ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ 150 ದಿನ ಕೆಲಸ, ವಾರಕ್ಕೊಮ್ಮೆ ಕೂಲಿ ಪಾವತಿಸಬೇಕೆಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆಯು ಎಸ್‌ಯುಸಿಐಸಿ ಪಕ್ಷದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ಹಲವಾರು ಕುಟುಂಬಗಳು ಬದುಕುತ್ತಿವೆ. ಇವರಿಗೆ ಕೃಷಿ-ಜಮೀನುಗಳಲ್ಲಿ ನಿರಂತರ ಕೆಲಸ ಇರುವುದಿಲ್ಲ. ಆದ್ದರಿಂದ ಇವರು ಉದ್ಯೋಗ ಖಾತ್ರಿ ಯೋಜನೆ ಮೇಲೆ ಅವಲಂಬನೆಯಾಗಿದ್ದಾರೆ. ಜೀವನ ವೆಚ್ಚ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಅವರಿಗೆ ಕನಿಷ್ಠ ದಿನಗೂಲಿ 300 ರೂ. ನೀಡಬೇಕು ಹಾಗೂ ವರ್ಷಕ್ಕೆ 150 ದಿನಗಳು ಉದ್ಯೋಗ ಕಲ್ಪಿಸಬೇಕು. ಆಗ ಮಾತ್ರ ಇವರು ನೆಮ್ಮದಿಯಾಗಿ ಬದಕಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕದಲ್ಲಿ ಒಟ್ಟು 160 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು ಅದರಲ್ಲಿ ಬಳ್ಳಾರಿ ತಾಲೂಕು ಒಂದು. ಅಲ್ಲದೇ ಇಂದಿನ ದುಬಾರಿ ದಿನಗಳಲ್ಲಿ ರೈತರು ತಮ್ಮ ಜೀವನ ನಡೆಸುವುದ್ದೇ ಕಷ್ಟಕರವಾಗಿದೆ. ಮಕ್ಕಳನ್ನು ಪೋಷಿಸಲಾಗುತ್ತಿಲ್ಲ. ಲಕ್ಷಾಂತರ ರೂ. ತೆತ್ತು ಬೆಳೆಗಳನ್ನು ಬೆಳೆದು ದಲ್ಲಾಳಿಗಳ ಹೊಟ್ಟೆ ತುಂಬಿಸುವಂತಾಗುತ್ತಿದೆ. ಇನ್ನೊಂದೆಡೆ ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡದಿರುವುದರಿಂದ ರೈತರು ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಮತ್ತೂಂದೆಡೆ ಕೃಷಿ ಕಾರ್ಮಿಕರಿಗೆ ಕುಟುಂಬದ ನಿರ್ವಾಹಣೆಗೆ ಉದ್ಯೋಗ ಖಾತ್ರಿ ಕೆಲಸವೇ ಗತಿಯಾಗಿದೆ. ಆದ್ದರಿಂದ ಖಾತ್ರಿ ಯೋಜನೆಯಡಿ ದಿನಕ್ಕೆ 300 ರೂ. ಕನಿಷ್ಠ ವೇತನ ನಿಗದಿಪಡಿಸಬೇಕು. ಮುಂಚಿತವಾಗಿಯೇ ಎನ್‌ಎಂಆರ್ ಸಿದ್ಧಪಡಿಸಿ ತ್ವರಿತವಾಗಿ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು. ಪ್ರತಿ ವ್ಯಕ್ತಿಗೆ ವರ್ಷಕ್ಕೆ 150 ದಿನಗಳ ಕಾಲ ಉದ್ಯೋಗ ನೀಡಬೇಕು. ವಾರಕ್ಕೊಮ್ಮೆ ಕೂಲಿ ಪಾವತಿಸಬೇಕು. ವಿವಿಧ ಬೇಡಿಕೆ ಈಡೇರಿಸುವ ಮೂಲಕ ರೈತರ ಬವಣೆ ನೀಗಿಸಲು ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಆರ್‌ಕೆಎಸ್ ಜಿಲ್ಲಾ ಕಾರ್ಯದರ್ಶಿ ಈ.ಹನುಮಂತಪ್ಪ, ಎಸ್‌ಯುಸಿಐಸಿ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಎ.ದೇವದಾಸ್, ಪದ್ಮ, ನಾಗರತ್ನ, ಶೇಖರ್, ಹನುಮಂತ, ಪಂಪಾಪತಿ, ಹೊನ್ನಳ್ಳಿ, ಹುಲಿಗೆಮ್ಮ, ಪೆನ್ನೋಬಳೇಶ, ಗೋವಿಂದ, ರವಿಕಿರಣ್, ಗ್ರಾಮದ ನೂರಾರು ಕೃಷಿ ಕಾರ್ಮಿಕರು ಇದ್ದರು.