ಸಿರುಗುಪ್ಪ: ರಾಜ್ಯದಲ್ಲಿ ಮುಂಗಾರು ತೀವ್ರಗೊಂಡಿದ್ದು, ಜಲಾಶಯಗಳ ನೀರಿನ ಸಂಗ್ರಹ ಹೆಚ್ಚುತ್ತಿದೆ. ವಿಪತ್ತು ಹಾನಿ ನಿರ್ವಹಣೆಗೆ ತಾಲೂಕು ಆಡಳಿತವನ್ನು ಸಜ್ಜುಗೊಳಿಸಲಾಗಿದೆ. ತಾಲೂಕಿನಲ್ಲಿ ತುಂಗಭದ್ರಾ ನದಿಯಿಂದ ಉಂಟಾಗಬಹುದಾದ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಆಯುಕ್ತ ರಮೇಶ ಕೋನಾರೆಡ್ಡಿ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಪ್ರವಾಹ ಮುಂಜಾಗ್ರತ ಕ್ರಮಗಳ ಕುರಿತು ಬುಧವಾರ ನಡೆಸಿದ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿ, ಸಿರುಗುಪ್ಪ ತಾಲೂಕಿನಲ್ಲಿ ಪ್ರವಾಹದಿಂದ 16 ಗ್ರಾಮಗಳು ಬಾಧಿತಗೊಳ್ಳುತ್ತಿದ್ದು, ಅವುಗಳ ಮೇಲೆ ನಿಗಾವಹಿಸಬೇಕು. ಪ್ರವಾಹ ಉಂಟಾದರೆ ಜನರ ಸ್ಥಳಾಂತರಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಅಗತ್ಯ ಬಿದ್ದರೆ ಕಾಳಜಿ ಕೇಂದ್ರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಪ್ರವಾಹದಿಂದ ಬಾಧಿ ತವಾಗುವ 16 ಗ್ರಾಮಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ವಿವಿಧ ಇಲಾಖೆಗಳ 16 ಅಧಿ ಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಪ್ರವಾಹ ಬರುವ ಮುನ್ನವೇ ಅಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಡುವ ವ್ಯವಸ್ಥೆಯನ್ನು ನೋಡಲ್ ಅಧಿ ಕಾರಿಗಳು ಪರಿಶೀಲಿಸಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಲಿದ್ದಾರೆ. ಬಾಗೇವಾಡಿ ಗ್ರಾಮದ ಹತ್ತಿರ ತುಂಗಭದ್ರಾ ನದಿಯಲ್ಲಿರುವ ನಡುಗಡ್ಡೆಯಲ್ಲಿ ಯಾರು ಇರದಂತೆ ನೋಡಿಕೊಳ್ಳಲು ನಮ್ಮ ಕಂದಾಯ ಇಲಾಖೆ ಸಿಬ್ಬಂದಿಯನ್ನು ನೇಮಕಮಾಡಲಾಗಿದೆ. ಪ್ರತಿನಿತ್ಯವೂ ನಡುಗಡ್ಡೆಗೆ ತೆರಳಿ ಪರಿಶೀಲನೆ ಮಾಡಲಾಗುವುದು.
ನಡುಗಡ್ಡೆಯಲ್ಲಿ ಯಾರು ಇರದಂತೆ ಸೂಚನೆ ನೀಡಲಾಗಿದೆ. ಆದರೆ ಸರ್ಕಾರದ ಸೂಚನೆಯನ್ನು ಪಾಲಿಸದೆ ನಡುಗಡ್ಡೆಗೆ ಹೋದರೆ ಅಂತವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುವುದು. ಪ್ರವಾಹ ಉಂಟಾದಾಗ ಜನರನ್ನು ರಕ್ಷಿಸಲು ನುರಿತ ಈಜು ಪಟುಗಳ ಪಟ್ಟಿಯನ್ನು ಮತ್ತು ಅವರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಒಂದು ಬೋಟ್‌ನ್ನು ಇಲ್ಲಿಯೇ ಇಡಲಾಗುತ್ತದೆ. ಬೋಟ್ ಸುವ್ಯವಸ್ಥೆಯಲ್ಲಿದೆಯೋ ಎನ್ನುವುದರ ಬಗ್ಗೆ ಬಳ್ಳಾರಿಯ ರಾಜ್‌ಕುಮಾರ್ ಪಾರ್ಕ್‌ನಲ್ಲಿರುವ ಕೊಳದಲ್ಲಿ ಬಿಟ್ಟು ಪರೀಕ್ಷೆ ಮಾಡಲಾಗುತ್ತದೆ.
ಉತ್ತಮವಾದ ಬೋಟೊಂದನ್ನು ಇಲ್ಲಿ ಇಡಲಾಗುತ್ತದೆ ಎಂದು ಹೇಳಿದರು. ತಹಶೀಲ್ದಾರ್ ಎಸ್.ಬಿ. ಕೂಡಲಗಿ ಮಾತನಾಡಿ, ನೋಡಲ್ ಅ ಧಿಕಾರಿಗಳು ತಮಗೆ ವಹಿಸಿದ ಕಾರ್ಯವನ್ನು ಮಾಡಬೇಕು, ವಿನಾ ಕಾರಣಗಳನ್ನು ಹೇಳಬಾರದೆಂದು ಹೇಳಿದರು. ಸಹಾಯಕ ಕೃಷಿ ನಿರ್ದೇಶಕ ನಜೀರ ಅಹಮ್ಮದ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರವೀಂದ್ರನಾಯ್ಕ, ಬಿಸಿಎಂ ಅಧಿ ಕಾರಿ ಗಾದಿಲಿಂಗಪ್ಪ, ಸಮಾಜ ಕಲ್ಯಾಣಾಧಿಕಾರಿ ಎಂ.ಸಿದ್ದಯ್ಯ, ಪೌರಾಯುಕ್ತ ಪ್ರೇಮ್‌ಚಾರ್ಲ್ಸ್, ಸಿಡಿಪಿಒ ಜಲಾಲಪ್ಪ ಇನ್ನಿತರರು ಇದ್ದರು.