ಸಿರುಗುಪ್ಪ: ವೈದ್ಯರ ಸತತ ಪರಿಶ್ರಮದಿಂದ ಮತ್ತು ಸಾರ್ವಜನಿಕರ ಸಹಕಾರದಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ನೆಮ್ಮದಿ ಸಂಗತಿಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವೇ ಕಾರಣವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ತಿಳಿಸಿದರು.
ನಗರದ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸೇವಾ ಹಿ ಸಪ್ತಾಹ ಅಂಗವಾಗಿ ಕೊರೊನಾ ಸೋಂಕಿತರಿಗೆ ಹಣ್ಣು, ಬ್ರೆಡ್ ಮತ್ತು ಆಹಾರದ ಪೊಟ್ಟಣಗಳನ್ನು ವಿತರಿಸಿ ಮಾತನಾಡಿ, ದೇಶದಲ್ಲಿ ಕೊರೊನಾ ಸೋಂಕು ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿದ ಕಾರ್ಯ ಶ್ಲಾಘನೀಯವಾಗಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ 7ವರ್ಷ ಕಾರ್ಯನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ದೇಶದಾದ್ಯಂತ ಬಿಜೆಪಿ ವತಿಯಿಂದ ಸೇವಾ ಹಿ ಕಾರ್ಯಕ್ರಮದಡಿ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಈ 7 ವರ್ಷಗಳಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಕೇಂದ್ರ ಸರ್ಕಾರವು ಪಾರದರ್ಶಕ ಆಡಳಿತವನ್ನು ನೀಡುತ್ತಿದ್ದು, ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕೊರೊನಾ ತಡೆಯಲು ಪ್ರಧಾನಿಯವರು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ದೇಶದಲ್ಲಿ ಕೊರೊನಾ ಹತೋಟಿಗೆ ಬರುತ್ತಿದ್ದು, ಅವರು ಕೈಗೊಂಡ ಕಾರ್ಯಗಳ ಬಗ್ಗೆ ದೇಶವಿದೇಶಗಳ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇಂಥ ಪ್ರಧಾನಿಗಳು ಆಡಳಿತ ನಡೆಸುತ್ತಿರುವುದರಿಂದ ಅನೇಕ ಜನಪರ ಯೋಜನೆಗಳು ಜಾರಿಯಾಗಿವೆ ಎಂದು ಹೇಳಿದರು. ಶಾಸಕ ಎಂ.ಎಸ್. ಸೋಮಲಿಂಗಪ್ಪ, ತಹಶೀಲ್ದಾರ್ ಎಸ್.ಬಿ. ಕೂಡಲಗಿ, ಇ.ಒ. ಶಿವಪ್ಪ ಸುಬೇದಾರ್, ಸಿಪಿಐ ಟಿ.ಆರ್. ಪವಾರ್, ಡಾ| ದೇವರಾಜ್, ಮುಖಂಡರಾದ ಪೊಂಪನಗೌಡ, ಮಹಾದೇವ, ಮೇಕೆಲಿ ವೀರೇಶ ಇನ್ನಿತರರು ಇದ್ದರು.