ಇನ್ನೂ ಶಾಲೆಯ ಹೆಜ್ಜೆ ತುಳಿಯದ ಮಕ್ಕಳಿಂದ ಹಿಡಿದು ಅರುವತ್ತು ದಾಟಿದ ವೃದ್ಧರವರೆಗೆ ಇಲ್ಲಿ ಗೆಜ್ಜೆಕಟ್ಟಿ ಹೆಜ್ಜೆಹಾಕುತ್ತಾರೆ. ಯಕ್ಷಗಾನದ ಗಂಧ ಗಾಳಿ ಇಲ್ಲದ ದೂರದ ಸಾಣೆಹಳ್ಳಿ ನಾಟಕ ಕೇಂದ್ರದ ಮಕ್ಕಳು ವಾರಗಟ್ಟಲೆ ನಿಂತು ತರಬೇತಿ ಪಡೆದು ಸೊಗಸಾಗಿ ಯಕ್ಷಗಾನ ಪ್ರದರ್ಶಿಸುತ್ತಾರೆ. ಕನ್ನಡವೇ ಗೊತ್ತಿರದ ದಿಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಾದ ದೇಶದ ಅನ್ಯಾನ್ಯ ರಾಜ್ಯದ ಮಕ್ಕಳು ಪಂಚವಟಿ ಪ್ರಸಂಗವನ್ನು ಹಿಂದಿಯಲ್ಲಿ ಆಡಿ ತೋರಿಸುತ್ತಾರೆ. ಇದೆಲ್ಲ ಸಾಧ್ಯವಾಗಿರುವುದು ಯಕ್ಷಗಾನಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ರಾಜ್ಯಪ್ರಶಸ್ತಿ ಪುರಸ್ಕೃತ ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದ ಇಂದ್ರಾಳಿಯ ಶಿವಪ್ರಭಾ ಯಕ್ಷಗಾನ ಕೇಂದ್ರದಲ್ಲಿ. ಇದು ಆಸಕ್ತರಿಗೆ ಉಚಿತ ಯಕ್ಷಗಾನ ತರಬೇತಿ ನೀಡುವ ಯಕ್ಷವಿದ್ಯಾ ಗುರುಕುಲ. ಪ್ರಸ್ತುತ ಪ್ರೊ| ಹೆರಂಜೆ ಕೃಷ್ಣ ಭಟ್ ಕೇಂದ್ರದ ನಿರ್ದೇಶಕರು.
ನಾಲ್ಕೂವರೆ ದಶಕಗಳ ಹಿಂದೆ 1971ರಲ್ಲಿ ಪ್ರೊ| ಕು. ಶಿ. ಹರಿದಾಸ ಭಟ್ಟರ ಪ್ರಯತ್ನದಿಂದ ಮಣಿಪಾಲ ಅಕಾಡೆಮಿ ಯಕ್ಷಗಾನ ಕಲಿಕಾ ಕೇಂದ್ರ ಸ್ಥಾಪಿಸಿತು. ಯಕ್ಷಗಾನಕ್ಕೆ ಹೊಸ ಆಯಾಮ ಕಲ್ಪಿಸಿದ ಡಾ| ಕೋಟ ಶಿವರಾಮ ಕಾರಂತರು ಈ ಕೇಂದ್ರವನ್ನು ಉದ್ಘಾಟಿಸಿದ್ದಲ್ಲದೆ ಮುಂದೆ 1983ರಿಂದ ತಮ್ಮ ಬದುಕಿನ ಕೊನೆಯವರೆಗೆ ಇದರ ನಿರ್ದೇಶಕರಾಗಿ ಹೊಸ ಪ್ರಯೋಗಗಳ ಆವಿಷ್ಕಾರದೊಂದಿಗೆ ಕೇಂದ್ರವನ್ನು ಮುನ್ನಡೆಸಿದರು. ವೀರಭದ್ರ ನಾಯಕ, ನೀಲಾವರ ರಾಮಕೃಷ್ಣ ರಾವ್, ಮಹಾಬಲ ಕಾರಂತ, ಹಿರಿಯಡ್ಕ ಗೋಪಾಲ ರಾವ್, ಗೋರ್ಪಾಡಿ ವಿಠuಲ ಪಾಟೀಲ್ ಮೊದಲಾದ ಹಿರಿಯ ಗುರುಗಳ ನೇತೃತ್ವದಲ್ಲಿ ದೊಡ್ಡ ಗುರು ಪರಂಪರೆ, ಪರಂಪರೆಯ ಕಲೆಯನ್ನು ಕಲಿಸುವ ಕಾಯಕ ನಿರಂತರ ಮುಂದುವರೆಸಿಕೊಂಡು ಬಂದಿದೆ. ಗುರುಕುಲ ಮಾದರಿಯಲ್ಲಿ ಇಲ್ಲಿ ಯಕ್ಷಶಿಕ್ಷಣ ನೀಡಲಾಗುತ್ತಿದೆ.
ಹಿಂದೆ ಇಲ್ಲಿಯೇ ವಾಸವಿದ್ದು ಯಕ್ಷಗಾನವನ್ನು ಮಾತ್ರ ಕಲಿಯುತ್ತಿದ್ದರು. ಈಗ ಯಕ್ಷಗಾನಾಸಕ್ತ ಮಕ್ಕಳನ್ನು ದತ್ತು ತೆಗೆದುಕೊಂಡು ಶಾಲೆಯ ವೇಳೆಯಲ್ಲಿ ಅವರಿಗೆ ಪ್ರಾಥಮಿಕ, ಪ್ರೌಢಶಿಕ್ಷಣಕ್ಕೆ ಅವಕಾಶ ಕಲ್ಪಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮತ್ತು ರಜಾದಿನಗಳಲ್ಲಿ ಯಕ್ಷಗಾನ ತರಬೇತಿ ಕೊಡುತ್ತಿದೆ. ಅವರಿಗೆ ವಾಸ್ತವ್ಯ, ಊಟ, ಬಟ್ಟೆ ಇತ್ಯಾದಿ ಎಲ್ಲ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಪ್ರಸಕ್ತ 47 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದರ ಹೊರತಾಗಿ ರಜಾದಿನಗಳಲ್ಲಿ ಬಂದು ಯಕ್ಷಗಾನ ಕಲಿಯುವ ನೂರಾರು ಆಸಕ್ತರು ಇದ್ದಾರೆ. ಬೇಸಿಗೆ ರಜೆಯಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಾತ್ತಿದೆ. ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಪ್ರಸಿದ್ಧ ಕಲಾವಿದರಾಗಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
1975ರಲ್ಲಿ ಪ್ರದರ್ಶನ ಕೊಡುವುದಕ್ಕೆ ಯಕ್ಷರಂಗವೆಂಬ ಪ್ರತ್ಯೇಕ ಘಟಕ ಸ್ಥಾಪಿಸಿ ನಿರ್ದೇಶನಕ್ಕೊಳಪಟ್ಟ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ರಾಮಾಯಣ, ಮಹಾಭಾರತದ ಇಪ್ಪತ್ತೆçದಕ್ಕೂ ಹೆಚ್ಚು ಪ್ರಸಂಗಗಳನ್ನು ಸಮಯಮಿತಿಗೆ ಅಡಕಗೊಳಿಸಿ ಅದರ ನೂರಾರು ಪ್ರದರ್ಶನಗಳನ್ನು ಕರ್ನಾಟಕ, ಹೊರರಾಜ್ಯ, ಹೊರದೇಶ ಗಳಲ್ಲಿ ಪ್ರದರ್ಶಿಸಿ ಕಲೆಯನ್ನು ವಿಸ್ತರಿಸುವ ಕೆಲಸ ಮಾಡು ತ್ತಿದೆ. 1981ರಲ್ಲಿ ಆರಂಭಗೊಂಡ ವಿದೇಶ ಜೈತ್ರಯಾತ್ರೆ ನಿರಂತರ ಮುಂದುವರಿದುಕೊಂಡು ಬಂದಿದೆ. ಈವರೆಗೆ 28 ಬೇರೆ ಬೇರೆ ರಾಷ್ಟ್ರಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಹಿರಿಮೆಗೆ ಸಂಸ್ಥೆ ಭಾಜನವಾಗಿದೆ. ಹೊರದೇಶದವರು ಇಲ್ಲಿ ಬಂದು ಯಕ್ಷಗಾನ ಕಲಿತಿದ್ದಿದೆ. ಇಲ್ಲಿಯ ಗುರುಗಳು ಹೊರದೇಶಕ್ಕೆ ಹೋಗಿ ಯಕ್ಷಗಾನ ಕಲಿಸಿದ್ದಿದೆ. ಹೀಗೆ ಸಾಂಸ್ಕೃತಿಕ ರಾಯಭಾರಿತ್ವ ಕೇಂದ್ರದ ಇನ್ನೊಂದು ಸಾಧನೆ.
ಸಾಧನೆಗೆ ಅರ್ಹವಾಗಿಯೇ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಂಸ್ಥೆಯನ್ನರಸಿ ಬಂದಿವೆ. ಜನವರಿ 21ರಂದು ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವದಂದು ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ ಉಡುಪಿ ಯಕ್ಷಗಾನ ಕೇಂದ್ರದ ಕಿರೀಟ ಸೇರಲಿರುವ ಮತ್ತೂಂದು ತುರಾಯಿ.
ನಾರಾಯಣ ಎಂ. ಹೆಗಡೆ