ಹೊಸಪೇಟೆ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕೊರೊನಾ ಲಾಕ್‌ಡೌನ್ ಸಂಕಷ್ಟದಲ್ಲಿ ರೈತರು ಅನುಭವಿಸಿರುವ ನಷ್ಟ ತಿಳಿಯಲು ಅಂದಾಜು ಸಮಿತಿ ನೇಮಿಸಬೇಕು. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಕೊರೊನಾ ಸೋಂಕಿತರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಇವರ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಟೆಸ್ಟ್ ವ್ಯಾಪಕಗೊಳಿಸಬೇಕು. ಡೀಸೇಲ್, ಪೆಟ್ರೋಲ್, ವಿದ್ಯುತ್ ದರ ಇಳಿಸಬೇಕು ಎಂದು ಆಗ್ರಹಿಸಿದರು. ಕೃಷಿ ಪರಿಕರಗಳ ಮೇಲೆ ವಿಧಿಸುವ ಜಿಎಸ್‌ಟಿ ಹಾಗೂ ಎಸ್‌ಜಿಎಸ್‌ಡಿ ಸಂಪೂರ್ಣ ಕೈಬಿಡಬೇಕು. ಉಚಿತವಾಗಿ ಬಿತ್ತನೆ ಬೀಜ ಪೂರೈಸಬೇಕು, ರಸಗೊಬ್ಬರ ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲಾ ಕೃಷಿ ಚಟುವಟಿಕೆಗಳಿಗೂ ವಿಸ್ತರಿಸಬೇಕು.
ರೈತ ಕುಟುಂಬದ ಇಬ್ಬರನ್ನು ಈ ವ್ಯಾಪ್ತಿಯೊಳಗೆ ಸೇರಿಸಬೇಕು. ರೈತ ಕುಟುಂಬಗಳಿಗೆ ಕನಿಷ್ಠ ಹತ್ತು ಸಾವಿರ ರೂ. ಪ್ಯಾಕೇಜ್ ಘೋಷಿಸಬೇಕು. ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಪಡಿತರ ನೀಡಬೇಕು. ಖರೀದಿ ಕೇಂದ್ರದ ಮೂಲಕ ಖರೀದಿಸಿದ ಭತ್ತ ಮತ್ತು ರಾಗಿ ಬಾಕಿಯನ್ನು ಕೂಡಲೇ ಪಾವತಿಸಬೇಕು. ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿಯನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಮತ್ತು ಬರ ಹಾಗೂ ಅತಿವೃಷ್ಠಿ ಪರಿಹಾರ ಬಾಕಿಯನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಗಂಟಿ ಸೋಮಶೇಖರ್ ಹಾಗೂ ದಮ್ಮೂರು ಶೇಖರ್ ಇನ್ನಿತರರಿದ್ದರು.