ಬಳ್ಳಾರಿ: ಬಹುಭಾಷಾ ಚಿತ್ರನಟ ಸೋನುಸೂದ್ ಅವರ ಸೂದ್ ಚಾರಿಟಿ ಫೌಂಡೇಷನ್ ವತಿಯಿಂದ ನಗರದ ರೈಲ್ವೆ ನಿಲ್ದಾಣದಲ್ಲಿ ರಾಜ್ಯ ಪೊಲೀಸರ ಸಹಯೋಗದಲ್ಲಿ ಕ್ಷಿಪ್ರ ಆಕ್ಸಿಜನ್ ಕೇಂದ್ರ (ರ್ಯಾಪಿಡ್ ಆಕ್ಸೀಜನ್ ಸೆಂಟರ್)ವನ್ನು ಮಂಗಳವಾರ ಆರಂಭಿಸಲಾಯಿತು.
ಫೌಂಡೇಷನ್‌ನ ಅಮಿತ್ ಪುರೋಹಿತ್ ಅವರು, ರೈಲು ನಿಲ್ದಾಣದ ಪೊಲೀಸ್ ಸಿಬ್ಬಂದಿಗೆ ಆಕ್ಸಿಜನ್ ಸಿಲಿಂಡರ್ ಬಳಕೆ ಕುರಿತು ತರಬೇತಿ ನೀಡುವ ಮೂಲಕ ಕೇಂದ್ರಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಹಾಸನ, ಕೋಲಾರ ಜಿಲ್ಲೆಗಳ ರೈಲು ನಿಲ್ದಾಣದಲ್ಲಿ ಸೂದ್ ಚಾರಿಟಿ ಫೌಂಡೇಷನ್ ವತಿಯಿಂದ ಕ್ಷಿಪ್ರ ಆಕ್ಸಿಜನ್ ಕೇಂದ್ರವನ್ನು ಆರಂಭಿಸಲಾಗಿದ್ದು, ಇದೀಗ ಬಳ್ಳಾರಿಯಲ್ಲೂ ಚಾಲನೆ ನೀಡಲಾಯಿತು.
ಕೇಂದ್ರದಲ್ಲಿ ಸದಾ 20 ಆಕ್ಸಿಜನ್ ಸಿಲಿಂಡರ್‌ಗಳು ಸಿದ್ಧವಿರಲಿದ್ದು, ಸಾರ್ವಜನಿಕರು ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಪಡೆದುಕೊಂಡು ಪುನಃ ವಾಪಸ್ ನೀಡಬೇಕು ಎಂದವರು ತಿಳಿಸಿದರು. ಕ್ಷಿಪ್ರ ಆಕ್ಸಿಜನ್ ಕೇಂದ್ರವಿರುವ ರೈಲು ನಿಲ್ದಾಣದಿಂದ 80ರಿಂದ 100 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಹಳ್ಳಿ, ನಗರ ಪ್ರದೇಶದಲ್ಲಿನ ಜನರು ಉಚಿತವಾಗಿ ಆಕ್ಸಿಜನ್ ಪಡೆಯಬಹುದಾಗಿದೆ.
ಆಕ್ಸಿಜನ್ ಅವಶ್ಯಕತೆ ಇರುವವರು ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಅಗತ್ಯವಿರುವವರು 7069999961 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದವರು ವಿವರಿಸಿದರು. ಬಳ್ಳಾರಿಯ ರೈಲ್ವೆ ನಿಲ್ದಾಣದ ಕ್ಷಿಪ್ರ ಆಕ್ಸಿಜನ್ ಕೇಂದ್ರದಲ್ಲಿ 10 ಸಾವಿರ ಲೀಟರ್ ಮತ್ತು 7 ಸಾವಿರ ಲೀಟರ್ ಸಾಮರ್ಥ್ಯದ ಎರಡು ವಿಧದ ಒಟ್ಟು 20 ಸಿಲಿಂಡರ್‌ಗಳು ಕೇಂದ್ರದಲ್ಲಿ ಸದಾ ದಾಸ್ತಾನಿರಲಿದೆ.
ರೋಗಿಗೆ ಆಕ್ಸೀಜನ್ ಅಗತ್ಯವಿದೆ ಎಂದಾಗ ಕೇಂದ್ರದ ಫೋನ್ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಂಡು ಸಿಲಿಂಡರ್‌ನ್ನು ತೆಗೆದುಕೊಂಡು ಹೋಗಿ ವೈದ್ಯರ ಸಲಹೆ ಮೆರೆಗೆ ಆಕ್ಸಿಜನ್ ಬಳಕೆ ಮಾಡಬೇಕು. ಇಲ್ಲದಿದ್ದಲ್ಲಿ ತುರ್ತು ಪರಿಸ್ಥಿತಿ ಅವ ಧಿಯಲ್ಲಿ ರೈಲು ನಿಲ್ದಾಣದ ಜಿಆರ್‌ಪಿ ಪೊಲೀಸ್ ಸಿಬ್ಬಂದಿಗಳೇ ಆಕ್ಸಿಜನ್ ಸಿಲಿಂಡರ್‌ನ್ನು ತಂದು ವೈದ್ಯರ ಸೂಚನೆ ಮೇರೆಗೆ ನಿಮಿಷಕ್ಕೆ ಇಂತಿಷ್ಟು ಆಕ್ಸಿಜನ್‌ನ್ನು ನೀಡಿ ತೆರಳಲಿದ್ದಾರೆ. ಆದರೆ ಸಿಲಿಂಡರ್‌ನ್ನು ವಾಪಸ್ ಕೊಂಡೊಯ್ಯುವಾಗ ಆಲ್ಕೋಹಾಲ್ ಸ್ಯಾನಿಟೈಸರ್ ಬದಲಿಗೆ ನೀರು ಸಹಿತ ಸ್ಯಾನಿಟೈಸರ್‌ನ್ನು ಸಿಂಪಡಿಸಿ ನೀಡಬೇಕು ಎಂದವರು ತಿಳಿಸಿದರು.
ಸೋಂಕಿತರಿಗೆ ಮನೆಗಳಲ್ಲೇ ಆಕ್ಸಿಜನ್ ನೀಡುವಾಗ ಮನೆ ಬಾಗಿಲು ತೆರೆದಿರಬೇಕು. ಕಿಟಕಿ, ವೆಂಟಿಲೇಷನ್ ಸಹ ತೆರೆದಿರಬೇಕು ಎಂದವರು ವಿವರಿಸಿದರು. ಬಳಿಕ ಪೊಲೀಸ್ ಸಿಬ್ಬಂದಿಗಳಾದ ಕರಿಯಣ್ಣ ಸೇರಿ ಹಲವರಿಗೆ ಆಕ್ಸಿಜನ್ ಸಿಲಿಂಡರ್ ಬಳಕೆ ಕುರಿತು ತರಬೇತಿ ನೀಡಲಾಯಿತು. ಇದಕ್ಕೂ ಮುನ್ನ ರೈಲ್ವೆ ಪೊಲೀಸ್ ಇಲಾಖೆಯ ಕಲುºರ್ಗಿ ಡಿವೈಎಸ್‌ಪಿ ವೆಂಕನಗೌಡ ಪಾಟೀಲ್ ಮಾತನಾಡಿದರು.
ರಾಯಚೂರು ವಿಭಾಗದ ಸಿಪಿಐ ಜನಗೌಡ, ಫೌಂಡೇಷನ್‌ನ ಅಜಯ್ ಪ್ರತಾಪ್ ಸಿಂಗ್ ಸೇರಿ ಹಲವರು ಇದ್ದರು.