Advertisement

ಘನತ್ಯಾಜ್ಯ ಘಟಕದಲ್ಲಿ ಆರದ ಬೆಂಕಿ; ತಪ್ಪದ ಸಮಸ್ಯೆ

10:43 PM Jun 04, 2021 | Team Udayavani |

ಸಿರುಗುಪ್ಪ: ನಗರದ ಹೊರ ವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಸಂಗ್ರಹ ಘಟಕದಲ್ಲಿ ಕಸಕ್ಕೆ ಬೆಂಕಿಬಿದ್ದು ಎರಡು ತಿಂಗಳಾದರೂ ಬೆಂಕಿ ನಂದಿಸಲು ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಈ ಘಟಕದ ಸುತ್ತಮುತ್ತಲಿನ ನಿವಾಸಿಗಳು ವಿವಿಧ ಸಮಸ್ಯೆ ಎದುರಿಸುವಂತಾಗಿದೆ.

Advertisement

ನಗರಸಭೆ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಮುಂದಾಗದೇ ಇರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ಘನತ್ಯಾಜ್ಯ ಘಟದಲ್ಲಿ ಹತ್ತಿರುವ ಬೆಂಕಿಯಿಂದ ಬರುತ್ತಿರುವ ಕೆಟ್ಟವಾಸನೆ ಅನುಭವಿಸುವಂತಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಈ ಘಟಕದ ಸುತ್ತಮುತ್ತಲಿನ ಜನಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಘಟಕದಲ್ಲಿರುವ ಕಸವನ್ನು ನಿರ್ವಹಣೆ ಮಾಡಿ ಸುಡಬೇಕು. ಆದರೆ ನಗರಸಭೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವನ್ನು ಎಲ್ಲೆಂದರಲ್ಲಿ ಹರಡಿದ್ದು, ಪ್ಲಾಸ್ಟಿಕ್‌ ಮತ್ತು ಹಸಿ ಕಸ, ಒಣಕಸ ವಿಂಗಡಿಸುವ ಕಾರ್ಯ ನಡೆದಿಲ್ಲ, ಇದರಿಂದಾಗಿ ಕಸದರಾಶಿಯಲ್ಲಿ ಉಷ್ಣಾಂಶ ಹೆಚ್ಚಾಗಿ ಬೆಂಕಿಯು 2 ತಿಂಗಳ ಹಿಂದೆ ಹೊತ್ತಿಕೊಂಡಿದ್ದು, ಅದನ್ನು ಹೊತ್ತಿಕೊಂಡ ದಿನವೇ ನಂದಿಸುವ ಕಾರ್ಯವನ್ನು ನಗರಸಭೆ ಸಿಬ್ಬಂದಿ ಮಾಡಬೇಕಾಗಿತ್ತು.

ಆದರೆ ಅಧಿಕಾರಿಗಳ ನಿರ್ಲಕ್ಷ ದಿಂದಾಗಿ ಸುಮಾರು 2 ಎಕರೆ ಪ್ರದೇಶದಲ್ಲಿ ಹರಡಿರುವ ಕಸದ ರಾಶಿಯು 2 ತಿಂಗಳಿಂದ ಹತ್ತಿ ಉರಿಯುತ್ತಲೇ ಇರುವುದರಿಂದ ಕೆಟ್ಟವಾಸನೆ ಸಾರ್ವಜನಿಕರನ್ನು ಕಂಗೆಡಿಸಿದೆ. ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ಬಿದ್ದ 8 ದಿನಗಳ ನಂತರ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಘಟಕಕ್ಕೆ ತೆರಳಿ ಕಸದ ರಾಶಿಗೆ ಹತ್ತಿದ ಬೆಂಕಿಗೆ ಒಂದೆರಡು ದಿನ ಮಾತ್ರ ನೀರು ಬಿಟ್ಟು ನಂತರ ಬೆಂಕಿ ನಂದಿಸುವ ಕಾರ್ಯ ಕೈಬಿಟ್ಟರು.

ಇದರಿಂದಾಗಿ ಸಂಪೂರ್ಣವಾಗಿ ಬೆಂಕಿ ಆರದೆ ಇರುವುದರಿಂದ ಘನತ್ಯಾಜ್ಯ ವಿಲೇವಾರಿ ಘಟಕದ ಸುಮಾರು 5 ಎಕರೆಯಲ್ಲಿ ಸಂಗ್ರಹವಾಗಿರುವ ಕಸವು ಸುಟ್ಟುಹೋಗಿದೆ. ಸದ್ಯ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸ್ಥಳೀಯ ನಿವಾಸಿಗಳು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಬೆಂಕಿ ನಂದಿಸುವ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಸ್ಥಳೀಯ ಅಧಿಕಾರಿಗಳಿಗೆ ಬೆಂಕಿ ನಂದಿಸುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.

Advertisement

“ಕಾಲೇಜಿನ ಸಮೀಪವಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸಕ್ಕೆ ಬೆಂಕಿ ಹತ್ತಿರುವುದರಿಂದ ಪ್ರತಿನಿತ್ಯವೂ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ತೊಂದರೆಯಾಗುತ್ತಿದ್ದು, ಕಲ್ಮಶಗಾಳಿಯಿಂದ ರಕ್ಷಿಸಿಕೊಳ್ಳಲು ಮೂಗು ಬಾಯಿ ಮುಚ್ಚಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಬಸವರಾಜ ತಿಳಿಸಿದ್ದಾರೆ.

ಶಾಲಾ ಕಾಲೇಜು, ಸಾರ್ವಜನಿಕ ಕಟ್ಟಡಗಳು, ಜನವಸತಿ ಪ್ರದೇಶಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳದೇ ಯಾವುದೇ ನಿಯಮ ಪಾಲಿಸದೆ, ಘನತ್ಯಾಜ್ಯ ಘಟಕ ನಿರ್ವಹಿಸುತ್ತಿರುವುದರಿಂದ ಸುತ್ತಮುತ್ತಲಿನ ಜನರು ನಿತ್ಯವೂ ನಕರ ಅನುಭವಿಸುವಂತಾಗಿದೆ. ಸಮರ್ಪಕವಾಗಿ ಬೆಂಕಿ ನಂದಿಸುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಜಂಬಣ್ಣ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next