್ಥರಾದರು.
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡುವರೆ ತಿಂಗಳಿಂದ ಬಳ್ಳಾರಿ, ವಿಜಯನಗರ ಸೇರಿ ರಾಜ್ಯದ ಎಲ್ಲ ದೇವಸ್ಥಾನಗಳನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರ ದರ್ಶನಕ್ಕೂ ನಿಷೇಧ ವಿಧಿಸಿತ್ತು.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದು ಸಾವು ನೋವುಗಳ ಸಂಖ್ಯೆಯೂ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಲಾಕ್‌ಡೌನ್‌ನನ್ನು ನಿಧಾನವಾಗಿ ಸಡಿಲಿಕೆ ಮಾಡಿದ್ದು, ಅನ್‌ಲಾಕ್ 3 ಜಾರಿಗೆ ತಂದು ದೇವಸ್ಥಾನಗಳಿಗೂ ತೆರೆಯಲು ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಬಳ್ಳಾರಿ ಕನಕುದುರ್ಗಮ್ಮ, ಕೋಟೆ ಮಲ್ಲೇಶ್ವರ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಗಳಲ್ಲಿ ಸ್ವತ್ಛಗೊಳಿಸಿ, ಸ್ಯಾನಿಟೈಸರ್ ಸಿಂಪಡಿಸಿ, ಕ್ಯೂಲೈನ್ ನಿರ್ಮಿಸಿ, ಬ್ಯಾರಿಕೇಡ್ ಅಳವಡಿಸುವ ಮೂಲಕ ಸೋಮವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸೋಮವಾರ ಬೆಳಗಿನ ಜಾವದಿಂದಲೇ ಭಕ್ತರು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯಲು ಆರಂಭಿಸಿದರು.
ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ಮಾಸ್ಕ್ ಕಡ್ಡಾಯವಾಗಿದ್ದು, ಸ್ಯಾನಿಟೈಸರ್ ಅನ್ನು ಸಹ ಬಳಸಿರಬೇಕು. ಸಾಮಾಜಿಕ ಅಂತರದೊಂದಿಗೆ ದೇವಸ್ಥಾನದೊಳಕ್ಕೆ ಪ್ರವೇಶಿಸಿ ದೇವರ ದರ್ಶನ ಪಡೆದ ದೃಶ್ಯ ಸಾಮಾನ್ಯವಾಗಿ ಕಂಡುಬಂತು.
ದೇವಾಲಯಗಳಲ್ಲಿ ಭಕ್ತರಿಗೆ ದರ್ಶನ ಮತ್ತು ಮಂಗಳಾರತಿಗೆ ಮಾತ್ರ ಅವಕಾಶವಿದ್ದು, ಯಾವುದೇ ತೀರ್ಥ ನೀಡುವಂತಿಲ್ಲ. ಭಕ್ತರು ಹೂವು, ಹಣ್ಣು, ಕಾಯಿಗಳನ್ನು ದೇವರಿಗೆ ಅರ್ಪಿಸುವಂತಿಲ್ಲ. ಪ್ರಸಾದ ವಿತರಣೆ ಮಾಡುವಂತಿಲ್ಲ ಈ ಎಲ್ಲ ನಿಷೇಧಗಳ ನಡುವೆ ಭಕ್ತರು ದರ್ಶನ ಪಡೆದರು.