ಬಳ್ಳಾರಿ: ಬಿಸಿಯೂಟ ನೌಕರರಿಗೂ ಕೋವಿಡ್ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಶುಕ್ರವಾರ ಆನ್‌ಲೈನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ನೇತೃತ್ವವಹಿಸಿದ್ದ ಸಂಘದ ಎಸ್.ಜಿ. ನಾಗರತ್ನ ಮಾತನಾಡಿ, ರಾಜ್ಯ ಸರ್ಕಾರ ವಿವಿಧ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ಯಾಕೇಜ್ ಘೋಷಿಸಿದೆ.
ಈ ಪ್ಯಾಕೇಜ್‌ನ್ನು ಸ್ಕೀಂ ನೌಕರರಾದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಸ್ತರಿಸಿರುವುದನ್ನು ನಮ್ಮ ಸಂಘಟನೆಯು ಸ್ವಾಗತಿಸುತ್ತದೆ. ಆದರೆ ರಾಜ್ಯಾದ್ಯಂತ ಅತ್ಯಂತ ಕನಿಷ್ಠ ವೇತನದಲ್ಲಿ ದುಡಿಯುತ್ತಿರುವ ಬಿಸಿಯೂಟ ನೌಕರರನ್ನು ಕೈಬಿಟ್ಟಿರುವುದು ದುರದೃಷ್ಟಕರ ಸಂಗತಿ.
ಮಹಮ್ಮಾರಿ ಕೊರೊನಾ ಸೋಂಕಿನ ಪಿಡುಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ವರ್ಗ ಜೀವ ಮತ್ತು ಜೀವನೋಪಾಯವನ್ನು ಕಳೆದುಕೊಂಡಿದೆ. ಅದೇ ರೀತಿ ರಾಜ್ಯದಲ್ಲಿ ಅತ್ಯಂತ ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರು ಸಹ ಲಾಕ್‌ಡೌನ್ ಪರಿಣಾಮ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಯಾವುದೇ ಉಪ ಕಸುಬು ಇಲ್ಲದೇ ಬಿಸಿಯೂಟ ನೌಕರರ ಕುಟುಂಬ ತತ್ತರಿಸಿ ಹೋಗಿದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಬಿಸಿಯೂಟ ನೌಕರರಿಗೂ ಸಂಕಷ್ಟದ ಪ್ಯಾಕೇಜ್‌ನ್ನು ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆಶಾ, ಅಂಗನವಾಡಿ ಸ್ಕೀಮ್ ನೌಕರರಂತೆ ಬಿಸಿಯೂಟ ನೌಕರರಿಗೂ ಪ್ಯಾಕೇಜ್ ನೀಡಬೇಕು.
ಯೋಗ್ಯ ವೇತನ ನೀಡಬೇಕು. ವಾರ್ಷಿಕ 12 ತಿಂಗಳ ವೇತನ ಪಾವತಿಸಬೇಕು. ಶಾಲೆ ಪ್ರಾರಂಭಕ್ಕೂ ಮುನ್ನ ನೌಕರರಿಕೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಸೇವಾ ಭದ್ರತೆ, ಆರೋಗ್ಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿ ಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಎ. ದೇವದಾಸ್ ಸೇರಿ ಬಿಸಿಯೂಟ ನೌಕರರು, ಹಲವರು ಇದ್ದರು.