Advertisement

24 ಹಳ್ಳಿಗಳಿಗೆ ಟ್ಯಾಂಕರ್‌ನೀರು

10:39 AM Jul 18, 2019 | Naveen |

ಭಾಲ್ಕಿ: ಮುಂಗಾರು ಹಂಗಾಮು ಆರಂಭವಾಗಿ ಸುಮಾರು 46 ದಿನಗಳು ಕಳೆದರೂ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ವಾಡಿಕೆಯಂತೆ ಮಳೆಯಾಗದೇ ನೀರಿನ ಸಮಸ್ಯೆ ಮಳೆಗಾಲದಲ್ಲೂ ತೀವ್ರವಾಗಿ ಕಾಡುತ್ತಿದೆ.

Advertisement

ತಾಲೂಕಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಬೇಸಿಗೆಯಲ್ಲಿ ಆರಂಭಿಸಲಾಗಿದ್ದ ಟ್ಯಾಂಕರ್‌ ನೀರು ಇಂದಿಗೂ ಮುಂದುವರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಅಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಿನ 24 ಗ್ರಾಮಗಳಿಗೆ 32 ಟ್ಯಾಂಕರ್‌ಗಳಿಂದ ದಿನಕ್ಕೆ 140 ಟ್ರಿಪ್‌ ನೀರು ಪೂರೈಸಲಾಗುತ್ತಿದೆ.

ತಾಲೂಕಿನ ಚಳಕಾಪುರ, ಚಳಕಾಪುರ ವಾಡಿ, ಹರಿವಾಡಿ, ಯೆಲ್ಲಮ್ಮ ವಾಡಿ, ಹಲಬರ್ಗಾ, ತೆಗಂಪುರ, ತರನಳ್ಳಿ, ಅಂಬೆಸಾಂಗವಿ, ಜೊಳದಪಕಾ, ಖಟಕಚಿಂಚೋಳಿ, ಭಾತಂಬ್ರಾ, ಮೆಹಕರ, ಧನ್ನೂರಾ(ಎಸ್‌), ನೆಳಗಿ, ಕೋನಮೆಳಕುಂದಾ, ರುದನೂರ, ತೆಲಗಾಂವ, ತಳವಾಡ, ಕಣಜಿ, ಕರಡ್ಯಾಳ ಸೇರಿದಂತೆ ಸುಮಾರು 24 ಗ್ರಾಮಗಳಿಗೆ ಇದುವರೆಗೂ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ ಎಂದು ತಹಶೀಲ್ದಾರ್‌ ಅಣ್ಣಾರಾವ ಪಾಟೀಲ ತಿಳಿಸಿದ್ದಾರೆ.

ಗ್ರಾಮಗಳಲ್ಲದೇ ಪಟ್ಟಣದಲ್ಲಿಯೂ ಕುಡಿಯುವ ನೀರಿನ ತೊಂದರೆ ವಿಪರೀತವಾಗಿ ಕಾಡುತ್ತಿದೆ. ಪಟ್ಟಣದಲ್ಲಿ ಪ್ರತಿನಿತ್ಯ 75 ಟ್ಯಾಂಕರ್‌ಗಳ ಮೂಲಕ 27 ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿದೆ ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ತಿಳಿಸಿದ್ದಾರೆ.ಮಳೆಗಾಲ ಪ್ರಾರಂಭವಾಗಿ ಸುಮಾರು ಒಂದೂವರೆ ತಿಂಗಳು ಗತಿಸಿದರೂ ಕುಡಿಯಲು ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಹೀಗೆ ಮುಂದುವರಿದರೆ ಜನ ಜಾನುವಾರಗಳ ಪಾಡೇನು? ಸರಕಾರ ಜನರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತದೆ. ಆದರೆ ಜಾನುವಾರುಗಳ ಗತಿ ಏನು ಎಂಬ ಪ್ರಶ್ನೆ ಎದುರಾಗಿದೆ.

ಕಳೆದ ಸಾಲಿನ ಜೂನ್‌ನಲ್ಲಿ ಸಾಕಷ್ಟು ಮಳೆಯಾಗಿ ಹಳ್ಳ ಕೊಳ್ಳಗಳು ತುಂಬಿ ನದಿಗೆ ನೀರು ಬಂದಿತ್ತು. ಆದರೆ ಈ ವರ್ಷ ಇನ್ನೂ ಬೇಸಿಗೆಯಂತೆಯೇ ಇದೆ. ಹೀಗಾಗಿ ಪಟ್ಟಣದ ಕುಡಿಯುವ ನೀರಿನ ಮೂಲ ದಾಡಗಿ ಹತ್ತಿರದ ಕಾರಂಜಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ಪಟ್ಟಣದಲ್ಲಿ ಇದುವರೆಗೂ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್‌ ನೀರು ಬರುವವರೆಗೆ ಪಟ್ಟಣದ ನಾಗರಿಕರು ಕೊಡ ಹಿಡಿದು ಕಾಯುವಂತಾಗಿದೆ. ಆದಷ್ಟು ಬೇಗ ಸತತ ಮಳೆ ಸುರಿದು ತಾಲೂಕಿನ ಜನರ ನೀರಿನ ದಾಹ ತಣಿಸುವುದೋ ಆ ದೇವರೇ ಬಲ್ಲ.

Advertisement

ಪ್ರತಿನಿತ್ಯ ಮುಗಿಲಿಗೆ ಮುಖಮಾಡಿ ಮಳೆಗಾಗಿ ದೇವರನ್ನು ನೆನೆಸುವುದೇ ನಮ್ಮ ಕಾಯಕವಾಗಿದೆ ಎನ್ನುತ್ತಾರೆ ಹಲಬರ್ಗಾ ಗ್ರಾಮದ ನಿವಾಸಿ ಸುರೇಶ ಪ್ರಭಾ.

Advertisement

Udayavani is now on Telegram. Click here to join our channel and stay updated with the latest news.

Next