ನವದೆಹಲಿ: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ ಕ್ಯಾಂಪಸ್ ನಿರ್ಮಾಣದ ರೂವಾರಿ, ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿ (94) ಅವರನ್ನು ಪ್ರತಿಷ್ಠಿತ “ರಾಯಲ್ ಗೋಲ್ಡ್ ಮೆಡಲ್ 2022′ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಈ ಗೌರವ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಇರುವ ಅತ್ಯುನ್ನತ ಗೌರವವಾಗಿದೆ.
ಜೋಷಿ ಅವರ ಜೀವಿತಾವಧಿಯ ಸಾಧನೆಯನ್ನು ಪರಿಗಣಿಸಿ ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಗೌರವ ಪ್ರದಾನ ಮಾಡಲಾಗುತ್ತದೆ.
ದೇಶಾದ್ಯಂತ ಅವರು ರೂಪಿಸಿ, ನಿರ್ಮಿಸಿದ 100 ಯೋಜನೆಗಳಲ್ಲಿನ ವಿನೂತನ ಅಂಶವನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು, ಜೋಷಿ ಅವರಿಗೆ ಪ್ರತಿಷ್ಠಿತ ಗೌರವ ಸಂದಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ಜಗತ್ತಿನ ವಾಸ್ತುಶಿಲ್ಪ ಕ್ಷೇತ್ರಕ್ಕೆ ಬಾಲಕೃಷ್ಣ ಜೋಷಿ ಅವರ ಕೊಡುಗೆ ಅಪಾರ. ಅವರು ಅನುಷ್ಠಾನಗೊಳಿಸಿದ ಯೋಜನೆಗಳಿಗೆ ಭಾರಿ ಮೆಚ್ಚುಗೆ ಇದೆ ಮತ್ತು ಪರಿಸರಪರವಾಗಿಯೇ ಅವರ ವಿನ್ಯಾಸಗಳು ಇವೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಜಧನ ಬಿಡುಗಡೆಗೆ ಆಗ್ರಹಿಸಿ ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರ!
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋಷಿ, “ಆರು ದಶಕಗಳ ಹಿಂದೆ ನನ್ನ ಗುರು ಲಿ ಕೋರ್‌ಬ್ಯುಸೆರ್ ಅವರಿಗೂ ಇದೇ ಗೌರವ ಸಂದಿತ್ತು. ಈಗ ನನಗೂ ಅದು ಸಿಕ್ಕಿದೆ. ಖುಷಿಯಾಗಿದೆ’ ಎಂದಿದ್ದಾರೆ.