ಎಂ. ಸೋಮೇಶ್ ಉಪ್ಪಾರ
ಮರಿಯಮ್ಮನಹಳ್ಳಿ: ಇಲ್ಲಿನ ವಿದ್ಯುತ್ ಕಂಬಗಳನ್ನು ನೋಡಿದರೆ ಭಯವಾಗುತ್ತದೆ. ಈಗ ಮಳೆಗಾಲ ಬಂದಿದೆ. ಈ ಮಳೆ ಗಾಳಿಗೆ ಈ ವಿದ್ಯುತ್ ಕಂಬಗಳು ತಂತಿಗೆ ನೇತಾಡುವಂತಾಗಿವೆ. ಈ ಕಂಬಗಳು ಅಸ್ತಿಪಂಜರದಂತೆ ನೇತಾಡುತ್ತಿವೆ. ಆದರೂ ಈ ಭಾಗದ ಲೈನ್‌ಮನ್ ಆಗಲಿ, ಜೆಸ್ಕಾಂ ಉಪವಿಭಾಗಾಧಿಕಾರಿಗಳಾಗಲಿ ಕಂಬಗಳನ್ನು ಬದಲಾಯಿಸಲು ಮೀನಮೇಷ ಎಣಿಸುತ್ತ ಕೂತಿದ್ದಾರೆ.
ಹೌದು. ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಂದಿ ಬಂಡಿ ಗ್ರಾಮ ವ್ಯಾಪ್ತಿಗೆ ಬರುವ ಈ ವಿದ್ಯುತ್ ಕಂಬಗಳು ಜೀವ ಬಲಿಗಾಗಿ ಕಾದು ನಿಂತಂತೆ ಕಾಣುತ್ತಿವೆ. ಯಾವ ಸಂದರ್ಭದಲ್ಲಾದರೂ ಈ ಕಂಬಗಳು ನೆಲಕಚ್ಚಬಹುದಾಗಿದೆ. ದನಗಾಹಿಗಳು, ಕುರಿಗಾಹಿಗಳು, ಕೃಷಿ ಕೂಲಿ ಕಾಮಿಕರು ಓಡಾಡುತ್ತಿದ್ದು ಯಾವ ಸಂದರ್ಭದಲ್ಲಾದರೂ ಯಾವುದೇ ಅವಘಡಗಳು ಸಂಭವಿಸಬಹುದಾಗಿದೆ.
ದನಕರುಗಳು ಮೇವನ್ನು ಮೇಯುತ್ತ ಕಂಬಗಳ ಹತ್ತಿರ ಹೋದರೆ ಶಾರ್ಟ್ ಸರ್ಕ್ನೂಟ್ ಆದರೆ ಜೀವ ಕಳೆದುಕೊಳ್ಳ ಬೇಕಾಗುತ್ತದೆ. ದೂರದಲ್ಲಿ ಹೊಲಗಳಲ್ಲಿ ರೈತರು ಕೆಲಸ ಮಾಡುವ ವೇಳೆ ಕಂಬಗಳು ಬಿದ್ದರೆ ತಂತಿಗಳು ನೆಲಕ್ಕೆ ಬೀಳುವ ಸಾಧ್ಯತೆಗಳು ಇವೆ. ಕಳೆದ ಎರಡು ವರ್ಷಗಳ ಹಿಂದೆ ವ್ಯಾಸನಕೆರೆ ಗ್ರಾಮದ ಬಳಿ ವಿದ್ಯುತ್ ತಂತಿ ಹರಿದು ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಜೆಸ್ಕಾಂ ಅಧಿಕಾರಿಗಳಿಗೆ ಗೊತ್ತಿದ್ದು ಇಂಥ ಶಿಥಿಲಗೊಂಡ ಕಂಬಗಳನ್ನು ಬದಲಾಯಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ದೂರು ನೀಡಿ ಎರಡು ವರ್ಷಗಳೇ ಕಳೆದಿವೆ.
ಈಗಿನ ಅಧಿ ಕಾರಿಗಳು ಪದೆ ಪದೇ ಹೇಳಿದರೂ ಲಾಕ್‌ಡೌನ್ ನೆಪವೊಡ್ಡಿ ವಿಳಂಬ ಮಾಡುತ್ತಿದ್ದಾರೆ ಎನ್ನುತ್ತಾರೆ ರೈತ ಕೆ.ಎಚ್. ಸುಬ್ರಮಣಿ.