ಚಿಕ್ಕಮಗಳೂರು: ಹಚ್ಚ ಹಸಿರಿನ ಪ್ರಕೃತಿಯ ನಡುವಿನ ಸುಂದರ ಹಾಗೂ ಚಾರಿತ್ರಿಕರಮ್ಯ ತಾಣ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗದ ಕೋಟೆ. ಪ್ರತಿ ಪ್ರವಾಸಿಗರಿಗೂ ಸವಾಲೆಸೆಯುವ ದುರ್ಗಮ ತಾಣ.
ಇಲ್ಲಿನ ಪ್ರಾಚೀನ ಗತವೈಭವ ವಿಶೇಷತೆ ಕಳೆದುಕೊಂಡಿದ್ದರೂ ನಿಸರ್ಗದ ಚೆಲುವು ಮಾತ್ರ ಇನ್ನೂ ಮಾಸಿಲ್ಲ. ಪ್ರಕೃತಿ ಹಾಗೂ ಚಾರಣ ಪ್ರಿಯರನ್ನು ಬಾ ಎಂದು ಕೈಬೀಸಿ ಕರೆಯುತ್ತಿರುವ ಇಲ್ಲಿನ ಸೌಂದರ್ಯ ಪ್ರವಾಸಿಗರು ಹಾಗೂ ಟ್ರೆಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್. ಆ ಸುಂದರ ರಮಣೀಯ ತಾಣವೇ ಬಲ್ಲಾಳರಾಯನ ದುರ್ಗದ ಕೋಟೆ.
ಪ್ರವಾಸಿಗರಿಗೆ ಸವಾಲೆಸೆಯೋ ನಿಸರ್ಗದ ಮಡಿಲು:
ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣೋ ನೈಜ ಸ್ವರ್ಗದ ಚೆಲುವು. ದಿಟ್ಟಿಸಿ ನೋಡಿದರೆ ಕೊನೆಯೇ ಇಲ್ಲವೆಂಬಂತೆ ಕಾಣೋ ಕೋಟೆಯ ಬೃಹತ್ ಗಾತ್ರದ ಗೋಡೆ. ಪ್ರತಿ ಹೆಜ್ಜೆಯಲ್ಲೂ ಪ್ರವಾಸಿಗರಿಗೆ ಸವಾಲೆಸೆಯೋ ನಿಸರ್ಗದ ಮಡಿಲು.
ಹೌದು… ಇದು ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಬಲ್ಲಾಳರಾಯನ ದುರ್ಗದ ಕೋಟೆ. ಮೂಡಿಗೆರೆ ತಾಲೂಕಿನಲ್ಲಿರುವ, ರುದ್ರ ರಮಣೀಯವಾಗಿ ಕಾಣುವ ಈ ತಾಣವನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರ್ತಾರೆ.
ಅದರಲ್ಲೂ ಟ್ರೆಕ್ಕಿಂಗ್ ಪ್ರಿಯರಿಗಂತೂ ಬಲ್ಲರಾಯನ ಕೋಟೆ ಹತ್ತುವುದೆಂದರೆ ಎಲ್ಲಿಲ್ಲದ ಉತ್ಸಾಹ… ಸವಾಲು… ದುರ್ಗದ ಹಳ್ಳಿಯ ಎಂಡ್ ಪಾಯಿಂಟ್ ನಲ್ಲಿ ವಾಹನ ನಿಲ್ಲಿಸಿ ಅರ್ಧ ಕಿ.ಮೀ. ಸಾಗಿದ್ರೆ ಅಬ್ಬಾ… ಎಂದು ಕಣ್ಣಿಗೆ ಅಪ್ಪಳಿಸುವ ವೀವ್ ಪಾಯಿಂಟ್.
ಈ ಜಾಗದಲ್ಲಿ ನಿಂತು ನೋಡಿದ್ರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವವಾಗುತ್ತದೆ. ಸುತ್ತಲಿನ ಹಚ್ಚ ಹಸಿರಿನ ವನರಾಶಿ ಮತ್ತೊಂದು ಲೋಕಕ್ಕೆ ಕೊಂಡೊಯ್ಯುವಂತಿದೆ. ಇಲ್ಲಿಗೆ ಬರುವ ಪ್ರವಾಸಿಗರು ವಿವಿಧ ರೀತಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಈ ಕ್ಷಣವನ್ನು ಆನಂದಿಸುತ್ತಾ, ನಿಸರ್ಗದ ಮಡಿಲಲ್ಲಿ ಕುಣಿದು ಕುಪ್ಪಳಿಸುತ್ತಾರೆ.
ಗತ ವೈಭವ ಸಾರುವ ಬೃಹದಾಕಾರವಾದ ಗೋಡೆಗಳು:
ಒಂದನೇ ಬಲ್ಲಾಳರಾಯ, ರಕ್ಷಣಾ ಕೋಟೆಯನ್ನಾಗಿ ಈ ಕೋಟೆ ರಚಿಸಿದ್ದನೆಂಬ ಇತಿಹಾಸವಿದೆ. ಗತ ವೈಭವವನ್ನು ಸಾರುವ ಕಲ್ಲಿನಿಂದ ನಿರ್ಮಾಣ ಮಾಡಲಾಗಿರುವ ಈ ಬೃಹದಾಕಾರವಾದ ಗೋಡೆಗಳು ಇಂದಿಗೂ ಅಚ್ಚರಿ ಮೂಡಿಸುತ್ತವೆ. ಕಣ್ಣು ಹಾಯಿಸಿದಷ್ಟು ದೂರ ಗೋಚರಿಸುವ ಹಸಿರ ಪರ್ವತ ರಾಶಿ ಪ್ರವಾಸಿಗರ ಮನಸೂರೆ ಗೊಳಿಸುವುದರ ಜೊತೆಗೆ ಇಲ್ಲಿನ ಪ್ರಪಾತ ಗಟ್ಟಿ ಗುಂಡಿಗೆಯನ್ನು ಒಮ್ಮೆ ನಡುಗಿಸುತ್ತೆ.
ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ಸುತ್ತಲಿನ ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸಿದ್ರೆ, ಪರ್ವತಗಳ ನಡುವಿನ ಮಂಜು ಮುಸುಕಿದ ನೋಟ ಪ್ರವಾಸಿಗರನ್ನು ನಿಬ್ಬೆರಗುಗೊಳಿಸುತ್ತೆ. ವರ್ಷ ಪೂರ್ತಿ ಧುಮ್ಮಿಕ್ಕುವ ಇಲ್ಲಿನ ರಾಣಿ ಜಲಪಾತವನ್ನು ನೋಡುವುದೇ ಪ್ರವಾಸಿಗರಿಗೆ ಎಲ್ಲಿಲ್ಲದ ಖುಷಿ.
ಒಟ್ಟಾರೆ, ಬಲ್ಲಾಳರಾಯನ ದುರ್ಗದ ಕೋಟೆಯ ವೀವ್ ಪಾಯಿಂಟ್, ರಾಣಿ ಝರಿ ನೋಟ, ಒಂದೊಂದು ದಿಕ್ಕಲ್ಲೂ ಒಂದೊಂದು ರೀತಿ ಮನೋಜ್ಞವಾಗಿ ಕಾಣ್ತಿದೆ. ಮಳೆಗಾಲದ ಮಂಜು, ರಾಣಿ ಝರಿಗೆ ಮುತ್ತಿಕ್ಕುತ್ತಿದ್ದರೆ ನೋಡುಗನ ಕಣ್ಣಿಗೆ ಹಬ್ಬ. ಆದರೆ, ಬೇಸಿಗೆಯಲ್ಲಿ ಈ ರಾಣಿ ಝರಿಯ ನೋಟ ಪ್ರವಾಸಿಗರ ಎದೆಯನ್ನು ಝಲ್ ಎನಿಸುತ್ತೆ. ಅದೇನೆ ಇದ್ರು, ಇಲ್ಲಿನ ಟ್ರಕ್ಕಿಂಗ್, ಪ್ರಕೃತಿ ಸೌಂದರ್ಯ ಎಲ್ಲವೂ ಅದ್ಭುತವೇ ಸರಿ.