ಹೂವಿನಹಡಗಲಿ: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಇಡೀ ಮನುಕುಲವನ್ನೇ ನಾಶ ಮಾಡುತ್ತಿರುವ ಇಂತಹ ಕಷ್ಟದ ಸಂದರ್ಭದಲ್ಲಿ, ರೈತರಿಗೆ ಹಾಗೂ ಸಾಮಾನ್ಯರಿಗೆ ಅಗತ್ಯವಾಗಿರುವ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿ ರೈತರಿಗೆ ಗಾಯದ ಮೇಲೆ ಬರೆ ಎಳೆಯುವಂತಹ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡಿದೆ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಎಂದು ಆರೋಪಿಸಿದರು.
ತಾಲೂಕಿನ ಸೋಗಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕೇಂದ್ರದಲ್ಲಿ ಬೀಜ ಖರೀದಿ ಕೇಂದ್ರ ಉದ್ಘಾಟಿಸಿ, ರೈತರಿಗೆ ಬೀಜ ವಿತರಣೆ ಮಾಡಿ ಅವರು ಮಾತನಾಡಿದರು. ಕಳೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಹತೋಟಿಯಲ್ಲಿ ಇಟ್ಟುಕೊಂಡು ಚುನಾವಣೆ ಮುಗಿದ ತಕ್ಷಣ ದರ ಏರಿಕೆ ಮಾಡಲಾಗಿದೆ. ಆಡಳಿತ ನಡೆಸುವವರಿಗೆ ದೇಶದ, ರಾಜ್ಯದ ಜನರ ಮೇಲೆ ಯಾವುದೇ ಕಾಳಜಿ ಇಲ್ಲದಿರುವುದು ತೋರಿಸುತ್ತದೆ ಎಂದು ದೂರಿದರು.
ನೆರೆ ರಾಷ್ಟ್ರಗಳಲ್ಲಿರುವ ದರವನ್ನು ನಿಗದಿ ಮಾಡಲು ಇವರಿಗೆ ಏಕೆ ಆಗುತ್ತಿಲ್ಲ. ಯಾವುದೇ ರೀತಿಯ ಜನಪರ ಕಾಳಜಿ ಇಚ್ಛಾಶಕ್ತಿ ಕಂಡು ಬರುತ್ತಿಲ್ಲ. ಇನ್ನೂ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಮೇಲೆ ಹೇರಲಾಗುತ್ತಿರುವ ಸೆಸ್ ಅನ್ನು ವಾಪಾಸ್ಸು ತೆಗೆದುಕೊಂಡರೆ ಪೆಟ್ರೋಲ್, ಡಿಸೆಲ್ ದರ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸೆಸ್ ಕಡಿತವನ್ನಾದರೂ ಸರ್ಕಾರ ಈ ಕೂಡಲೇ ಮಾಡಬೇಕು. ತೈಲ ಕಂಪನಿಗಳು ಸರ್ಕಾರದ ಹಿಡಿತದಲ್ಲಿಲ್ಲ. ಬದಲಾಗಿ ಖಾಸಗಿ ಹಿಡಿತದಲ್ಲಿವೇ ಎನ್ನುವ ಅವರದೇ ಪಕ್ಷದ ಮುಖಂಡ ರವಿಕುಮಾರ್ ಅವರ ಹೇಳಿಕೆ ಬಾಲಿಶವಾಗಿದೆ ಎಂದರು.
ಸಮರ್ಪಕ ಬೀಜ ಗೊಬ್ಬರ ವಿತರಣೆ: ಆಡಳಿತಾವಧಿಯ ಸುಮಾರು 8 ವರ್ಷಗಳಲ್ಲಿ ರೈತರಿಗೆ ಬಿತ್ತನೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೀಜ, ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಈ ಬಾರಿಯೂ ಸಹ ರೈತರಿಗೆ ಬಿತ್ತನೆಗೆ ಸಮರ್ಪಕ ಬೀಜ, ಗೊಬ್ಬರ ಪೂರೈಸಲಾಗುವುದು ಎಂದರು.
ತಾಲೂಕಿನಲ್ಲಿ ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು ತಾಲೂಕಿನಾದ್ಯಂತ ರೋಹಿಣಿ ಮಳೆ ಉತ್ತಮವಾಗಿದೆ. ಆ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಹೈಬ್ರಿಡ್ ಜೋಳ, ಶೇಂಗಾ, ಮೆಕ್ಕೆಜೋಳ, ತೊಗರಿ ಭತ್ತ ಮುಂತಾದ ಬೀಜಗಳ ದಾಸ್ತಾನು ಮಾಡಲಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಬೇಕಾದ ಬೀಜ ಗೊಬ್ಬರ ವಿತರಣೆ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ರೈತರಿಗೆ ಬೀಜ ಗೊಬ್ಬರ ಖರೀದಿ ಮಾಡಿಕೊಳ್ಳಲು ಅನುಕೂಲವಾಗಲು, ತಾಲೂಕಿನ ಹಡಗಲಿ, ಹಿರೇಹಡಗಲಿ, ಹೊಳಲು, ಇಟಗಿ, ಹಿರೇಮಲ್ಲನಕೇರಿ, ಸೋಗಿ ಒಳಗೊಂಡಂತೆ ಒಟ್ಟು 7 ಕಡೆಯಲ್ಲಿ ಬೀಜ ಗೊಬ್ಬರ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ಮುಖಂಡ ಐಗೊಳ್ ಚಿದಾನಂದ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೋಗಿ ಅಧ್ಯಕ್ಷ ದೇವೀರಪ್ಪ ಕುರಿ, ತಾಲೂಕು ಕೃಷಿ ಸಹಾಯಕ ನಿರ್ದೆಶಕ ಮಹ್ಮದ್ ಅಶ್ರಪ್, ನಾರಾಯಣಸ್ವಾಮಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಜರಿದ್ದರು.